ಎಣ್ಣೆ ಮತ್ತಲ್ಲಿ ಐವರು ಪೊಲೀಸರ ಅಟ್ಟಹಾಸ...; ಮಹಿಳಾ ಅಧಿಕಾರಿಯಿಂದ ದೂರು, ಎಲ್ಲರೂ ಜೈಲುಪಾಲು

Police
Published on

ಪಂಜಾಬ್​ ಪೊಲೀಸರು ತಮ್ಮ ಇಲಾಖೆಯ ಐವರು ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಅದೂ ಅಬಕಾರಿ ಮಹಿಳಾ ಅಧಿಕಾರಿಯ ಮೇಲೆ ದೌರ್ಜನ್ಯ ಎಸಗಿದ್ದಕ್ಕೆ...!

ಈ ಪ್ರಕರಣದಲ್ಲಿ ಒಟ್ಟು ಆರು ಮಂದಿ ಆರೋಪಿಗಳಿದ್ದಾರೆ. ಅವರಲ್ಲಿ ಐವರು ಪೊಲೀಸರು. ಮಹಿಳಾ ಅಧಿಕಾರಿಯ ಮೇಲೆ ದೌರ್ಜನ್ಯ ಎಸಗಿದ್ದಲ್ಲದೆ, ಅವರ ಹತ್ತಿರದ ಸಂಬಂಧಿಯೋರ್ವನನ್ನು ಶೂಟ್​ ಮಾಡಿ ಕೊಂದಿದ್ದಾರೆ. ಅಬಕಾರಿ ಅಧಿಕಾರಿ ಅಮರ್​ಪ್ರೀತ್​ ಕೌರ್​ ದೂರಿನ ಅನ್ವಯ ಇದೀಗ ಆರೂ ಮಂದಿಯೂ ಜೈಲುಪಾಲಾಗಿದ್ದಾರೆ.

ಅಮೃತ್​​ಸರ ಟ್ರಾಫಿಕ್​ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​​ಗಳಾದ ರಂಜೀತ್​ ಸಿಂಗ್​, ಬಲಜೀತ್​ ಸಿಂಗ್​, ಕಾನ್​​ಸ್ಟೆಬಲ್​​ಗಳಾದ ಅವತಾರ್​ ಸಿಂಗ್​, ಬಲ್ಕರ್​ ಸಿಂಗ್​ ಹಾಗೂ ಮುಖ್ಯಮಂತ್ರಿ ಅಮರಿಂದರ್ ಸಿಂಗ್​ ಅವರ ಭದ್ರತಾ ತಂಡದಲ್ಲಿ ಇದ್ದ ಕಾನ್​​ಸ್ಟೆಬಲ್​ ಸುರಿಂದರ್ ಸಿಂಗ್​ ಆರೋಪಿಗಳು. ಇವರೊಂದಿಗೆ ಸಿಮ್ರತ್​ ಸಿಂಗ್​ ಎಂಬಾತನೂ ಕ್ರೈಂನಲ್ಲಿ ಭಾಗಿಯಾಗಿದ್ದಾನೆ. ಇದನ್ನೂ ಓದಿ: ‘ಡ್ರಗ್ಸ್​ ಮಾಫಿಯಾಕ್ಕೆ ಸಿಲುಕಿ ನಮ್ಮ ಮಕ್ಕಳು ಹಾಳಾಗಿಬಿಡ್ತವೆ…’ ಎಂದ ಹಿರಿಯ ರಾಜಕಾರಣಿ

ಮಹಿಳಾ ಅಧಿಕಾರಿ ಅಮರ್​ಪ್ರೀತ್​ ಕೌರ್​ ಅವರು ಭಾನುವಾರ ತನ್ನ ವಾಹನದಲ್ಲಿ ಬಟಾಲಾದ ಭಗವಾನ್​​ಪುರಕ್ಕೆ ತೆರಳುತ್ತಿದ್ದಾಗ ಈ ಆರೂ ಮಂದಿ ಎರಡು ಕಾರುಗಳಲ್ಲಿ ಬೆನ್ನಟ್ಟಿ ಹೋಗಿದ್ದಾರೆ. ಈ ಬಗ್ಗೆ ಕೌರ್​ ದೂರಿನಲ್ಲಿ ಉಲ್ಲೇಖಿಸಿದ್ದು, ಎಲ್ಲರೂ ಮದ್ಯಪಾನ ಮಾಡಿದ್ದರು ಎಂದೂ ತಿಳಿಸಿದ್ದಾರೆ.

ಕೌರ್​ ಅವರು ಭಗವಾನ್​ಪುರ ಗ್ರಾಮಕ್ಕೆ ಹೋಗುವ ತಿರುವಿನಲ್ಲಿ ಗಾಡಿ ತಿರುಗಿಸಿದ ನಂತರವೂ ಇವರೆಲ್ಲರೂ ಹಿಂಬಾಲಿಸಿಕೊಂಡು ಹೋಗಿದ್ದಾರೆ. ನಂತರ ಮಹಿಳಾ ಅಧಿಕಾರಿಯ ವಾಹನವನ್ನು ಅಡ್ಡಗಟ್ಟಿ, ಆಕೆಯನ್ನು ನಿಂದಿಸಿದ್ದಾರೆ. ನಾನೂ ಒಬ್ಬಳು ಸರ್ಕಾರಿ ಅಧಿಕಾರಿ ಎಂದು ಕೌರ್​ ಹೇಳಿದರೂ ಅವರು ಕೇಳಿಸಿಕೊಳ್ಳಲಿಲ್ಲ. ಪೊಲೀಸರ ದೌರ್ಜನ್ಯ ಹೆಚ್ಚಾಗುತ್ತಿದ್ದಂತೆ ಕೌರ್​ ತನ್ನ ಬಾವನನ್ನು ಸಹಾಯಕ್ಕೆ ಕರೆದಿದ್ದಾರೆ. ಇದನ್ನೂ ಓದಿ: VIDEO: ಮಹಿಳೆಯ ಹೊಟ್ಟೆ ಸೇರಿದ್ದ ಹಾವನ್ನು ಬಾಯಿಯ ಮೂಲಕ ಹೊರಗೆ ಎಳೆದ ವೈದ್ಯರು..ಈ ಅಸಹ್ಯ ಒಮ್ಮೆ ನೋಡಿ !

28 ವರ್ಷದ ಗುರ್ಮೇಜ್​ ಸಿಂಗ್ ಅವರು ತಕ್ಷಣವೇ ಸ್ಥಳಕ್ಕೆ ಬಂದು, ಪೊಲೀಸ್​ ಸಿಬ್ಬಂದಿ ವಿರುದ್ಧ ಹೋರಾಟಕ್ಕೆ ನಿಂತರು. ಆದರೆ ಕುಡಿದ ಮತ್ತಿನಲ್ಲಿದ್ದ ಅವರು ಮತ್ತೊಂದು ಅಪರಾಧ ಮಾಡಿದರು. ಓರ್ವ ಪೊಲೀಸ್​ ತನ್ನ ಸರ್ವೀಸ್​ ರಿವಾಲ್ವರ್​​ನಿಂದ ಗುರ್ಮೇಜ್​ ಸಿಂಗ್​ ಅವರನ್ನು ಹತ್ಯೆ ಮಾಡಿದ್ದಾನೆ.

ಅಲ್ಲೇ ಸಮೀಪದ ಗದ್ದೆಯೊಂದರಲ್ಲಿ ಕಬಡ್ಡಿ ಆಡುತ್ತಿದ್ದವರು ಗುಂಡಿನ ಶಬ್ದ ಕೇಳುತ್ತಿದ್ದಂತೆ ಓಡಿ ಬಂದಿದ್ದಾರೆ. ಆರೋಪಿಗಳನ್ನು ಸುತ್ತುವರಿದು, ಬಟಾಲಾ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ.  ಸದ್ಯ ಅವರೆಲ್ಲರನ್ನೂ ಬಂಧಿಸಿದ್ದಾಗಿ ಸ್ಥಳೀಯ ಪೊಲೀಸ್​ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಹಾಗೇ ತನಿಖೆಯನ್ನೂ ಪ್ರಾರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net