

Washington: ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ ಎನ್ನಲಾದ ಭರವಸೆಯನ್ನು ಉಲ್ಲೇಖಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್( Donald Trump), ಈ ವರ್ಷದ ಅಂತ್ಯದ ವೇಳೆಗೆ ಭಾರತವು ರಷ್ಯಾದ ತೈಲ ಆಮದನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ ಎಂದಿದ್ದಾರೆ.
ಶ್ವೇತಭವನದಲ್ಲಿ ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಜೊತೆಗಿನ ಸಭೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಟ್ರಂಪ್, ಆಮದು ಕಡಿತವು ಕಾಲ ಕ್ರಮೇಣ ಕಡಿಮೆಯಾದರು, ಮಹತ್ವದ್ದಾಗಿದೆ. ಭಾರತ ಇಂಧನ ಖರೀದಿಯನ್ನು ನಿಲ್ಲಿಸುವುದಾಗಿ ನನಗೆ ಹೇಳಿದೆ. ಇದು ಒಂದು ಪ್ರಕ್ರಿಯೆಯಾಗಿರುವುದರಿಂದ, ಅದನ್ನು ಒಂದೆ ಸಲ ನಿಲ್ಲಿಸಲು ಸಾಧ್ಯವಿಲ್ಲ. ವರ್ಷದ ಅಂತ್ಯದ ವೇಳೆಗೆ ಇದೆಲ್ಲಾ ಬಗೆಹರಿಯಲಿದೆ ಎಂದರು.
ಭಾರತ ಅದ್ಭುತ ದೇಶ, ನಿನ್ನೆ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿದ್ದೆ, ಅವರೊಬ್ಬ ಅದ್ಭುತ ವ್ಯಕ್ತಿ, ಜಾಗತಿಕ ಮಾರುಕಟ್ಟೆಗಳಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಹಂತ ಹಂತವಾಗಿ ರದ್ದುಗೊಳಿಸಲಾಗುವುದು, ವರ್ಷಾಂತ್ಯದ ವೇಳೆಗೆ ಅದು ಪೂರ್ಣಗೊಳ್ಳುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಮಂಗಳವಾರ (ಅ 21) ಟ್ರಂಪ್, ದೀಪಾವಳಿಯಂದು ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿದೆ ಎಂದು ತಮ್ಮ ಹೇಳಿಕೆಯನ್ನು ಪುನರಾವರ್ತಿಸಿದ್ದು, ಈ ಸಂಭಾಷಣೆ ಹೆಚ್ಚಾಗಿ ವ್ಯಾಪಾರದ ಸುತ್ತಲೇ ಸುತ್ತಿದೆ ಎಂದಿದ್ದರು. ಇದಾದ ಒಂದು ದಿನದ ಬಳಿಕ ಪ್ರತಿಕ್ರಿಯೆ ನೀಡಿದ ಪ್ರಧಾನಿ, ಟ್ರಂಪ್ ಶುಭಾಶಯಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಎರಡು ಮಹಾನ್ ಪ್ರಜಾಪ್ರಭುತ್ವಗಳು ನಂಬಿಕೆ ಮತ್ತು ಪ್ರಗತಿಯಿಂದ ಜಗತ್ತನ್ನು ಬೆಳಗಿಸುತ್ತಲೇ ಇರುತ್ತವೆ ಎಂಬ ಭರವಸೆ ವ್ಯಕ್ತಪಡಿಸಿದರು.
ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸದಿದ್ದರೆ ನಿರಂತರ ಸುಂಕಗಳನ್ನು ಎದುರಿಸಬೇಕಾಗುತ್ತದೆ ಎಂದು ಇತ್ತೀಚೆಗೆ ಟ್ರಂಪ್ ಎಚ್ಚರಿಕೆ ನೀಡಿದ್ದರು. ರಷ್ಯಾ ಕಚ್ಚಾ ತೈಲದಿಂದ ಭಾರತವನ್ನು ದೂರವಿರಿಸಲು ಒತ್ತಡ ಹೇರುವ ಪ್ರಯತ್ನದ ಭಾಗವಾಗಿ ಅಮೆರಿಕ ಈಗಾಗಲೇ ಕೆಲವು ಭಾರತೀಯ ಸರಕುಗಳ ಮೇಲೆ ಶೇಕಡಾ 50 ರಷ್ಟು ಸುಂಕವನ್ನು ವಿಧಿಸಿದೆ.
ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧದ ಹೊರತಾಗಿಯೂ ರಷ್ಯಾದ ತೈಲ ಆಮದುಗಳನ್ನು ಹೆಚ್ಚಿಸಿರುವ ಭಾರತ, ತನ್ನ ಇಂಧನ ನೀತಿಯು ಸ್ಥಿರ ಬೆಲೆಗಳನ್ನು ಖಚಿತಪಡಿಸಿಕೊಳ್ಳುವುದು ಮತ್ತು ಬೆಳೆಯುತ್ತಿರುವ ಜನಸಂಖ್ಯೆಗೆ ಸರಬರಾಜುಗಳನ್ನು ಭದ್ರಪಡಿಸುವುದರ ಮೇಲೆ ಕೇಂದ್ರೀಕರಿಸಿದೆ ಎಂದು ಪದೇ ಪದೇ ಹೇಳುತ್ತಿದೆ.(ಏಜೆನ್ಸೀಸ್)