

ಕೋಲಾರ: ಅತ್ತ ಮೈಸೂರಲ್ಲಿ ಐಎಎಸ್ ಅಧಿಕಾರಿಗಳಿಬ್ಬರ ಜತೆಗೆ ಜನಪ್ರತಿನಿಧಿಗಳ ಸಂಘರ್ಷ ನಡೆಯುತ್ತಿದ್ದರೆ ಇತ್ತ ಕೋಲಾರದಲ್ಲಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆಯೇ ನಡೆದಿದೆ. ಕೋಲಾರ ಜಿಲ್ಲೆ ಮುಳಬಾಗಿಲು ನಗರಸಭೆ ಆಯುಕ್ತ ಶ್ರೀನಿವಾಸಮೂರ್ತಿ ಅವರ ಮೇಲೆ ಹಲ್ಲೆ ನಡೆದಿದೆ.
ಮುಳಬಾಗಿಲು ನಗರಸಭೆ ಉಪಾಧ್ಯಕ್ಷೆ ಭಾಗ್ಯಮ್ಮ ಅವರ ಪತಿ ರಾಮಚಂದ್ರಪ್ಪ ಹಾಗೂ ಪುತ್ರ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಎರಡೂ ಕಡೆಯವರಿಂದ ಮುಳಬಾಗಿಲು ಪೊಲೀಸ್ ಠಾಣೆಗೆ ದೂರು-ಪ್ರತಿದೂರು ದಾಖಲಾಗಿದೆ.
ಪೌರಕಾರ್ಮಿಕರಿಗೆ ಫುಡ್ ಕಿಟ್ ನೀಡುವ ವಿಚಾರದಲ್ಲಿ ಉಂಟಾದ ವಾಗ್ವಾದ ಕೊನೆಯಲ್ಲಿ ಹೀಗೆ ಹಲ್ಲೆಯವರೆಗೂ ತಲುಪಿದೆ. ಫುಡ್ ಕಿಟ್ ಕೊಡುವ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂಬ ಕಾರಣಕ್ಕೆ ಸಿಟ್ಟಾದ ಉಪಾಧ್ಯಕ್ಷೆಯ ಪತಿ-ಪುತ್ರ ಜಗಳ ತೆಗೆದಿದ್ದು, ಹೊಯ್ಕೈ ಹಂತಕ್ಕೆ ತಲುಪಿ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.