

Delhi: ದೇಶದಲ್ಲಿ ದೀಪಾವಳಿ(Deepawali) ಹಬ್ಬದ ಸಂಭ್ರಮಾಚರಣೆ ಜೋರಾಗಿದ್ದು, ವಿದೇಶಗಳಲ್ಲಿ ನೆಲೆಸಿರುವಂತಹ ಭಾರತೀಯ ಮೂಲದ ನಾಗರಿಕರು ಕೂಡ ಅಲ್ಲಿಂದಲೇ ದೀಪದ ಹಬ್ಬವನ್ನು ಆಚರಿಸುತ್ತಿದ್ದಾರೆ. ಮಂಗಳವಾರ ಟ್ವೀಟ್ ಮೂಲಕ ದೇಶದ ಜನರಿಗೆ ದೀಪಾವಳಿಯ ಶುಭಾಶಯ ಕೋರಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ( ಅ 22) ಧನ್ಯವಾದಗಳನ್ನು ತಿಳಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಈ ಬೆಳಕಿನ ಹಬ್ಬದಂದು, ಎರಡು ಮಹಾನ್ ಪ್ರಜಾಪ್ರಭುತ್ವ ರಾಷ್ಟ್ರಗಳು ಜಗತ್ತನ್ನು ಭರವಸೆಯಿಂದ ಬೆಳಗಿಸುವುದನ್ನು ಮುಂದುವರಿಸಲಿ, ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ನಿಲ್ಲಲಿ ಎಂದು ಬರೆದುಕೊಂಡಿದ್ದಾರೆ.
ಮಂಗಳವಾರ ಶ್ವೇತಭವನದಲ್ಲಿ ಸಾಂಪ್ರದಾಯಿಕ ಹಿತ್ತಾಳೆ ದೀಪವನ್ನು ಬೆಳಗಿಸುವ ಮೂಲಕ ದೀಪಾವಳಿ ಆಚರಿಸಿದ ಟ್ರಂಪ್, ಇದು ಕತ್ತಲೆಯ ಮೇಲಿನ ಬೆಳಕಿನ ವಿಜಯ, ಅಜ್ಞಾನದ ಮೇಲೆ ಜ್ಞಾನ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುತ್ತದೆ ಎಂದು ಹೇಳಿದ್ದರು. ಈ ಸಮಾರಂಭದಲ್ಲಿ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್, ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್, ಶ್ವೇತಭವನದ ಉಪ ಪತ್ರಿಕಾ ಕಾರ್ಯದರ್ಶಿ ಕುಶ್ ದೇಸಾಯಿ, ಅಮೆರಿಕಕ್ಕೆ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಮತ್ತು ನವದೆಹಲಿಗೆ ವಾಷಿಂಗ್ಟನ್ ರಾಯಭಾರಿ ಸೆರ್ಗಿಯೊ ಗೋರ್ ಸೇರಿದಂತೆ ಪ್ರಮುಖ ಆಡಳಿತ ಅಧಿಕಾರಿಗಳು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ಈ ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಟ್ರಂಪ್, ಪ್ರಧಾನಿ ಮೋದಿಯನ್ನು ಮಹಾನ್ ವ್ಯಕ್ತಿ ಮತ್ತು ಮಹಾನ್ ಸ್ನೇಹಿತ ಎಂದು ಬಣ್ಣಿಸಿದ್ದರು. ಭಾರತದ ಜನರಿಗೆ ನಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ. ನಾನು ಇಂದು ನಿಮ್ಮ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದೆ. ನಾವು ವ್ಯಾಪಾರದ ಬಗ್ಗೆ ಮಾತನಾಡಿದ್ದೇವೆ, ಅದರಲ್ಲೂ ವಿಶೇಷವಾಗಿ ಪ್ರಪಂಚದ ವ್ಯಾಪಾರದ ಬಗ್ಗೆ. ಮೋದಿಗೂ ಕೂಡ ಈ ವಿಷಯದಲ್ಲಿ ತುಂಬಾ ಆಸಕ್ತಿ ಇದೆ ಎಂದು ಹೇಳಿದರು. ಮಾತುಕತೆಯು ಪ್ರಾದೇಶಿಕ ಶಾಂತಿಯ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸಿದೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.
ಭಾರತ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುತ್ತೇವೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂದು ಟ್ರಂಪ್ ಹೇಳಿಕೊಂಡ ಒಂದು ವಾರದ ಬಳಿಕ, ಪ್ರಧಾನಿಯೊಂದಿಗಿನ ಈ ಸಂಭಾಷಣೆ ನಡೆದಿದೆ. ಆದರೆ, ಕೇಂದ್ರ ಸರ್ಕಾರ ಈ ಹೇಳಿಕೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದು, ಆ ರೀತಿಯ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.(ಏಜೆನ್ಸೀಸ್)