ಚೀನಾದಲ್ಲಿ ಹೆಚ್ಚಾಗುತ್ತಿದೆ ಒನ್​ ಡೇ ವೆಡ್ಡಿಂಗ್​! ಒಂದು ದಿನಕ್ಕೆ ಮಾತ್ರ ಪತ್ನಿ, ಇದರ ಹಿಂದಿದೆ ವಿಚಿತ್ರ ಕಾರಣ

One Day Wedding
Published on

ಬೀಜಿಂಗ್​: ಪ್ರತಿಯೊಂದು ದೇಶವು ಮದುವೆ ಕುರಿತು ತಮ್ಮದೇಯಾದ ಅನೇಕ ನಂಬಿಕೆಗಳನ್ನು ಮತ್ತು ವಿಭಿನ್ನ ಸಂಪ್ರದಾಯಗಳನ್ನು ಹೊಂದಿವೆ. ಆದರೆ, ಚೀನಾ ವಿಚಾರದಲ್ಲಿ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ತುಂಬಾ ವಿಚಿತ್ರ ಎನ್ನಬಹುದು. ಏಕೆಂದರೆ, ಇತ್ತೀಚಿಗೆ ಚೀನಾದಲ್ಲಿ ಏಕದಿನ ವಿವಾಹ ಪದ್ಧತಿ ವೇಗವಾಗಿ ಬೆಳೆಯುತ್ತಿದೆ.

ಕೇವಲ ಒಂದೇ ದಿನಕ್ಕೆ ಯುವಕ-ಯುವತಿಯರು ವರ-ವಧು ಆಗುವ ಮದುವೆ ಇದಾಗಿದೆ. ಈ ರೀತಿಯ ಮದುವೆಗೆ ಯುವಕರು ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಈ ಪ್ರವೃತ್ತಿಯು ಚೀನಾದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಬಹಳ ಚರ್ಚಿತ ವಿಷಯವಾಗಿದೆ. ಯುವಜನರು ಅವಿವಾಹಿತರಾಗಿ ಸಾಯುವ ಬಗ್ಗೆ ವಿವಿಧ ನಂಬಿಕೆಗಳಿರುವುದರಿಂದ ಚೀನಾದಲ್ಲಿ ಇಂತಹ ಪದ್ಧತಿ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ.

ಇಲ್ಲಿ ವರ ಆಗುವ ಯುವಕರು ಕೇವಲ ಒಂದು ದಿನಕ್ಕೆ ಮಾತ್ರ ಹುಡುಗಿಯನ್ನು ಸಂಪ್ರದಾಯದ ಪ್ರಕಾರ ಬಹಳ ಅದ್ಧುರಿಯಾಗಿ ಮದುವೆ ಆಗುತ್ತಾರೆ. ಇಂತಹ ವಿವಾಹಗಳು ಚೀನಾದ ಪುರಾತನ ಸಂಪ್ರದಾಯದ ಭಾಗವಾಗಿಲ್ಲದಿದ್ದರೂ, ಇತ್ತೀಚೆಗೆ ಇಂತಹ ವಿವಾಹಗಳು ದೇಶದಲ್ಲಿ ವ್ಯಾಪಕವಾಗಿ ಹರಡಿವೆ. ಈ ಮದುವೆಗಳ ವಿಶಿಷ್ಟತೆಯೆಂದರೆ ಅವುಗಳಿಗೆ ಯಾವುದೇ ದೊಡ್ಡ ಯೋಜನೆ ಎಂಬುದು ಇರುವುದಿಲ್ಲ. ಇದು ಅತ್ಯಂತ ಅನೌಪಚಾರಿಕ ಮತ್ತು ಗೌಪ್ಯ ರೀತಿಯಲ್ಲಿ ನಡೆಯುತ್ತವೆ.

ಈ ಒಂದು ದಿನದ ಮದುವೆ ಏತಕ್ಕಾಗಿ?

ಚೀನಾದಲ್ಲಿ ಅನೇಕ ಯುವಕರು ಮದುವೆಯಾಗಲು ಮುಂದೆ ಬರುತ್ತಿಲ್ಲ ಎಂದು ಹೇಳಲಾಗಿದೆ. ವಾಸ್ತವವಾಗಿ ಯುವಕನ ಕುಟುಂಬವು ಮದುವೆಗೆ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬಹುತೇಕ ಯುವಕರು ಅವಿವಾಹಿತರಾಗಿಯೇ ಬದುಕುತ್ತಿದ್ದಾರೆ. ಆದರೆ ಸಮಸ್ಯೆ ಏನೆಂದರೆ, ಚೀನಾದಲ್ಲಿ ಹುಡುಗರು ಅವಿವಾಹಿತರಾಗಿ ಸಾಯುವುದನ್ನು ಅಶುಭವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಯುವಕರು ಒಂದು ದಿನಕ್ಕೆ ಮಾತ್ರ ಮದುವೆಯಾಗಲು ಬಯಸುತ್ತಾರೆ. ಅಲ್ಲದೆ, ಏಕಾಂಗಿ ಎಂಬ ಗುರುತನ್ನು ಅಳಿಸಿ ಹಾಕುವ ಸಲುವಾಗಿಯೂ ಈ ಮದುವೆಗಳು ನಡೆಯುತ್ತವೆ ಎನ್ನಲಾಗಿದೆ.

ಈ ಮದುವೆಗಾಗಿ ಎಲ್ಲ ಮಹಿಳೆಯರಿಗೆ ಸಂಬಳ ಸಹ ನೀಡಲಾಗುತ್ತದೆ. ಹುಡುಗಿ ಹಣ ಸ್ವೀಕರಿಸಿ, ಒಂದು ದಿನಕ್ಕೆ ಮಾತ್ರ ವಧು ಆಗುತ್ತಾಳೆ ಮತ್ತು ನಂತರ ತನ್ನ ಸಾಮಾನ್ಯ ಕೆಲಸಕ್ಕೆ ಮರಳುತ್ತಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net