

ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಚಟುವಟಿಕೆಯಿಂದಲೇ ಗಮನ ಸೆಳೆಯುತ್ತ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿರುವ ನಟ ರಿಯಲ್ ಸ್ಟಾರ್ ಉಪೇಂದ್ರ ಈಗ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. ಟ್ವಿಟರ್ನಲ್ಲಿ ಇದೀಗ ಅವರ ಫಾಲೋವರ್ಸ್ ಸಂಖ್ಯೆ 1 ಮಿಲಿಯನ್ ದಾಟಿದೆ.
ಕರೊನಾ ಸಂಕಷ್ಟದ ಕಾಲದಲ್ಲಿ ಕಳೆದ ಎರಡು ವಾರಗಳಿಂದ ಚಿತ್ರರಂಗದ ಕಲಾವಿದ-ತಾಂತ್ರಿಕ ವರ್ಗದ 3 ಸಾವಿರ ಮಂದಿಗೆ ದಿನಸಿ ಕಿಟ್ ಇತ್ಯಾದಿ ವಿತರಿಸಿರುವ ಉಪೇಂದ್ರ, ಸಂಕಷ್ಟದಲ್ಲಿರುವ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಿ ಸಂತ್ರಸ್ತರಾಗಿರುವ ಹಲವರಿಗೆ ಉಚಿತವಾಗಿ ಹಂಚುವ ಕೆಲಸವನ್ನೂ ಮಾಡುತ್ತಿದ್ದಾರೆ. ಇವರ ಈ ಸಮಾಜಸೇವೆಗೆ ಹಲವರು ಕೈಜೋಡಿಸಿದ್ದಲ್ಲದೆ, ಇದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆದು, ಅವರ ಅಭಿಮಾನಿಗಳೂ ಅಲ್ಲಲ್ಲಿ ಇಂಥ ಸೇವೆ ಮಾಡುವಂತೆ ಸಂಚಲನ ಸೃಷ್ಟಿಸಿತ್ತು.
ಇನ್ನು ಟ್ವಿಟರ್ನಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿರುವ ಸ್ಯಾಂಡಲ್ವುಡ್ ನಟರ ಪೈಕಿ ಸುದೀಪ್ ಹಾಗೂ ಉಪೇಂದ್ರ ಕಳೆದ ಕೆಲವು ವರ್ಷಗಳಿಂದ ಮುಂಚೂಣಿಯಲ್ಲಿದ್ದಾರೆ. ನಾಲ್ಕು ವರ್ಷಗಳಿಂದಲೂ ಟ್ವಿಟರ್ನಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿರುವ ಕನ್ನಡ ನಟ ಎಂಬ ಖ್ಯಾತಿಯನ್ನು ಕಿಚ್ಚ ಸುದೀಪ್ ಹೊಂದಿದ್ದು, ಈಗಲೂ ಅವರೇ ಮುಂಚೂಣಿಯಲ್ಲಿದ್ದಾರೆ.