Bihar Election | ಇವು ಮುಂಗೇರಿ ಲಾಲ್‌ನ ಕನಸುಗಳು...ಆರ್​ಜೆಡಿಯ ಮಹಿಳಾ ಪರ ಯೋಜನೆಗೆ ಚಿರಾಗ್​ ಪಾಸ್ವಾನ್​ ವ್ಯಂಗ್ಯ

chirag
Published on

Patna: ಬಿಹಾರ ವಿಧಾನಸಭಾ ಚುನಾವಣೆಯ (Bihar Election) ಪ್ರಚಾರದ ಕಾವು ದಿನೇ ದಿನೇ ಹೆಚ್ಚುತ್ತಿದ್ದು, ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗುತ್ತಿಗೆ ನೌಕರರನ್ನು ಮತ್ತು ಜೀವಿಕಾ ದಿದೀಸ್​​ಗಳನ್ನು ಖಾಯಂಗೊಳಿಸುವ ಭರವಸೆಗಳನ್ನು "ಮುಂಗೇರಿ ಲಾಲ್‌ನ ಕನಸುಗಳು" ಎಂದು ವ್ಯಂಗ್ಯವಾಡಿದ್ದಾರೆ.

ಪಾಟ್ನಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪಾಸ್ವಾನ್, ಮಹಾ ಮೈತ್ರಿಕೂಟದ ನಾಯಕರು ತಮ್ಮ ತಮ್ಮಲ್ಲಿಯೇ ಜಗಳವಾಡುತ್ತಿದ್ದು, ಈ ಪರಿಣಾಮದಿಂದ ಮಹಾಘಟಬಂಧನ್ ಸಂಪೂರ್ಣವಾಗಿ ನಾಶವಾಗಿದೆ. ಇದರ ಹೊರತಾಗಿಯೂ, ತೇಜಸ್ವಿ ಯಾದವ್ ತಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಭಾವಿಸಿದರೆ, ಅದು ಅವರು ಹಗಲುಗನಸು ಎಂದರು.

ಕಾಂಗ್ರೆಸ್ ವಿರುದ್ಧವೂ ಟೀಕಾ ಪ್ರಹಾರ ನಡೆಸಿದ ಪಾಸ್ವಾನ್​​, ಅನೇಕ ದಿನಗಳ ಬಳಿಕ ಮಿತ್ರಪಕ್ಷದವರೆಲ್ಲಾ ಸೇರಿ ಈಗ ಜಂಟಿ ಪತ್ರಿಕಾಗೋಷ್ಠಿ ನಡೆಸುವ ಕುರಿತಾಗಿ ಯೋಚಿಸುತ್ತಿದ್ದಾರೆ. ಮಹಾ ಮೈತ್ರಿಕೂಟ ಬಲ ಕುಸಿದ ನಂತರವೇ ಕಾಂಗ್ರೆಸ್​​ನ ಚುನಾವಣಾ ಉಸ್ತುವಾರಿ ಅಶೋಕ್ ಗೆಹ್ಲೋಟ್ ಪಾಟ್ನಾಕ್ಕೆ ಬಂದಿಳಿದಿದ್ದಾರೆ, ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಜನರ ದಾರಿ ತಪ್ಪಿಸುತ್ತಾ ಓಡಾಡುತ್ತಿದ್ದ ರಾಹುಲ್ ಗಾಂಧಿ ಈಗ ಎಲ್ಲಿದ್ದಾರೆ?. ರಾಹುಲ್ ಮತ್ತು ತೇಜಸ್ವಿ ಒಟ್ಟಿಗೆ ಕುಳಿತು ಸೀಟು ಹಂಚಿಕೆ ಸಮಸ್ಯೆಯನ್ನು ಜಾಗರೂಕತೆಯಿಂದ ಪರಿಹರಿಸುವಷ್ಟು ನೈತಿಕ ಜವಾಬ್ದಾರಿಯಲ್ಲವೇ? ಎಂದು ಪ್ರಶ್ನಿಸಿದರು.

ಮಹಾಘಟಬಂದನ್​​ ಮೈತ್ರಿ ಸಂಪೂರ್ಣವಾಗಿ ಮುಗಿದ ಅಧ್ಯಾಯವಾಗಿದೆ ಎಂದ ಪಾಸ್ವಾನ್, ಸ್ಥಾನಗಳಿಗೆ ಸಂಬಂಧಿಸಿದಂತೆ ಆಂತರಿಕ ಸಂಘರ್ಷಗಳನ್ನು ಎತ್ತಿ ತೋರಿಸಿದರು. ಇಂಡಿಯಾ ಕೂಟದ ಮಿತ್ರಗಳು 10 ರಿಂದ 12 ಸ್ಥಾನಗಳಲ್ಲಿ ಪರಸ್ಪರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಒಂದು ಜಿಲ್ಲೆಯಲ್ಲಿ ಆರು ಕ್ಷೇತ್ರಗಳಿದ್ದು, ಒಂದರಲ್ಲಿ ಅವರು ಸ್ಪರ್ಧಿಸುತ್ತಿದ್ದಾರೆ ಎಂದು ಭಾವಿಸೋಣ, ಉಳಿದ ಐದು ಕ್ಷೇತ್ರಗಳ ಜನರು ಅವರು ಒಗ್ಗಟ್ಟಾಗಿದ್ದಾರೆ ಎಂದು ಹೇಗೆ ನಂಬುತ್ತಾರೆ? ಅವರಿಗೆ ಮೈತ್ರಿಗಳನ್ನು ಹೇಗೆ ರಚಿಸುವುದು, ನಿರ್ವಹಿಸುವುದು ಎನ್ನುವುದೇ ತಿಳಿದಿಲ್ಲ ಎಂದು ಟೀಕಿಸಿದರು. ಮಹಾ ಮೈತ್ರಿಕೂಟ ಉತ್ತಮ ಆಡಳಿತ ನಡೆಸಲಿದೆ ಎಂಬ ವಿಶ್ವಾಸ ಬಿಹಾರದ ಜನರಿಗಿಲ್ಲ, ಆದ್ದರಿಂದ ನಾವು ಹರಿಯಾಣದಲ್ಲಿ ಗೆಲುವು ಸಾಧಿಸಿದಂತೆಯೆ, ಬಿಹಾರದಲ್ಲೂ ಜಯಗಳಿಸಲಿದ್ದೇವೆ. ಅಲ್ಲಿ ಕಾಂಗ್ರೆಸ್ ಸೋತ ರೀತಿಯಲ್ಲಿ, ಇಲ್ಲಿ ಮಹಾಮೈತ್ರಿಕೂಟ ಸೋಲು ಅನುಭವಿಸಲಿದೆ ಎಂದರು.

ವಿರೋಧ ಪಕ್ಷದೊಳಗಿನ ನಾಯಕತ್ವದ ಬಿಕ್ಕಟ್ಟನ್ನು ಪ್ರಶ್ನಿಸಿದ ಎಲ್‌ಜೆಪಿ ಮುಖ್ಯಸ್ಥ ಚಿರಾಗ್​, ಮೈತ್ರಿಕೂಟವನ್ನು ಯಾರು ಮುನ್ನಡೆಸುತ್ತಾರೆ ಎಂಬುದರ ಕುರಿತಾಗಿ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ನಡುವೆ ಜಗಳ ನಡೆಯುತ್ತಿದೆ. ಇತ್ತ ಎಲ್ಲಾ ಎನ್‌ಡಿಎ ಪಾಲುದಾರರು ನಿತೀಶ್ ಕುಮಾರ್ ನೇತೃತ್ವದಲ್ಲಿ ಸ್ಪರ್ಧಿಸಲು ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದಾರೆ, ನಮ್ಮ ಉಳಿದ ಮಿತ್ರಪಕ್ಷಗಳ ಯಾವ ನಾಯಕರು ಕೂಡ ಅವರ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿಲ್ಲ. ನಾವು ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದ್ದೇವೆ, ಅಭ್ಯರ್ಥಿಗಳನ್ನು ಘೋಷಿಸಿದ್ದೇವೆ, ನಾಮಪತ್ರಗಳನ್ನು ಸಲ್ಲಿಸಿದ್ದೇವೆ ಮತ್ತು ಪ್ರಚಾರ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದೇವೆ ಎಂದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net