ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಭುಗಿಲೆದ್ದ ಹಿಂಸಾಚಾರ; ಕೇಂದ್ರದ ನೆರವಿಗೆ ಮೊರೆ

Lailapur
Published on

ನವದೆಹಲಿ: ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳ ಗಡಿಭಾಗದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅನೇಕ ಮನೆ, ಅಂಗಡಿ ಮುಂಗಟ್ಟೆಗಳು ನಾಶವಾಗಿವೆ. ಎರಡೂ ರಾಜ್ಯಗಳು ಕೇಂದ್ರದ ನೆರವಿಗೆ ಮೊರೆ ಹೋಗಿವೆ. ಈ ಹಿಂಸಾಚಾರ ಬೆನ್ನಿಗೆ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದಾರೆ.

ಗಡಿ ವಿವಾದ ಇತ್ಯರ್ಥಗೊಳಿಸುವುದಕ್ಕಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿರುವಾಗಲೇ ಅಸ್ಸಾಂನ ಗಡಿಯುದ್ದಕ್ಕೂ ನಡೆಸುತ್ತಿರುವ ಉಲ್ಲಂಘನೆಗಳ ಪರಿಣಾಮ ಈ ಹಿಂಸಾಚಾರ ಉಂಟಾಗಿದೆ ಎಂದು ಮಿಜೋರಾಂ ಆರೋಪಿಸಿದೆ. ಈ ನಡುವೆ, ಹಿಂಸಾಚಾರ ಭುಗಿಲೆದ್ದ ಲೈಲಾಪುರಕ್ಕೆ ಭೇಟಿ ನೀಡಿರುವ ಅಸ್ಸಾಂನ ಪರಿಸರ ಮತ್ತು ಅರಣ್ಯ ಸಚಿವ ಪರಿಮಲ್ ಶುಕ್ಲಬೈದ್ಯ, ಮಿಜೋರಾಂನಿಂದ ಆಗಮಿಸಿ ಅಲ್ಲಿನ ಮನೆ, ಸ್ಟಾಲ್​ಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಮಿಜೋರಾಂನ ಥಿನ್​ಘ್ಲುನ್​, ಸಾಯಿಹಪುಯಿ 'v' ಮತ್ತು ವೈರೆನ್​ಗ್ಟೆ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯವಸ್ತವಾಗಿದೆ. ಇಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಸ್ಸಾಂನ ಸಹಕಾರ ಬೇಕು. ಅಸ್ಸಾಂನ ಚಾಚರ್​ ಮತ್ತು ಕರೀಮ್​ಗಂಜ್​ ಜಿಲ್ಲೆಗಳ ಅಧಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೆ ಸಾಕಾಗುವುದು. ಎಲ್​ಪಿಜಿ ಸೇರಿ ಅಗತ್ಯವಸ್ತುಗಳ ಸರಬರಾಜಿಗೆ ಅಡ್ಡಿ ಉಂಟುಮಾಡುತ್ತಿರುವುದೇ ಸಮಸ್ಯೆ ಕಾರಣ ಎಂದು ಮಿಜೋರಾಂ ಸರ್ಕಾರ ಹೇಳಿದೆ.

ಈ ನಡುವೆ, ಸೋಷಿಯಲ್ ಮೀಡಿಯಾಗಳಲ್ಲಿ ದಾರಿತಪ್ಪಿಸುವ ಮತ್ತು ದ್ವೇಷ ಉಂಟುಮಾಡುವ ಅನೇಕ ಸಂದೇಶಗಳು ರವಾನೆಯಾಗಿವೆ ಮತ್ತು ಆಗುತ್ತಿವೆ. ಇವೆಲ್ಲವೂ ಶಾಂತಿ -ಸುವ್ಯವಸ್ಥೆ ಹದಗೆಡುವುದಕ್ಕೆ ಕಾರಣವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net