

ಮುಂಬೈ: ಒಂದೇ ಕುಟುಂಬದ 9 ಮಂದಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ವರದಿಯಾಗಿದ್ದು, ಆ ಪೈಕಿ 6 ಶವ ಒಂದು ಮನೆಯಲ್ಲಿ, ಇನ್ನು ಮೂರು ಶವ ಪಕ್ಕದ ಇನ್ನೊಂದು ಮನೆಯಲ್ಲಿ ಪತ್ತೆಯಾಗಿವೆ. ಒಂಬತ್ತೂ ಮಂದಿ ವಿಷ ಸೇವಿಸಿದ್ದಾರೆ.
ಮಹಾರಾಷ್ಟ್ರದ ಮೀರಜ್ ತಾಲೂಕಿನ ಮ್ಹೈಸಲ್ ಬಳಿಯ ನಾರ್ವಡ್ ರಸ್ತೆಯ ಅಂಬಿಕಾನಗರ ಚೌಕ ಹತ್ತಿರದ ಮನೆಯೊಂದರಲ್ಲಿ ಈ ಪ್ರಕರಣ ನಡೆದಿದೆ. ಈ ಮನೆಯವರು ಇಂದು ಬೆಳಗಿನಿಂದ ಬಾಗಿಲು ತೆಗೆಯದ್ದನ್ನು ನೆರೆಹೊರೆಯವರು ಹೋಗಿ ಬಾಗಿಲು ತಟ್ಟಿದ್ದಾರೆ. ಆದರೆ ಯಾವ ಪ್ರತಿಕ್ರಿಯೆ ಬರದ್ದರಿಂದ ಬಾಗಿಲು ಒಡೆದು ನೋಡಿದಾಗ ಮನೆಯೊಳಗೆ 6 ಶವಗಳು ಪತ್ತೆಯಾಗಿವೆ. ಬಳಿಕ ಅಲ್ಲೇ ಸಮೀಪದ ರಾಜಧಾನಿ ಕಾರ್ನರ್ನ ಇನ್ನೊಂದು ಮನೆಯಲ್ಲೂ ಬೆಳಗಿನಿಂದ ಬಾಗಿಲು ತೆರೆಯದ್ದರಿಂದ ಒಡೆದು ನೋಡಿದಾಗ, ಅಲ್ಲಿ ಮೂವರ ಶವ ಪತ್ತೆಯಾಗಿದೆ.
ವೈದ್ಯರಾಗಿರುವ ಪೋಪಟ್ ಯಲ್ಲಪ್ಪ ವಾನ್ಮೋರ್ (52), ಸಂಗೀತಾ ಪೋಪಟ್ (48), ಅರ್ಚನಾ ಪೋಪಟ್ ವಾನ್ಮೋರ್ (30), ಶುಭಂ ಪೋಪಟ್ ವಾನ್ಮೋರ್ (28), ಮನಿಕ್ ಯಲ್ಲಪ್ಪ ವಾನ್ಮೋರ್ (49), ರೇಖಾ ಮನಿಕ್ ವಾನ್ಮೋರ್ (45), ಆದಿತ್ಯ ಮನಿಕ್ ವಾನ್ (15), ಅನಿತಾ ಮನಿಕ್ ವಾನ್ಮೋರ್ (28) ಮತ್ತು ಅಕ್ಕತಾಯ್ ವಾನ್ಮೋರ್ (72) ಸಾವಿಗೀಡಾದವರು.
ಈ ಕುಟುಂಬ ಸಂಬಂಧಿಕರು ಮತ್ತು ಗ್ರಾಮಸ್ಥರ ಬಳಿ ಬಹಳಷ್ಟು ಸಾಲ ಮಾಡಿದ್ದರಿಂದ ಅದು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸಾಲ ಕೊಟ್ಟವರನ್ನು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಲು ಮೀರಜ್ಗಾಂವ್ ಪೊಲೀಸರು ಮುಂದಾಗಿದ್ದಾರೆ. ಈ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಸ್ಥಳೀಯರನ್ನು ಆಘಾತಕ್ಕೆ ಒಳಪಡಿಸಿದೆ.