Bihar Election | ಆರ್​ಜೆಡಿ ಅಧಿಕಾರಕ್ಕೆ ಬಂದರೆ ಜೀವಿಕಾ ದೀದಿಗಳಿಗೆ ಸರ್ಕಾರಿ ನೌಕರರ ಸ್ಥಾನಮಾನ, 30 ಸಾವಿರ ರೂ ವೇತನ!

tejashwi Press meet
Published on

Patna: ಬಿಹಾರ ವಿಧಾನಸಭಾ ಚುನಾವಣಾ (Bihar Election) ಪ್ರಚಾರ ದಿನೇ ದಿನೇ ವೇಗ ಪಡೆದುಕೊಳ್ಳುತಿದ್ದು, ತಳಮಟ್ಟದ ಅಭಿವೃದ್ಧಿಯ ವಿಷಯದಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಬಹುದಾದ ಜೀವಿಕಾ ದೀದಿಗಳನ್ನು ಗುರಿಯಾಗಿಟ್ಟುಕೊಂಡಿರುವ ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಪ್ರಮುಖ ಯೋಜನೆಯೊಂದನ್ನು ಘೋಷಿಸಿದ್ದಾರೆ.

ಜೀವಿಕಾ ಸಿಎಂ (ಸಮುದಾಯ ಮೊಬಿಲೈಸರ್ಸ್) ಯೋಜನೆಯ ವಿಷಯದಲ್ಲಿ ನಿತೀಶ್​ ಕುಮಾರ್​​ ನೇತೃತ್ವದ ಎನ್ಡಿಎ ಸರ್ಕಾರ ಕಾರ್ಯನಿರ್ವಹಿಸಿದ ರೀತಿಯನ್ನು ಬುಧವಾರ(ಅ 22) ತೀವ್ರವಾಗಿ ಖಂಡಿಸಿರುವ ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ನಾಯಕ ತೇಜಸ್ವಿ ಯಾದವ್, ಬಿಹಾರ ವಿಧಾನಸಭಾ ಚುನಾವಣೆ ಬಳಿಕ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸರ್ಕಾರಿ ಉದ್ಯೋಗಗಳು ಮತ್ತು ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಮಾಸಿಕ 30,000 ರೂ. ವೇತನ ನೀಡುವುದಾಗಿ ಭರವಸೆ ನೀಡಿದ್ದಾರೆ.

ಪಾಟ್ನಾದಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತೇಜಸ್ವಿ, ಈ ಸರ್ಕಾರದ ಆಡಳಿತಾವಧಿಯಲ್ಲಿ ಜೀವಿಕಾ ದೀದಿಗಳಿಗೆ ಅನ್ಯಾಯವಾಗಿದೆ ಎಂದು ಎಲ್ಲರಿಗೂ ತಿಳಿದಿದ್ದು. ಎಲ್ಲಾ ಜೀವಿಕಾ ಸಿಎಂ ದೀದಿಗಳನ್ನು ಖಾಯಂ ಮಾಡಿ, ಸರ್ಕಾರಿ ನೌಕರರ ಸ್ಥಾನಮಾನವನ್ನು ನೀಡಬೇಕೆಂದು ನಾವು ನಿರ್ಧರಿಸಿದ್ದು ಇದಷ್ಟೆ ಅಲ್ಲದೇ ಅವರ ವೇತನವನ್ನು ಸಹ ತಿಂಗಳಿಗೆ 30,000 ರೂ.ಗಳಿಗೆ ಹೆಚ್ಚಿಸಲಾಗುವುದು. ಇದು ವೇವಲ ಘೋಷಣೆಯಾಗಿರುವುದಿಲ್ಲ, ಇದು ಜೀವಿಕಾ ದೀದಿಗಳ ಬಹುಕಾಲದ ಬೇಡಿಕೆಯ ಈಡೇರಿಕೆಯಾಗಲಿದೆ ಎಂದರು.

ಜೀವಿಕಾ ದಿದೀಗಳ ಅಸ್ತಿತ್ವದಲ್ಲಿರುವ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಮತ್ತು ಮುಂದಿನ ಎರಡು ವರ್ಷಗಳವರೆಗೆ ಬಡ್ಡಿರಹಿತ ಸಾಲವನ್ನು ನೀಡಲಾಗುವುದು ಎಂದು ಭರವಸೆ ನೀಡಿದ ಆರ್​ಜೆಡಿ ನಾಯಕ, ಪ್ರತಿ ಜೀವಿಕಾ ದೀದಿಗೆ ತಿಂಗಳಿಗೆ 2,000 ರೂ. ಹೆಚ್ಚುವರಿ ಭತ್ಯೆ ಮತ್ತು 5 ಲಕ್ಷ ರೂ. ವಿಮಾ ರಕ್ಷಣೆ ಸಿಗುತ್ತದೆ ಎಂದರು. ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರ ಜೀವಿಕಾ ದೀದಿ ಯೋಜನೆಗೆ ನೇರ ಸವಾಲಾಗಿ ಈ ಘೋಷಣೆ ಹೊರಹೊಮ್ಮಿದ್ದು, ಬಿಹಾರದಲ್ಲಿ ಆರ್‌ಜೆಡಿಯ ಮುಂಬರುವ ಚುನಾವಣಾ ಪ್ರಚಾರದ ಪ್ರಮುಖ ಚರ್ಚಾ ವಿಷಯವಾಗುವುದರಲ್ಲಿ ಅನುಮಾನವಿಲ್ಲ.

ಗುತ್ತಿಗೆ ಕಾರ್ಮಿಕರು ಖಾಯಂ

ತಮ್ಮ ಎರಡನೇ ಪ್ರಮುಖ ಚುನಾವಣಾ ಭರವಸೆ ಘೋಷಿಸಿದ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ, ಆರ್‌ಜೆಡಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಗುತ್ತಿಗೆ ನೌಕರರನ್ನು ಖಾಯಂಗೊಳಿಸಲಾಗುವುದು. ಅವರಿಗೆ ಖಾಯಂ ಸರ್ಕಾರಿ ಸಿಬ್ಬಂದಿಯ ಸ್ಥಾನಮಾನ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಏನಿದು ಜೀವಿಕಾ ಯೋಜನೆ...?

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, 2025 ಸೆಪ್ಟೆಂಬರ್​ 02 ರಂದು ಬಿಹಾರ ರಾಜ್ಯ ಜೀವಿಕ ನಿಧಿ ಸಖ್ ಸಹಕಾರಿ ಸಂಘ ಲಿಮಿಟೆಡ್ ಅನ್ನು ಉದ್ಘಾಟಿಸಿದರು. ಜೀವಿಕ ನಿಧಿಯನ್ನು ಸ್ಥಾಪಿಸುವ ಉದ್ದೇಶವು ಜೀವಿಕ ಸದಸ್ಯರಿಗೆ ಕೈಗೆಟುಕುವ ಬಡ್ಡಿದರದಲ್ಲಿ ಹಣವನ್ನು ಸುಲಭವಾಗಿ ಪಡೆಯಲು ಅವಕಾಶ ನೀಡುವುದಾಗಿದೆ. ಜೀವಿಕ ಸಂಸ್ಥೆಯ ಎಲ್ಲಾ ನೋಂದಾಯಿತ ಕ್ಲಸ್ಟರ್ ಮಟ್ಟದ ಒಕ್ಕೂಟಗಳು ಸೊಸೈಟಿಯ ಸದಸ್ಯರಾಗುತ್ತವೆ. ಈ ಸಂಸ್ಥೆಯ ಕಾರ್ಯಾಚರಣೆಗಾಗಿ, ಬಿಹಾರ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಹಣವನ್ನು ನೀಡುತ್ತವೆ.

ಜೀವಿಕಾದ ಸ್ವ-ಸಹಾಯ ಗುಂಪುಗಳ ಮಹಿಳೆಯರಲ್ಲಿ ಉದ್ಯಮಶೀಲತೆ ಹಲವು ವರ್ಷಗಳಿಂದ ಪ್ರವರ್ಧಮಾನಕ್ಕೆ ಬಂದಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಸಣ್ಣ ಉದ್ಯಮಗಳು ಮತ್ತು ಉತ್ಪಾದಕ ಕಂಪನಿಗಳ ಸ್ಥಾಪನೆಗೆ ಕಾರಣವಾಗಿದೆ. ಮಹಿಳಾ ಉದ್ಯಮಿಗಳು ಹೆಚ್ಚಾಗಿ 18%–24% ಹೆಚ್ಚಿನ ಬಡ್ಡಿದರಗಳನ್ನು ವಿಧಿಸುವ ಕಿರುಬಂಡವಾಳ ಸಂಸ್ಥೆಗಳನ್ನು ಅವಲಂಬಿಸಬೇಕಾಯಿತು. ಜೀವಿಕಾ ನಿಧಿಯನ್ನು MFI ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಕಡಿಮೆ ಬಡ್ಡಿದರಗಳಲ್ಲಿ ದೊಡ್ಡ ಸಾಲದ ಮೊತ್ತದ ಸಕಾಲಿಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಪರ್ಯಾಯ ಹಣಕಾಸು ವ್ಯವಸ್ಥೆಯಾಗಿ ಕಲ್ಪಿಸಲಾಗಿದೆ.

ಈ ವ್ಯವಸ್ಥೆಯು ಸಂಪೂರ್ಣವಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಜೀವಿಕಾ ದಿದೀಸ್ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವೇಗವಾಗಿ ಮತ್ತು ಹೆಚ್ಚು ಪಾರದರ್ಶಕವಾಗಿ ಹಣ ವರ್ಗಾವಣೆಯಾಗುವುದನ್ನು ಖಚಿತಪಡಿಸುತ್ತದೆ. ಇದನ್ನು ಸುಗಮಗೊಳಿಸಲು, 12,000 ಸಮುದಾಯ ಕಾರ್ಯಕರ್ತರಿಗೆ ಟ್ಯಾಬ್ಲೆಟ್‌ಗಳನ್ನು ಅಳವಡಿಸಲಾಗುತ್ತಿದೆ. ಈ ಯೋಜನೆ ಗ್ರಾಮೀಣ ಮಹಿಳೆಯರಲ್ಲಿ ಉದ್ಯಮಶೀಲತಾ ಅಭಿವೃದ್ಧಿಯನ್ನು ಬಲಪಡಿಸುವ ಮತ್ತು ಸಮುದಾಯ ನೇತೃತ್ವದ ಉದ್ಯಮಗಳ ಬೆಳವಣಿಗೆಯನ್ನು ವೇಗಗೊಳಿಸುವ ನಿರೀಕ್ಷೆಯಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net