ಡಬಲ್ ಇಂಜಿನ್ ಅಭಿವೃದ್ಧಿ: ರಿಪೋರ್ಟ್ ಕಾರ್ಡ್ ನೀಡಿದ ಪ್ರಧಾನಿ; ಚುನಾವಣೆಗೆ ಮುನ್ನ ಸಂಚಲನ..

Front
ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ನೆನಪಿನ ಕಾಣಿಕೆ ನೀಡಿದರು. ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಸಚಿವ ಡಾ.ಸುಧಾಕರ್ ಇನ್ನಿತರರು ಇದ್ದರು.
Published on

ಬೆಂಗಳೂರು: ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಆಗಿರುವ ಅನುಕೂಲದ ರಿಪೋರ್ಟ್ ಕಾರ್ಡನ್ನು ಜನರ ಮುಂದಿಟ್ಟ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಅಭಿವೃದ್ಧಿ ಪರ್ವಕ್ಕೆ ಖಾತ್ರಿಯನ್ನೂ ನೀಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ, ನಗರ- ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಗೆ ಮುನ್ನ ಪ್ರಧಾನಿ ಭೇಟಿ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಜನರಲ್ಲಿ ಮತ್ತಷ್ಟು ಭರವಸೆ ತುಂಬುವ, ಯುವ ಸಮುದಾಯದಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಹಾಗೂ ಅಭಿವೃದ್ಧಿ ಬಗೆಗಿನ ಇಚ್ಛಾಶಕ್ತಿಯನ್ನು ಪ್ರತಿಪಾದಿಸಲು ಅವರು ವಿವಿಧ ವೇದಿಕೆಗಳನ್ನು ಬಳಸಿಕೊಂಡರು.

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಆದ ಅನುಕೂಲಗಳ ಬಗೆಗೆ ವಿವರ ನೀಡುವ ಜತೆಗೆ, ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಲಾಭವಾಗಿದೆ ಎಂದು ಒತ್ತಿ ಹೇಳುವ ಮೂಲಕ ಪ್ರತಿಪಕ್ಷದ ಟಿಪ್ಪಣಿಗಳಿಗೆ ಯೋಜನೆಗಳ ವರದಿಯ ಮೂಲಕವೇ ಉತ್ತರ ನೀಡಿದ್ದು ವಿಶೇಷವಾಗಿತ್ತು. ಅವರ ಭಾಷಣ ಬೆಂಗಳೂರನ್ನು ಕೇಂದ್ರೀ ಕರಿಸಿದಂತಿದ್ದರೂ, ಕರ್ನಾಟಕದ ವಿಕಾಸ ಯಾತ್ರೆಯ ವೇಗವನ್ನು ವೃದ್ಧಿಸುವ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎನ್ನುವ ಮುಖಾಂತರ ‘ನಮ್ಮ ಮೇಲೆ ವಿಶ್ವಾಸವಿಡಿ’ ಎಂದು ನಾಡಿನ ಜನರಲ್ಲಿ ಕೋರಿದಂತಿತ್ತು.

33 ಸಾವಿರ ಕೋಟಿ ರೂ. ಯೋಜನೆ: ಕೆಂಗೇರಿಯ ಕೊಮ್ಮಘಟ್ಟದಲ್ಲಿ ಕಿಕ್ಕಿರಿದು ತುಂಬಿದ್ದ ಸಾರ್ವಜನಿಕ ಸಮಾರಂಭದಲ್ಲಿ 33 ಸಾವಿರ ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ, ಸರ್ಕಾರದ ಹಲವು ಯೋಜನೆಗಳು ಯುವ ಜನತೆಯ ಕನಸುಗಳನ್ನು ಅರಳಿಸುತ್ತಿದೆ. ಕೊಂಕಣ ರೈಲ್ವೇ ಮಾರ್ಗದ ಶೇ.100ರಷ್ಟು ವಿದ್ಯುದ್ದೀಕರಣ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಕರ್ನಾಟಕದಲ್ಲಿ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಮತ್ತು ಏಳು ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ. ಇದರಿಂದ ಮತ್ತಷ್ಟು ಸೌಲಭ್ಯ ಹಾಗೂ ಅವಕಾಶಗಳು ಸೃಷ್ಟಿಯಾಗಲಿವೆ. ಜತೆಗೆ ಅಭಿವೃದ್ಧಿ ಯೋಜನೆಗಳು ದೇಶವನ್ನು 21ನೇ ಶತಮಾನಕ್ಕೆ ಅಣಿಗೊಳಿಸಿ ಜನರಿಗೆ ಸ್ವಾಭಿಮಾನ, ಗೌರವದ ಬದುಕು ಕಟ್ಟಿಕೊಡಲಿದೆ ಎಂದರು.

ಭಾಷಣದ ಪ್ರಮುಖ 3 ಅಂಶಗಳು

  • ಸದ್ಯದ ವಾತಾವರಣದಲ್ಲಿ ಯುವ ಸಮೂಹವನ್ನು ಸಂತೈಸಿ ಪ್ರೋತ್ಸಾಹಿಸಲು ಸ್ಟಾರ್ಟಪ್, ಯೂನಿಕಾರ್ನ್, ನಾವೀನ್ಯತೆ ಕ್ಷೇತ್ರದ ಬೆಳವಣಿಗೆಯನ್ನು ಉದಾಹರಣೆಯಾಗಿ ನೀಡಿದರು. ಬೆಂಗಳೂರು ಯುವಜನರ ಕನಸನ್ನು ನನಸು ಮಾಡಿಕೊಳ್ಳುವ ನೆಲೆ ಎಂಬುದನ್ನು ಸಾರಿದರು.
  • ಕಾರ್ಪೋರೇಟ್ ವಲಯದ ಬಗೆಗಿನ ನಕಾರಾತ್ಮಕ ವ್ಯಾಖ್ಯಾನ ಮತ್ತು ಮೋದಿ ಓಲೈಕೆ ಮಾಡುತ್ತಿದ್ದಾರೆಂಬ ಟೀಕೆಗೆ ಉತ್ತರವಾಗಿ, ಬೆಂಗಳೂರು ಜಾಗತಿಕ ನಕ್ಷೆಯಲ್ಲಿ ಗುರುತಿಸಿಕೊಳ್ಳಲು ಕಾರಣವಾದದ್ದೇ ಖಾಸಗಿ ಉದ್ಯಮ ಕ್ಷೇತ್ರ ಎಂಬುದನ್ನು ವಿವರಿಸಿದರು. ಸರ್ಕಾರ ಅಥವಾ ಖಾಸಗಿ ವಲಯ ಸೃಜಿಸಿದ ಸ್ವತ್ತು ಜನರಿಗೆ ಲಾಭವಾಗಲಿದೆ ಎಂದು ಸಮರ್ಥಿಸಿಕೊಂಡರು.
  • ಹಿಂದಿನ ಸರ್ಕಾರದೊಂದಿಗೆ ತಮ್ಮ ಸರ್ಕಾರವನ್ನು ತುಲನೆ ಮಾಡಿಕೊಳ್ಳಲು ಮೋದಿಯವರು ಸಬ್ ಅರ್ಬನ್ ರೈಲು ಯೋಜನೆಯನ್ನು ಉದಾಹರಿಸಿದರು. 40 ವರ್ಷದ ಹಿಂದೆ ಚರ್ಚೆಯಾದ ಯೋಜನೆಯು 16 ವರ್ಷಗಳಿಂದ ಕಡತದಲ್ಲೇ ಇತ್ತು, ಶಿಲಾನ್ಯಾಸಗೊಳಿಸಿದ ಸಬ್ ಅರ್ಬನ್ ರೈಲ್ವೆ ಯೋಜನೆಯನ್ನು 40 ತಿಂಗಳಲ್ಲೇ ಪೂರ್ಣಗೊಳಿಸುತ್ತೇವೆಂದು ಖಾತ್ರಿಯನ್ನೂ ನೀಡಿದರು.

ಯೋಜನೆಗಳ ವಿವರ: ಬೆಂಗಳೂರು ಉಪನಗರ ರೈಲ್ವೆ ಯೋಜನೆ, 125 ಕಿ.ಮೀ ಮಾರ್ಗದ ಯಲಹಂಕ ಪೆನುಕೊಂಡ ರೈಲ್ವೆ ಜೋಡಿ ಮಾರ್ಗ, 96 ಕಿಮೀ ಅರಸೀಕರೆ-ತುಮಕೂರು ರೈಲ್ವೆ ಜೋಡಿ ಮಾರ್ಗ, 740 ಕಿ.ಮೀ ಕೊಂಕಣ ರೈಲ್ವೆ ಮಾರ್ಗದ ಶೇ. 100 ವಿದ್ಯುದ್ದೀಕರಣ, ಬೆಂಗಳೂರು ಕಂಟೋನ್ಮೆಂಟ್ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ, ಎರಡು ಪ್ಯಾಕೇಜ್​ಗಳಲ್ಲಿ ಬೆಂಗಳೂರು ವರ್ತಲ ರಸ್ತೆ ನೆಲಮಂಗಲ- ತುಮಕೂರು ರಾಷ್ಟ್ರೀಯ ಹೆದ್ದಾರಿ ಷಟ್ಪಥಗೊಳಿಸುವ ಯೋಜನೆ, ರಾಷ್ಟ್ರೀಯ ಹೆದ್ದಾರಿ 73 ರ ಪೂಂಜಾಲಕಟ್ಟೆಯಿಂದ ಚಾರ್ವಡಿ ಭಾಗದವರೆಗೂ ರಸ್ತೆ ಅಗಲೀಕರಣ, ರಾಷ್ಟ್ರೀಯ ಹೆದ್ದಾರಿ 69 ರ ಮಧುಗಿರಿ-ಗೌರಿಬಿದನೂರು-ಚಿಕ್ಕಬಳ್ಳಾಪುರ ರಸ್ತೆಯ ಅಗಲೀಕರಣ ಹಾಗೂ ಉನ್ನತೀಕರಣ. 1800 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್ ಅಭಿವೃದ್ಧಿಗೆ ಪ್ರಧಾನಿ ಚಾಲನೆ ನೀಡಿದರು. ಕನ್ನಡದಲ್ಲಿ ಮಾತು: ‘ಕರುನಾಡ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು, ಬೆಂಗಳೂರಿನ ಜನತೆಗೆ ವಿಶೇಷವಾದ ನಮಸ್ಕಾರಗಳು’ ಎಂದು ಭಾಷಣ ಆರಂಭಿಸಿದ ಮೋದಿ, ಕರ್ನಾಟಕ ರಾಜ್ಯದ ಜನತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಮರ್ಪಿಸುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ ಎಂದಾಗ ಸಭೆಯಲ್ಲಿ ಹಷೋದ್ಗಾರ, ಕರತಾಡನದ ಸದ್ದು ಮುಗಿಲು ಮುಟ್ಟಿತ್ತು.

ಉಪನಗರ ರೈಲು ಯೋಜನೆ 40 ವರ್ಷ ಚರ್ಚೆಯಲ್ಲೇ ಕಳೆದಿದೆ. ನಾವು 40 ತಿಂಗಳಲ್ಲಿ ಮುಗಿಸುತ್ತೇವೆ. ಇದನ್ನು ಮಾಡುವುದು ನನ್ನ ಹಣೆಯಲ್ಲಿ ಬರೆದಿದೆ. ಡಬಲ್ ಇಂಜಿನ್ ಸರ್ಕಾರ ಈ ಕನಸು ನನಸಾಗಿಸಲು ಕಟಿಬದ್ಧವಾಗಿದೆ. | ನರೇಂದ್ರ ಮೋದಿ ಪ್ರಧಾನಿ

ಬೊಮ್ಮಾಯಿಗೆ ಮೋದಿ ಬಲ: ಕೆಲ ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ‘ನಾಯಕತ್ವ ಬದಲಾವಣೆ’ ಚರ್ಚೆಗೆ ಸ್ವತಃ ಪ್ರಧಾನಿ ಮೋದಿ ಪೂರ್ಣ ವಿರಾಮ ಹಾಕಿದ್ದಾರೆ. ಕೊಮ್ಮಘಟ್ಟದಲ್ಲಿ ಸೋಮವಾರ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾಡನಾಡಿದ ಅವರು, ಸಿಎಂ ಬೊಮ್ಮಾಯಿ ನೇತೃತ್ವ ಅಬಾಧಿತ ಎಂದು ಪರೋಕ್ಷವಾಗಿ ಸಾರಿದರು. ರಾಜ್ಯದ ಸಮಗ್ರ ಅಭಿವೃದ್ಧಿಗೆ ಜತೆಯಾಗಿ ಮುನ್ನಡೆಯೋಣ ಎಂದು ಮುಖ್ಯಮಂತ್ರಿ ಬೊಮ್ಮಾಯಿಗೆ ಪ್ರಧಾನಿ ಹೇಳಿದ್ದಾರೆ.

ಮೋದಿ ಮನದ ಮಾತು

  • ನಾವು ಜಾರಿ ಮಾಡುತ್ತಿರುವ ಈ ಯೋಜನೆಗಳು ಶಿಕ್ಷಣ, ಕೌಶಲ, ಆರೋಗ್ಯ, ಸಂಪರ್ಕ ಸೇರಿ ವಿವಿಧ ಕ್ಷೇತ್ರಗಳ ಆಧಾರಿತವಾಗಿವೆ. ಸುಗಮ ವ್ಯವಹಾರ, ಸುಗಮ ಜೀವನಕ್ಕೆ ಉಪಯುಕ್ತವಾಗಿದೆ. ಜತೆಗೆ ಉದ್ಯೋಗಸ್ಥರು, ಯುವಕರು, ರೈತರು, ಉದ್ಯಮಿಗಳಿಗೆ ಹೊಸ ಅವಕಾಶ ತೆರೆದಿಡಲಿದೆ.
  • ಭಾರತದಲ್ಲಿ ಕೃಷಿ ನಂತರದ ಸ್ಥಾನವನ್ನು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹೊಂದಿವೆ. ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಹೆಚ್ಚಿನ ಉದ್ಯೋಗ ಹಾಗೂ ಆರ್ಥಿಕತೆಗೆ ಇವುಗಳ ಕೊಡುಗೆ ಮಹತ್ವದ್ದಾಗಿದೆ. ಆತ್ಮನಿರ್ಭರ ಭಾರತ ನಿರ್ವಣಕ್ಕೆ ಒತ್ತು ನೀಡಲು ಅವಕಾಶ ನೀಡಲಾಗಿದೆ. ಇದರ ಲಾಭವನ್ನು 45 ಲಕ್ಷಕ್ಕೂ ಅಧಿಕ ಉದ್ಯಮ ವ್ಯಾಪಾರಿಗಳು ಪಡೆದಿದ್ದಾರೆ.
  • 2014ರ ನಂತರ ದೇಶದಲ್ಲಿ ಹೊಸ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಿವೆ. ಡ್ರೋನ್​ನಿಂದ ವಿಮಾನ ತಯಾರಿಕೆವರೆಗೆ ಭಾರತವು ಸ್ವಾವಲಂಬಿಯಾಗುತ್ತಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಂಪೂರ್ಣ ನೆರವು ನೀಡುತ್ತಿದೆ.
  • ಭಾರತೀಯ ರೈಲ್ವೆಯಲ್ಲಿ ರೂಪಾಂತರ ನಡೆದಿದೆ. ಭಾರತೀಯ ರೈಲು ವೇಗವೂ ಆಗಿದೆ, ಸ್ವಚ್ಛವೂ ಆಗಿದೆ. ಹಿಂದೆ ಈ ಬಗ್ಗೆ ಯೋಚಿಸುವುದೂ ಕಷ್ಟವಾಗಿತ್ತು.
  • ರೈಲು, ಏರ್​ಪೋರ್ಟ್, ಹೊರತಾಗಿ ಮಲ್ಟಿ ಮಾಡೆಲ್ ಕನೆಕ್ಟಿವಿಟಿ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದು, ಪಿಎಂ ಗತಿಶಕ್ತಿ ನೆರವಾಗುತ್ತಿದೆ. ಮಲ್ಟಿ ಮಾಡೆಲ್ ಟ್ರಾನ್ಸ್​ಪೋರ್ಟ್ ಮೂಲಕ ಲಾಸ್ಟ್ ಮೈಲ್ ಕನೆಕ್ಟಿವಿಟಿಗೆ ಒತ್ತು ನೀಡಲಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net