

ನವದೆಹಲಿ: ಕರೊನಾ ಹಾವಳಿಯ ಈ ಸಂದರ್ಭದಲ್ಲಿ ಈಗಾಗಲೇ ಲಸಿಕೆ ಅಭಿಯಾನ ಶುರುವಾಗಿದೆ. ಅದಾಗ್ಯೂ ವಯಸ್ಸು ಇತ್ಯಾದಿ ಆದ್ಯತೆ ಮೇಲೆಯೇ ಲಸಿಕೆ ವಿತರಿಸಲಾಗುತ್ತಿರುವುದರಿಂದ ಲಸಿಕೆ ಪಡೆದುಕೊಂಡವರಿಗೆ ಖುಷಿ ಸಹಜ. ಹೀಗಾಗಿ ಎಷ್ಟೋ ಜನ ಲಸಿಕೆ ಪಡೆಯುತ್ತಿದ್ದಂತೆ ವ್ಯಾಕ್ಸಿನೇಷನ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದೇನೋ ಪರವಾಗಿಲ್ಲ, ಆದರೆ ಫಸ್ಟ್ ಡೋಸ್ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್ ಹೀಗೇನಾದ್ರೂ ಮಾಡ್ಬಿಟ್ಟೀರಾ, ಜೋಕೆ..!!!
ಹೌದು.. ಲಸಿಕೆ ಪಡೆದುಕೊಂಡವರು ಅದರ ಸರ್ಟಿಫಿಕೇಟ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬಾರದು ಎಂದು ಇದೀಗ ಸರ್ಕಾರವೇ ಹೇಳಿದೆ. ಅಂದರೆ ಕೇಂದ್ರ ಗೃಹ ಸಚಿವಾಲಯದಿಂದ ನಿರ್ವಹಣೆ ಆಗುತ್ತಿರುವ ಸೈಬರ್ ದೋಸ್ಟ್ ಟ್ವಿಟರ್ ಹ್ಯಾಂಡಲ್ ಮೂಲಕ ಇಂಥದ್ದೊಂದು ಎಚ್ಚರಿಕೆ ನೀಡಲಾಗಿದೆ.
ಲಸಿಕೆ ಫಸ್ಟ್ ಡೋಸ್ ಪಡೆದುಕೊಳ್ಳುತ್ತಿದ್ದಂತೆ ಸಿಗುವ ಸರ್ಟಿಫಿಕೇಟ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ. ಅದರಲ್ಲಿ ನಿಮ್ಮ ಹೆಸರು, ಆಧಾರ್ ಮಾಹಿತಿ ಸೇರಿ ಇತರ ವೈಯಕ್ತಿಕ ವಿವರಗಳು ಇರುತ್ತವೆ. ಅದನ್ನು ಸೈಬರ್ ವಂಚಕರು ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಸೈಬರ್ ದೋಸ್ತ್ ಎಚ್ಚರಿಕೆ ನೀಡಿದೆ. ಜನರು ಸೈಬರ್ ವಂಚನೆಗೆ ಗುರಿಯಾಗದಂತೆ ಜಾಗೃತಿ ಮೂಡಿಸುವ ಕೆಲಸವನ್ನು ಸೈಬರ್ ದೋಸ್ತ್ ಮೂಲಕ ಕೇಂದ್ರ ಗೃಹ ಸಚಿವಾಲಯ ಮಾಡುತ್ತಿದೆ.