ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ: ಡಿಕೆಶಿ ವಾಗ್ದಾಳಿ

WhatsApp Image 2024-05-03 at 2.27.44 PM
Published on

ಮುಂಡಗೋಡ: ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರುಳು ಮಾಡಿದೆ. ಅತಿಕ್ರಮಣದಾರರ ವಿಚಾರದಲ್ಲಿಯೂ ರಾಜಕೀಯ ಮಾಡಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

ಇಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ- 2 ಸಮಾವೇಶದಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಅರಣ್ಯ ಅತಿಕ್ರಮಣದಾರರಿಗೆ ಪಟ್ಟ ಕೊಡಿಸಲಿದೆ.‌ ಈ ಬಗ್ಗೆ ಯಾರೂ ಹೆದರುವ ಅಗತ್ಯವಿಲ್ಲ. ಅರಣ್ಯ ಅತಿಕ್ರಮಣದಾರರ ಪರ ಹೋರಾಟ ನಡೆಸುತ್ತಿರುವ ರವೀಂದ್ರ ನಾಯ್ಕರಿಗೆ ಸಹ ಸೂಕ್ತ ಸ್ಥಾನಮಾನ ನೀಡಲಿದೆ" ಎಂದರು.

"ರಾಜ್ಯದಲ್ಲಿ ಬರ ಬಂದಿದೆ. ‌200 ತಾಲೂಕುಗಳಲ್ಲಿ ಬರಗಾಲ ಇದೆ. ಬರ ಪರಿಹಾರದಲ್ಲಿ ಕೇಂದ್ರ ಸರಕಾರ, ರಾಜ್ಯಕ್ಕೆ ಸಹಾಯ ಮಾಡಿಲ್ಲ. ಕೇಂದ್ರ ಸರಕಾರ ಸತ್ತು‌ ಹೋಗಿದೆ. ಕೊರೋನಾ ಸಂದರ್ಭದಲ್ಲಿ ಕೇಂದ್ರದ ಮುಂದೆ ಹೋಗಿ ಪರಿಹಾರ ಕೇಳಿದ್ದೆವು. ಆದರೆ ಆಗಲೂ ಇವರ ಸರಕಾರ ಸಹಾಯ ಮಾಡಿಲ್ಲ. ಕಾಂಗ್ರೆಸ್ ಸರಕಾರದಿಂದ ಬಡವರಿಗೆ ಭಾರೀ ಸಹಾಯವಾಗಿದೆ" ಎಂದರು.

"ನಾವೇನು ದೇವಸ್ಥಾನ ಕಟ್ಟಿಲ್ವಾ? ನಾವೆಲ್ಲರು ಹಿಂದು. ಬಿಜೆಪಿ ಹಿಂದುತ್ವದ ರಾಜಕಾರಣ ಮಾಡುತ್ತಿದೆ. ಬಂಗಾರಪ್ಪರ ಕಾಲದಲ್ಲೇ ನಾವು ನೂರಾರು ದೇವಸ್ಥಾನ ಕಟ್ಟಿದ್ದೇವೆ. ಧರ್ಮದಲ್ಲಿ ರಾಜಕಾರಣ ಮಾಡುವ ಬಿಜೆಪಿಗೆ ಹಿಂದುತ್ವ ರಾಜಕಾರಣ ಮಾಡುವ ಹಕ್ಕಿಲ್ಲ. ಕಾಂಗ್ರೆಸ್ ರೈತರಿಗೆ ಉಚಿತ ವಿದ್ಯುತ್ ನೀಡಿತು. ಬಡವರಿಗಾಗಿ ನರೇಗಾ ಅಡಿ ಉದ್ಯೋಗ ನೀಡಿತು. ನಾವು ಅಧಿಕಾರಕ್ಕೆ ಬಂದ ನಂತರ ನರೇಗಾ ಕೂಲಿಯನ್ನು ಮತ್ತಷ್ಟು ಹೆಚ್ಚಿಸುತ್ತೇವೆ. ಕೊರೊನಾ ಸಂದರ್ಭದಲ್ಲಿ 22 ಸಾವಿರ ಕೋಟಿ ರೂ. ಕೊಟ್ಟಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿತು.‌ ಆದರೆ ಯಾವುದೇ ಹಣ ಬರಲಿಲ್ಲ" ಎಂದರು.

"ರಾಜ್ಯದಲ್ಲಿ ಐದು ಸಾವಿರ ಹಣ ಕೊಡುತ್ತೇವೆಂದು ನಾಲ್ಕೈದು ಜನಕ್ಕೆ ನೀಡಿ ಸುಮ್ಮನಾದರು. ಕೋವಿಡ್ ವ್ಯಾಕ್ಸಿನ್​ನಿಂದ ದೇಹಕ್ಕೆ ಸಮಸ್ಯೆಯಾಗುತ್ತಿದೆ ಎಂಬ ವರದಿ ನೋಡಿದೆ. ಇದಕ್ಕೆ ಹೊಣೆ ಯಾರು? ಔಷಧಿ ನೀಡಿದ ಕಂಪನಿ ಎಲೆಕ್ಷನ್ ಬಾಂಡ್​ನಲ್ಲಿ ಬಿಜೆಪಿಗೆ ಹಣ ನೀಡಿದೆ. ಆ ಮೂಲಕ ಕೊರೋನಾದಲ್ಲೂ ಮಾಫಿಯಾ ಮಾಡಿದ್ದಾರೆ" ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net