

ನವದೆಹಲಿ: ಎಮ್ಸಿ ಕೋಡ್ ಎಂದೇ ಖ್ಯಾತಿ ಪಡೆದಿರುವ ರ‍್ಯಾಪರ್ ಆದಿತ್ಯ ತಿವಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಅನುಮಾನವೊಂದು ಈಗ ಅವರ ಆಪ್ತರು-ಅಭಿಮಾನಿಗಳನ್ನು ಕಾಡಲಾರಂಭಿಸಿದೆ. ಮತ್ತೊಂದೆಡೆ ನಾಪತ್ತೆಯಾಗಿರುವ ಅವರ ಇನ್ಸ್ಟಾಗ್ರಾಮ್ನಲ್ಲಿರುವ ಕೊನೆಯ ಪೋಸ್ಟ್ನಲ್ಲಿನ ಸಾಲುಗಳು ಅಂಥ ಅನುಮಾನದ ಜತೆಗೆ ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ರ‍್ಯಾಪರ್ ಆದಿತ್ಯ ತಿವಾರಿ ಬುಧವಾರದಿಂದ ನಾಪತ್ತೆಯಾಗಿದ್ದು, ಅವರ ಪತ್ತೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಹಲವರು ಸೋಷಿಯಲ್ ಮೀಡಿಯಾ ಮೂಲಕ ದೆಹಲಿ ಪೊಲೀಸರ ಗಮನ ಸೆಳೆದು ಆಗ್ರಹ ವ್ಯಕ್ತಪಡಿಸಿದ್ದಾರೆ. ಇನ್ನು ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹತಾಶೆಯ ಸಂದೇಶ ಪೋಸ್ಟ್ ಆಗಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯೂ ಇರಬಹುದು ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ.
'ನಾನು ಇಲ್ಲಿ ಯುಮನಾ ನದಿ ತೀರದ ಸೇತುವೆಯೊಂದರ ಮೇಲೆ ನಿಂತಿದ್ದೇನೆ..' ಎಂದು ಹೇಳುವ ಜತೆಗೆ ಹಲವು ಸಂಶಯ ಮೂಡಿಸುವ ರೀತಿಯಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿರುವ ಆದಿತ್ಯ, 'ನಾನು ಯಾವುದಕ್ಕೂ ಯಾರನ್ನೂ ದೂಷಿಸುತ್ತಿಲ್ಲ. ಈ ಜಗತ್ತು ನನ್ನ ಬಗ್ಗೆ ಅಪೇಕ್ಷಿಸುತ್ತಿರುವ ಶಿಕ್ಷೆ ನನ್ನ ಅಸ್ತಿತ್ವದಿಂದ ನಾನೇ ಮರೆಯಾಗುವುದರಲ್ಲಿ ಇರಬಹುದೇನೋ..' ಎಂದು ಅವರು ಬರೆದುಕೊಂಡಿದ್ದಾರೆ. ಇನ್ನು ಆದಿತ್ಯ ಹಿಂದುಗಳ ಕುರಿತು ಈ ಹಿಂದೆ ಅವಹೇಳನಕಾರಿಯಾಗಿ ಮಾತನಾಡಿದ್ದ ಹಳೇ ಆಡಿಯೋ ತುಣುಕು ಕೆಲವು ದಿನಗಳ ಹಿಂದೆ ಟ್ವಿಟರ್ನಲ್ಲಿ ಹರಿದಾಡಿದ್ದು, ದೊಡ್ಡ ವಿರೋಧ ಹುಟ್ಟುಹಾಕಿತ್ತು. ಮಾತ್ರವಲ್ಲ ಅವರು ಬೆದರಿಕೆಯನ್ನೂ ಎದುರಿಸಬೇಕಾಗಿತ್ತು. ಆ ಹಿನ್ನೆಲೆಯಲ್ಲೂ ಈ ಎಲ್ಲ ಬೆಳವಣಿಗೆಗಳು ನಡೆದಿರಲೂಬಹುದು ಎಂದೂ ಹೇಳಲಾಗುತ್ತಿದೆ.