ದುಷ್ಟರ ಆಟ ಬಹಳ ಕಾಲ ನಡೆಯಲ್ಲ ಎಂಬುದನ್ನು ಕರ್ನಾಟಕದ ಜನ ಸಾಬೀತು ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ

Siddaramaiah CM
Published on

ಬೆಂಗಳೂರು: ಶಾಂತಿಯುತ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ನಮ್ಮ ಜನರಿಗೆ ಅರ್ಥವಾಗಿರುವುದರಿಂದ ದುಷ್ಟರ ಆಟಗಳು ಬಹಳ ಕಾಲ ನಡೆಯುವುದಿಲ್ಲ ಎಂಬುದನ್ನು ಕರ್ನಾಟಕದ ಜನರೇ ಸಾಬೀತು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಎಪ್ಪತ್ತೇಳನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜ್ಯ ರಾಜಧಾನಿಯ ಮಾಣಿಕ್​ ಷಾ ಪರೇಡ್​ ಗ್ರೌಂಡ್​ನಲ್ಲಿ ಧ್ವಜಾರೋಹಣ ನೇರವೇರಿಸಿದ ಬಳಿಕ ರಾಜ್ಯದ ಜನತೆಯನ್ನು ಉದ್ದೇಶಿಸಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದರು.

ಭಾಷಣ ಆರಂಭದಲ್ಲಿ ಭಾರತದ 77ನೇ ಸ್ವಾತಂತ್ರೋತ್ಸವದ ಸುಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ನನ್ನ ಹೃತ್ತೂರ್ವಕ ಶುಭಾಶಯಗಳು ಎಂದರು. ಸಾವಿರಾರು ಜನರ ತ್ಯಾಗ, ಬಲಿದಾನಗಳ ಫಲವಾಗಿ ಇಂದು ನಾವು ಸ್ವಾತಂತ್ರ್ಯದ ಸವಿಯುಣ್ಣುತ್ತಿದ್ದೇವೆ. ಪ್ರಾಣದ ಹಂಗು ತೊರೆದು ದಾಸ್ಯದ ಸಂಕೋಲೆಯಿಂದ ದೇಶವನ್ನು ಬಿಡುಗಡೆಗೊಳಿಸಲು ಹೋರಾಡಿದ ಎಲ್ಲ ಮಹಾನ್ ಚೇತನಗಳಿಗೂ ಗೌರವ ಪೂರ್ವಕ ನಮನ ಸಲ್ಲಿಸುತ್ತೇನೆ ಎಂದು ಹೇಳಿದರು.

ಅರ್ಥವೇ ಇರುವುದಿಲ್ಲ

ಸ್ವತಂತ್ರ ಭಾರತದಲ್ಲಿ ಜೀವಿಸುತ್ತಿರುವ ನಮಗೆ ಸ್ವಾತಂತ್ರ್ಯ ಎಂಬುದು ಎಷ್ಟು ದುಬಾರಿಯಾದ ಸಂಗತಿ ಎಂಬುದು ಅರಿವಿಗೆ ಬರಲೇಬೇಕು. ಇಲ್ಲದಿದ್ದರೆ ನಮ್ಮ ಹಿರಿಯರ ತ್ಯಾಗ ಬಲಿದಾನಗಳಿಗೆ ಅರ್ಥವೇ ಇರುವುದಿಲ್ಲ. ಸ್ವಾತಂತ್ರ್ಯ ಎಂಬುದು ಮನುಷ್ಯರ ಜೀವಕ್ಕಿಂತ ಮಿಗಿಲು ಎಂದು ಸ್ವಾತಂತ್ರ್ಯ ಹೋರಾಟಗಾರರು ಭಾವಿಸಿದ್ದರು. ಆದ್ದರಿಂದಲೇ ಎಲ್ಲ ಮಹನೀಯರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಅವರ ತ್ಯಾಗ ಬಲಿದಾನಗಳನ್ನು ದೇಶವು ಶ್ರದ್ಧಾಪೂರ್ವಕವಾಗಿ ಸ್ಮರಿಸಲೇಬೇಕು ಎಂದರು.

ಕತ್ತಿ ಪರದೇಶಿಯಾದರೆ ಮಾತ್ರ ನೋವೆ?

ವಸಾಹತುವಾದ ಮತ್ತು ಸಾಮ್ರಾಜ್ಯವಾದಗಳು ಜೀವಂತವಾಗಿದ್ದಾಗ ಸ್ವಾತಂತ್ರ್ಯ ಗಳಿಸಿದರೆ ಸಾಕು ಅಭಿವೃದ್ಧಿ ಎಂಬುದು ತನ್ನಿಂದ ತಾನೆ ಸಾಧ್ಯವಾಗುತ್ತದೆ ಎಂದು ಭಾವಿಸಿ ನಮ್ಮ ಹಿರಿಯರು ಹೋರಾಟ ಮಾಡಿದ್ದರು. ಇದು ಸತ್ಯ ಕೂಡ ಆಗಿತ್ತು. ಸ್ವಾತಂತ್ರ್ಯವೇನೂ ಲಭಿಸಿತು ಆದರೆ, ನವ ಉದಾರವಾದಿ ನೀತಿಗಳು ಜಗತ್ತಿನಾದ್ಯಂತ ಪ್ರಾರಂಭವಾದ ಮೇಲೆ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಾ ಹೋಯಿತು. ಇಂದು ನಮ್ಮಲಿಯೇ ಶೇ.10 ರಷ್ಟು ಜನ ಶೇ.78 ಕ್ಕಿಂತ ಹೆಚ್ಚಿನ ಪ್ರಮಾಣದ ಸಂಪತ್ತಿನ ಮೇಲೆ, ಯಜಮಾನಿಕೆ ಹೊಂದಿದ್ದಾರೆ. ಬ್ರಿಟಿಷ್ ಭಾರತದಲ್ಲಿ ನಮ್ಮ ದೇಶದ ಸಂಪತ್ತನ್ನು ಬ್ರಿಟಿಷರು ಹೊತ್ತೂಯ್ದರು. ಆದರೆ ಇಂದು ನಮ್ಮಲ್ಲಿ ಕೆಲವೇ ದೊಡ್ಡ ಬಂಡವಾಳಿಗರ ಬಳಿ ಶೇಖರಣೆಗೊಳ್ಳುತ್ತಿದೆ. ಈ ರೀತಿಯಾದರೆ, ಅಭಿವೃದ್ಧಿ ಸಾಧ್ಯವೆ? ಕುವೆಂಪು ಅವರು ತಮ್ಮದೊಂದು ಪದ್ಯದಲ್ಲಿ ಕತ್ತಿ ಪರದೇಶಿಯಾದರೆ ಮಾತ್ರ ನೋವೆ? ನಮ್ಮವರೆ ಹದಹಾಕಿ ತಿವಿದರದು ಹೂದೆ? ಎಂದು ಪ್ರಶ್ನಿಸಿದ್ದಾರೆ. ಇದನ್ನೆಲ್ಲ ಮನಗಂಡೆ. ನಾವು ಸಂಪತ್ತಿನ ಸಂಗ್ರಹ ಮತ್ತು ಹಂಚಿಕ ಹಾಗೂ ಮರುಹಂಚಿಕೆಗಳಲ್ಲಿ ಸಾಮಾಜಿಕ ನ್ಯಾಯವನ್ನು ಪಾಲಿಸುತ್ತಿದ್ದೇವೆ. ಅದಕ್ಕಾಗಿಯೇ ನಾವು ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವನಿಧಿ ಎಂಬ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಅವರ ಪ್ರಮೇಯವಾದ ಅಭಿವೃದ್ಧಿಯ ಸ್ವಾತಂತ್ರ್ಯ ಎಂಬುದರಲ್ಲಿ ನಂಬಿಕೆಯಿಟ್ಟು ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದ್ದೇವೆ ಎಂದು ಹೇಳಿದರು.

ಮಹಿಳೆಯರ ಹಾಗೂ ನಾಡಿನ ಸಬಲೀಕರಣಕ್ಕೆ ಪುಷ್ಟಿ 

ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ನಡೆದ ಸಚಿವ ಸಂಪುಟ ಸಭೆಯಲ್ಲಿ ಚುನಾವಣೆಗೂ ಮೊದಲು ನಾವು ಆಶ್ವಾಸನೆ ನೀಡಿದ್ದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ತಾತ್ವಿಕ ಅನುಮೋದನೆ ಪಡೆದು, ಅಧಿಕಾರಕ್ಕೆ ಬಂದ ಮೂರು ವಾರಗಳಲ್ಲಿಯೇ ಗ್ಯಾರಂಟಿ ಯೋಜನೆಗಳ ಜಾರಿ ಪ್ರಾರಂಭಿಸಿ, ಎಲ್ಲ ಸವಲತ್ತುಗಳನ್ನು ಜನರಿಗೆ ನೇರವಾಗಿ ತಲುಪಿಸುತ್ತಿದ್ದೇವೆ. ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ 'ಶಕ್ತಿ ಯೋಜನೆಯು ನಿಜಾರ್ಥದಲ್ಲಿ ಮಹಿಳೆಯರ ಹಾಗೂ ನಾಡಿನ ಸಬಲೀಕರಣಕ್ಕೆ ಪುಷ್ಟಿ ನೀಡಿದೆ. ಪ್ರತಿದಿನ ಸರಾಸರಿ 50 ರಿಂದ 60 ಲಕ್ಷ ಮಹಿಳೆಯರಿಗೆ ಇದರ ಅನುಕೂಲವಾಗುತ್ತಿದೆ. ನಮ್ಮ ಈ ಯೋಜನೆಯ ಕುರಿತು ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಾಧ್ಯಮಗಳು ಅಧ್ಯಯನ ಮಾಡಿ ವ್ಯಾಪಕ ಪ್ರಶಂಸೆ ಮಾಡಿ ಬರೆದಿವೆ. ಶಕ್ತಿ ಯೋಜನೆ ನಮ್ಮ ಆರ್ಥಿಕ ಶಕ್ತಿಗೆ ನವ ಚೈತನ್ಯವನ್ನೇ ಉಂಟು ಮಾಡಿದೆ ಎಂದು ತಿಳಿಸಿದರು.

ಉಚಿತ ವಿದ್ಯುತ್‌ ಸೌಲಭ್ಯ 

ಎರಡನೇ ಗ್ಯಾರಂಟಿ ಯೋಜನೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ. ಈ ಯೋಜನೆ ಜುಲೈ 1 ರಿಂದ ಜಾರಿಗೆ ಬಂದಿದ್ದು, ಆಗಸ್ಟ್ 1ರ ಬಿಲ್ ನಿಂದ ಗ್ರಾಹಕರಿಗೆ ದೊರೆಯುತ್ತಿದೆ. ಸುಮಾರು 2 ಕೋಟಿ ಗ್ರಾಹಕರಿಗೆ ಸೌಲಭ್ಯ ಸಿಕ್ಕಿದ್ದು, ಗ್ರಾಹಕರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಇದುವರೆಗೆ 1.49 ಕೋಟಿ ಗ್ರಾಹಕರು ನೋಂದಾಯಿಸಿಕೊಂಡಿದ್ದು, ಉಚಿತ ವಿದ್ಯುತ್‌ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.

ಉಳಿದ ಕುಟುಂಬಗಳಿಗೆ ಸದ್ಯದಲ್ಲಿಯೇ ಹಣ 

ಹಸಿವು ಮುಕ್ತ ಕರ್ನಾಟಕದ ಕಲ್ಪನೆಯನ್ನು ಸಾಕಾರಗೊಳಿಸಲು ನಮ್ಮ ಸರ್ಕಾರ ಜಾರಿಗೊಳಿಸಿರುವ ಮತ್ತೊಂದು ಗ್ಯಾರಂಟಿ ಯೋಜನೆ ಅನ್ನ ಭಾಗ್ಯ. ಕೇಂದ್ರ ಸರ್ಕಾರದ ಉದ್ದೇಶಪೂರ್ವಕ ಅಸಹಕಾರದ ನಡುವೆಯೂ ನಮ್ಮ ಸರ್ಕಾರವು ಪ್ರತಿ ಫಲಾನುಭವಿಗೆ ಕೇಂದ್ರವು ನೀಡುವ 5 ಕೆಜಿ ಅಕ್ಕಿಯೊಂದಿಗೆ ಹೆಚ್ಚುವರಿಯಾಗಿ 5 ಕೆಜಿ ಆಹಾರ ಧಾನ್ಯ ನೀಡಲು ಕ್ರಮ ತೆಗೆದುಕೊಳ್ಳುತ್ತಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನಗದು ವರ್ಗಾಯಿಸಲು ನಿರ್ಧರಿಸಿದ್ದು, ಈ ವರೆಗೆ 1.04 ಕೋಟಿ ಕುಟುಂಬಗಳು ನಗದು ಸೌಲಭ್ಯ ಪಡೆಯುತ್ತಿವೆ. ಉಳಿದ ಕುಟುಂಬಗಳಿಗೆ ಸದ್ಯದಲ್ಲಿಯೇ ಹಣ ವರ್ಗಾಯಿಸಲು ಕ್ರಮ ಕೈಗೊಳ್ಳಲಿದ್ದೇವೆ ಎಂದರು.

1.08 ಕೋಟಿ ಯಜಮಾನಿಯರು ನೋಂದಣಿ 

ಬಡತನ ನಿವಾರಣೆಗೆ ನೇರ ನಗದು ನೀಡುವ ಕಾರ್ಯಕ್ರಮಗಳು ಅತ್ಯುತ್ತಮ ಪರಿಹಾರ ನೀಡಬಲ್ಲವು. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ‘ಗೃಹಲಕ್ಷ್ಮಿ’ ಯೋಜನೆಯನ್ನು ಜಾರಿಗೆ ತರುತ್ತಿದೆ. ನೋಂದಣಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ದಿನಾಂಕ ಆಗಸ್ಟ್ 27 ರಂದು ಮಹಿಳೆಯರ ಖಾತೆಗೆ ಮಾಸಿಕ 2000 ರೂ.ಗಳನ್ನು ವರ್ಗಾಯಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ. ಈಗಾಗಲೆ 1.08 ಕೋಟಿ ಕುಟುಂಬಗಳ ಯಜಮಾನಿಯರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಯುವಕರಿಗೆ ಬೆಂಬಲ ನೀಡುವ ಯೋಜನೆ 

ಪದವಿ, ಡಿಪ್ಲೊಮಾ ಪಡೆದ ಯುವಕರಿಗೆ ಕೂಡಲೇ ಉದ್ಯೋಗ ದೊರೆಯದಿದ್ದರೆ, ನಿರಾಶರಾಗದಂತೆ, ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ, ಬೆಂಬಲ ನೀಡುವ ಯೋಜನೆ ಯುವನಿಧಿ. ಶಿಕ್ಷಣ ಪಡೆದು ಆರು ತಿಂಗಳಾದರೂ ಉದ್ಯೋಗ ದೊರೆಯದ ಯುವಜನರಿಗೆ ಉದ್ಯೋಗ ದೊರೆಯುವವರೆಗೆ ಅಥವಾ ಗರಿಷ್ಠ ಎರಡು ವರ್ಷದವರೆಗೆ, ಪದವೀಧರರಿಗೆ 3000 ರೂ. ಹಾಗೂ ಡಿಪ್ಲೊಮಾ ಪಡೆದವರಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. 2022-23ರ ಶೈಕ್ಷಣಿಕ ವರ್ಷ ಅಂತ್ಯಗೊಂಡ 6 ತಿಂಗಳ ನಂತರ ಈ ಯೋಜನೆ ಜಾರಿಯಾಗಲಿದೆ ಎಂದರು.

ಹಲವು ಯೋಜನೆಗಳ ಮರುಜಾರಿಗೆ ಕ್ರಮ

ಮುಂಗಾರು ವಿಳಂಬವಾಗಿ ಪ್ರಾರಂಭವಾದ್ದರಿಂದ ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಬರದ ಛಾಯೆ ಇತ್ತು. ಜುಲೈ ತಿಂಗಳಲ್ಲಿ ಭಾರಿ ಮಳೆಯಾಗಿದ್ದರಿಂದ ಹಲವೆಡೆ ಪ್ರವಾಹ ಪರಿಸ್ಥಿತಿಯೂ ತಲೆದೋರಿತು. ಅತಿವೃಷ್ಟಿ, ಅನಾವೃಷ್ಟಿಗಳೆರಡನ್ನೂ ಸಮರ್ಥವಾಗಿ ಎದುರಿಸಲು ನಮ್ಮ ಸರ್ಕಾರ ಸಿದ್ಧವಾಗಿದೆ ಹಾಗೂ ಇದರಿಂದಾಗುವ ಹಾನಿಯನ್ನು ತಗ್ಗಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಕಳೆದ ಕೆಲವು ವರ್ಷಗಳಲ್ಲಿ ಸ್ಥಗಿತಗೊಂಡಿದ್ದ, ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿದ್ದ ಕೃಷಿ ಭಾಗ್ಯ, ಅನುಗ್ರಹ ಯೋಜನೆ, ವಿದ್ಯಾಸಿರಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ಥಗಿತಗೊಂಡಿರುವ ವಿದ್ಯಾರ್ಥಿವೇತನ ಯೋಜನೆ ಸೇರಿದಂತೆ ಹಲವು ಯೋಜನೆಗಳ ಮರುಜಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅವಕಾಶ ವಂಚಿತ ಸಮುದಾಯಗಳ ಹಿತರಕ್ಷಣೆ ಹಾಗೂ ಅವರ ಅಭ್ಯುದಯ ನಮ್ಮ ಕಾಳಜಿಯಾಗಿದೆ. ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಅಲ್ಪಸಂಖ್ಯಾತರು, ಮಹಿಳೆಯರು, ಕಾರ್ಮಿಕರು, ರೈತರು ಹಾಗೂ ಇತರ ಶೋಷಿತ ವರ್ಗದವರ ಶ್ರೇಯೋಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಪರಿಶಿಷ್ಟ ಜಾತಿ, ಪಂಗಡದವರಿಗೆ ಹಂಚಿಕೆಯಾದ ಭೂಮಿಯ ಅಕ್ರಮ ಪರಭಾರೆ ವಿರುದ್ಧ ದೂರು ನೀಡಲು ಯಾವುದೇ ಕಾಲಮಿತಿ ಇಲ್ಲ ಎಂಬುದನ್ನು ನಿಚ್ಚಳಗೊಳಿಸಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net