ಚಪ್ಪಲಿ, ಕಣ್ಣಿನ ಕಾಡಿಗೆಯಲ್ಲಿತ್ತು ಬರೋಬ್ಬರಿ ಮೂವತ್ತಾರೂವರೆ ಲಕ್ಷ ಮೌಲ್ಯದ ಡ್ರಗ್ಸ್​!

drugs
Published on

ಬೆಂಗಳೂರು: ಡ್ರಗ್ಸ್​ ಜಾಲದ ವ್ಯಾಪ್ತಿ ಚಪ್ಪಲಿ, ಕಣ್ಣಿನ ಕಾಡಿಗೆಗೂ ವ್ಯಾಪಿಸಿದೆ! ಈ ಪ್ರಕರಣದ ಜಾಡು ಹಿಡಿದು ಕಾಡಿಗೆ ಮತ್ತು ಚಪ್ಪಲಿಯನ್ನು ಪರಿಶೀಲಿಸಿದ ಕಸ್ಟಮ್​ ಅಧಿಕಾರಿಗಳ ಕೈಗೆ ಬರೋಬ್ಬರಿ ಮೂವತ್ತಾರೂವರೆ ಲಕ್ಷ ಮೌಲ್ಯದ ಡ್ರಗ್ಸ್​ ಸಿಕ್ಕಿದೆ.

ಹೌದು, ವಿದೇಶದಿಂದ ಕೋರಿಯರ್​ನಲ್ಲಿ ಚಪ್ಪಲಿ ಮತ್ತು ಸೌಂದರ್ಯ ವರ್ಧಕದಲ್ಲಿ ಬಚ್ಚಿಟ್ಟು ಕಳುಹಿಸುತ್ತಿದ್ದ ಡ್ರಗ್ಸ್​ಅನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್​ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ದಕ್ಷಿಣ ಆಫ್ರಿಕಾದಿಂದ ಕೋರಿಯರ್​ನಲ್ಲಿ ಬಂದಿದ್ದ ಐದು ಜೊತೆ ಲೇಡಿಸ್​ ಚಪ್ಪಲಿಗಳನ್ನು ಸ್ಕ್ಯಾನಿಂಗ್​ ಮಾಡಿದಾಗ ಒಳಗೆ ಅನುಮಾನಾಸ್ಪದ ವಸ್ತು ಬಚ್ಚಿಟ್ಟಿರುವ ಬಗ್ಗೆ ಕೆಐಎ ಕಸ್ಟಮ್​ ಅಧಿಕಾರಿಗಳಿಗೆ ಶಂಕೆ ವ್ಯಕ್ತವಾಗಿದೆ. ತಕ್ಷಣ ಕೋರಿಯರ್​ ಬಾಕ್ಸ್​ ಅನ್ನು ವಶಕ್ಕೆ ಪಡೆದು ಪ್ರತಿಯೊಂದು ಚಪ್ಪಲಿಯನ್ನೂ ಕತ್ತರಿಸಿ ನೋಡಿದಾಗ 490 ಗ್ರಾಂ ಮೆಥಾಕ್ವಾಲೋನ್​ ಎಂಬ ಡ್ರಗ್ಸ್​ ಪತ್ತೆಯಾಗಿದೆ. ಇದರ ಬೆಲೆ ಅಂದಾಜು 24.50 ಲಕ್ಷ ರೂಪಾಯಿ!

ಮತ್ತೊಂದು ಪ್ರಕರಣದಲ್ಲಿ ಕಣ್ಣಿನ ಕಾಡಿಗೆಯಲ್ಲೂ ಡ್ರಗ್ಸ್​ ಅನ್ನು ಮರೆಮಾಚಿ ಆಫ್ರಿಕಾದಿಂದ ಕೊರಿಯರ್​ನಲ್ಲಿ ಕೆಐಎಗೆ ಕಳುಹಿಸಿದ್ದರು. ಇದನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ 241 ಗ್ರಾಂ ಡ್ರಗ್ಸ್​ ಪತ್ತೆಯಾಗಿದೆ. ಇದರ ಬೆಲೆ 12 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಡಾರ್ಕ್​ ವೆಬ್​ಸೈಟ್​ನಲ್ಲಿ ಡ್ರಗ್ಸ್​ ಬುಕ್​ ಮಾಡಿ ಅನಾಮಧೇಯ ವ್ಯಕ್ತಿಗಳ ಹೆಸರಿನಲ್ಲಿ ಕೊರಿಯರ್​ ಕಳುಹಿಸುತ್ತಾರೆ. ವಿಮಾನ ನಿಲ್ದಾಣದಿಂದ ಹೊರಬಂದಾಗ ಅದರ ಮೇಲೆ ನಿಗಾ ವಹಿಸುವ ಪೆಡ್ಲರ್​ಗಳು ದಾರಿ ಮಧ್ಯದಲ್ಲಿಯೇ ಸ್ವೀಕರಿಸುತ್ತಾರೆ. ಆರೋಪಿಗಳ ಪತ್ತೆಗೂ ಬಲೆಬೀಸಲಾಗಿದೆ ಎಂದು ಕಸ್ಟಮ್ಸ್​ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net