

ಬೆಂಗಳೂರು: ಫೇಸ್ಬುಕ್ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬನಿಗೆ ವಾಟ್ಸ್ಆ್ಯಪ್ ವಿಡಿಯೋ ಕರೆ ಮಾಡಿದ್ದ ಯುವತಿ ನಗ್ನವಾಗಿದ್ದಳು. ಕರೆ ಸ್ಥಗಿತಗೊಳಿಸಿದರೂ ಪದೇಪದೆ ಕರೆ ಮಾಡಿದ ಆಕೆಗೆ ಬೆದರಿದ ಆತನೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿರುವ 38 ವರ್ಷದ ವ್ಯಕ್ತಿಗೆ ಕೆಲ ದಿನಗಳ ಹಿಂದೆ ಫೇಸ್ಬುಕ್ನಲ್ಲಿ ರಿಯಾ ಎಂಬ ಯುವತಿ ಸ್ನೇಹ ಬೆಳೆಸಿದ್ದಳು. ಫ್ಯಾಷನ್ ಡಿಸೈನರ್ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಳು. ವಿನ್ಯಾಸ ಮಾಡಿರುವ ವಸ್ತ್ರಗಳ ಫೋಟೋ ಕಳುಹಿಸುವುದಾಗಿ ಫೋನ್ ನಂಬರ್ ಪಡೆದಿದ್ದಳು.
ಅ.28ರಂದು ವ್ಯಕ್ತಿಗೆ ಯುವತಿಯಿಂದ ವ್ಯಾಟ್ಸ್ಆ್ಯಪ್ ವಿಡಿಯೋ ಕರೆ ಬಂದಿದ್ದು, ಅದನ್ನು ಸ್ವೀಕರಿಸಿದ್ದರು. ಆ ವೇಳೆ ನಗ್ನವಾಗಿದ್ದ ಯುವತಿ ಅಸಭ್ಯವಾಗಿ ವರ್ತಿಸಿದ್ದಾಳೆ. ಆ ವಿಡಿಯೋವನ್ನು ಆಕೆ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಗಾಬರಿಗೊಂಡ ವ್ಯಕ್ತಿ, ವಿಡಿಯೋ ಕರೆಯನ್ನು ಸ್ಥಗಿತಗೊಳಿಸಿದ್ದರು. ಮತ್ತೆ ಕರೆ ಮಾಡಿದ ಯುವತಿ, ಕೂಡಲೇ 21 ಸಾವಿರ ರೂ. ಸಂದಾಯ ಮಾಡಬೇಕು. ಇಲ್ಲವಾದರೆ ಅಶ್ಲೀಲ ವಿಡಿಯೋವನ್ನು ಫೇಸ್ಬುಕ್ಗೆ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಳು. ಹಣ ಕೊಡಲು ನಿರಾಕರಿಸಿದಾಗ ವಿಡಿಯೋವನ್ನು ಆತನ ಸ್ನೇಹಿತರಿಗೆ ಕಳುಹಿಸಿದ್ದಳು.
ನಗ್ನವಾಗಿ ಇದ್ದಕೊಂಡು ವಿಡಿಯೋ ಕರೆ ಮಾಡಿ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಿದ ಯುವತಿ ವಿರುದ್ಧ ಖಾಸಗಿ ಕಂಪನಿ ಉದ್ಯೋಗಿ ಕೊಟ್ಟ ದೂರಿನ ಮೇರೆಗೆ ಕೇಂದ್ರ ವಿಭಾಗದ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.