

Patna: ಬಿಹಾರದಲ್ಲಿ ವಿಧಾನಸಭಾ ಚುನಾವಣೆಯ(Bihar Election) ರಣಕಣ ಜೋರಾಗಿದ್ದು, ಎರಡು ಹಂತದ ನಾಮಪತ್ರ ಸಲ್ಲಿಕೆ ಕಾರ್ಯ ಮುಗಿದಿದೆ, ಟೀಕೆ ಟಿಪ್ಪಣಿಗಳು ಜೋರಾಗಿವೆ. ಈ ನಡುವೆ ವಿಪಕ್ಷ ಮಹಾಘಟಬಂಧನ್ಗೆ (INDI ಮೈತ್ರಿಕೂಟ) ಗೆ ದೊಡ್ಡ ಹೊಡೆತ ಬಿದ್ದಿದ್ದು, ಪೂರ್ವ ಚಂಪಾರಣ್ ಜಿಲ್ಲೆಯ ಸುಗೌಲಿ ಕ್ಷೇತ್ರವನ್ನು, NDA ಅಭ್ಯರ್ಥಿಗೆ ವಾಕ್‌ಓವರ್ ನೀಡಿದಂತಾಗಿದೆ.
ಸುಗೌಲಿಯ ಹಾಲಿ ಆರ್‌ಜೆಡಿ ಶಾಸಕ ಶಶಿಭೂಷಣ್ ಸಿಂಗ್, ಪ್ರಸ್ತುತ ನಡೆತಯುತ್ತಿರುವ ಚುನಾವಣೆಯಲ್ಲಿ ಇಂಡಿಯಾ ಕೂಟದ ಮಿತ್ರಪಕ್ಷವಾದ ವಿಕಾಸಶೀಲ ಇನ್ಸಾನ್ ಪಕ್ಷದ (ವಿಐಪಿ) ಅಭ್ಯರ್ಥಿಯಾಗಿ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದರು. ಆದರೆ, ಇದರಲ್ಲಿ ತಾಂತ್ರಿಕ ಲೋಪದೋಷಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ಸಿಂಗ್ ನಾಮಪತ್ರ ತಿರಸ್ಕೃತವಾಗಿದೆ.
ನಿಯಮಗಳ ಪ್ರಕಾರ ನೋಂದಾಯಿತವಲ್ಲದ ಪಕ್ಷಗಳು ನಾಮಪತ್ರ ಸಲ್ಲಿಸುವಾಗ ತಮ್ಮೊಂದಿಗೆ 10 ಪ್ರಸ್ತಾಪಕರೊಂದಿಗೆ ಸಲ್ಲಿಸಬೇಕಾಗಿತ್ತು, ಆದರೆ ಅವರು ಈ ಹಿಂದಿನ ಆರ್‌ಜೆಡಿಯ ಮಾನದಂಡಗಳನ್ನು ಅನುಸರಿಸಿ ಕೇವಲ ಒಬ್ಬರೊಂದಿಗೆ ಸೇರಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಪರಿಶೀಲನೆಯ ಸಂದರ್ಭದಲ್ಲಿ ನಾಮಪತ್ರದಲ್ಲಿ ದೋಷಗಳಿವೆ ಎಂದು ಅಭಿಪ್ರಾಯಪಟ್ಟು ಚುನಾವಣಾ ಆಯೋಗ ಅದನ್ನು ತಿರಸ್ಕರಿಸಿದೆ. ಮಹಾಘಟಬಂಧನ್‌ನ ಸಂಕಷ್ಟಕ್ಕೆ ಮತ್ತೊಂದು ಕಾರಣವೂ ಇದ್ದು, ಆರ್‌ಜೆಡಿ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಬಂಡಾಯವೆದ್ದು ಪಕ್ಷೇತರವಾಗಿ ಉಮೇದುವಾರಿಕೆ ಸಲ್ಲಿಸಿದ್ದ ಓಂ ಪ್ರಕಾಶ್ ಚೌಧರಿ ನಾಮಪತ್ರವೂ ಕೂಡ ರದ್ದಾಗಿದೆ. ಚೌಧರಿ ಸಲ್ಲಿಸಿರುವ ನಾಮಪತ್ರದಲ್ಲಿ ಹಲವಾರು ಪುಟಗಳು ಖಾಲಿಯಾಗಿದ್ದವು ಆದ್ದರಿಂದ ಅವರು ಚುನಾವಣಾ ಕಣದಿಂದ ಹಿಂದೆ ಸರಿಯಬೇಕಾಗಿದೆ ಎಂದು ವರದಿಯಾಗಿದೆ.
ವಿಐಪಿ ಮತ್ತು ಬಂಡಾಯ ಆರ್‌ಜೆಡಿ ಅಭ್ಯರ್ಥಿ ಸ್ಪರ್ಧೆಯಿಂದ ಹೊರಗುಳಿದಿರುವುದರಿಂದ, ಇದು ಎನ್ಡಿಎ ಮಿತ್ರಪಕ್ಷವಾದ ಚಿರಾಗ್ ಪಾಸ್ವಾನ್ರ ಎಲ್‌ಜೆಪಿ ಅಧಿಕೃತ ಅಭ್ಯರ್ಥಿ ಬಬ್ಲು ಗುಪ್ತಾ ಮತ್ತು ಜನ ಸುರಾಜ್ ಪಕ್ಷದ ಅಭ್ಯರ್ಥಿ ನಡುವೆ ನೇರ ಹಣಾಹಣಿ ಏರ್ಪಡಲಿದೆ. ಈ ಹಿಂದಿನ 2020 ರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿಯಿಂದ ಇದೇ ಸುಗೌಲಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸಿಂಗ್, ಈ ಬಾರಿ ವಿಐಪಿ ಚಿಹ್ನೆಯ ಮೇಲೆ ಕಣಕ್ಕಿಳಿದಿದ್ದರು.
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.(ಏಜೆನ್ಸೀಸ್)