

ಹುಬ್ಬಳ್ಳಿ: ಕೋವಿಡ್-19 ಪ್ರಕರಣಗಳ ನಿಯಂತ್ರಣ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಧಿಸಲಾಗಿರುವ ಲಾಕ್ಡೌನ್ ಈಗಾಗಲೇ ಮೂರನೇ ಸಲ ವಿಸ್ತರಣೆಗೊಂಡಿದ್ದು, ಸದ್ಯದ ನಿರ್ಧಾರದ ಪ್ರಕಾರ ಈ ಲಾಕ್ಡೌನ್ ಜೂ. 14ರ ವರೆಗೆ ಜಾರಿಯಲ್ಲಿರಲಿದೆ. ಆದರೆ ಅದಾದ ಬಳಿಕವೂ ಲಾಕ್ಡೌನ್ ಮುಂದುವರಿಯಲಿದೆಯೇ ಇಲ್ಲವೋ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ ಇಂದು ಧಾರವಾಡ ಜಿಲ್ಲೆಯ ಕೋವಿಡ್ ನಿಯಂತ್ರಣ ಹಾಗೂ ಇತರೆ ಅಭಿವೃದ್ಧಿ ವಿಷಯಗಳ ಪರಿಶೀಲನೆ ಸಭೆ ನಡೆಸಿ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು ಲಾಕ್ಡೌನ್ ಕುರಿತ ಆಲೋಚನೆಯನ್ನು ಬಹಿರಂಗಪಡಿಸಿದರು.
ಈ ಹಿಂದೆ ಲಾಕ್ಡೌನ್ ವಿಸ್ತರಣೆ ಸಂದರ್ಭದಲ್ಲೇ ಮುಂದೆ ಮತ್ತೆ ಲಾಕ್ಡೌನ್ ವಿಸ್ತರಣೆ ಮಾಡುವ ಅಗತ್ಯ ಬಂದರೂ ಬಂದೀತು ಎಂಬ ಮಾತನ್ನು ಸಿಎಂ ಹೇಳಿದ್ದರು. ಈ ಹಿಂದಿನಂತೆಯೇ ಜನರು ಉತ್ತಮ ರೀತಿಯಲ್ಲಿ ಸಹಕರಿಸಿದರೆ ಲಾಕ್ಡೌನ್ ಮುಗಿಯಲಿದೆ, ಇಲ್ಲದಿದ್ದರೆ ಮುಂದುವರಿಸಬೇಕಾದೀತು ಎಂದು ಕೂಡ ಅವರು ಹೇಳಿದ್ದರು.
ಇದೀಗ ಲಾಕ್ಡೌನ್ ಕುರಿತ ತಮ್ಮ ಲೆಕ್ಕಾಚಾರವನ್ನು ಸಿಎಂ ಯಡಿಯೂರಪ್ಪ ಸ್ಪಷ್ಟವಾಗಿ ಬಹಿರಂಗಪಡಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.11.09ರಷ್ಟಿದ್ದು, ಅದು ಶೇ.05ಕ್ಕೆ ಬಂದರೆ ರಾಜ್ಯವನ್ನು ಅನ್ಲಾಕ್ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ತಿಳಿಸಿದ್ದಾರೆ. ಒಂದುವೇಳೆ ಈ ಪ್ರಮಾಣಕ್ಕೆ ಪಾಸಿಟಿವಿಟಿ ಪ್ರಮಾಣ ಇಳಿಯದಿದ್ದರೆ ಲಾಕ್ಡೌನ್ ಮುಂದುವರಿದರೂ ಅಚ್ಚರಿ ಇಲ್ಲ ಎಂಬುದನ್ನು ಅವರು ಈ ಮೂಲಕ ಪರೋಕ್ಷವಾಗಿ ತಿಳಿಸಿದ್ದಾರೆ.