

ನವದೆಹಲಿ: ರಾಜಕೀಯ ಅಲ್ಲೋಲಕಲ್ಲೋಲ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಪಾಕಿಸ್ತಾನದ ಸಂಸತ್ತನ್ನು ಪ್ರಧಾನಿ ಶೆಹಬಾಜ್ ಷರೀಫ್ರ ಶಿಫಾರಸಿನ ಮೇರೆಗೆ ಬುಧವಾರ ರಾತ್ರಿ ವಿಸರ್ಜಿಸಲಾಯಿತು. ಇದರಿಂದ ಸಾರ್ವತ್ರಿಕ ಚುನಾವಣೆಗೆ ವೇದಿಕೆ ಸಜ್ಜುಗೊಂಡಂತಾಗಿದೆ. ಸಂಸತ್ ವಿಸರ್ಜನೆಯಿಂದಾಗಿ ಮುಂದಿನ ಚುನಾವಣೆಗಳ ಉಸ್ತುವಾರಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾಗವಹಿಸುವಿಕೆ ಸಾಧ್ಯವಿಲ್ಲದೆ ಉಸ್ತುವಾರಿ ಸರ್ಕಾರ ರಚಿಸಲು ಹಾದಿ ಸುಗಮವಾಗಿದೆ. ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ದೋಷಿಯೆಂದು ಕೋರ್ಟ್ ತೀರ್ಪು ನೀಡಿರುವುದರಿಂದ ಖಾನ್ ಸದ್ಯ ಸೆರೆವಾಸ ಅನುಭವಿಸುತ್ತಿದ್ದಾರೆ.
ಮೂರು ದಿನದೊಳಗೆ ಹೊಸ ಮಧ್ಯಂತರ ಸರ್ಕಾರ ರಚಿಸಲು ಹಾಗೂ 90 ದಿನದೊಳಗೆ ಸಾರ್ವತ್ರಿಕ ಚುನಾವಣೆ ನಡೆಸಲು ಅಧ್ಯಕ್ಷರು ನಿರ್ಗಮಿತ ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಆದರೆ, ಮುಂದಿನ ವರ್ಷದವರೆಗೆ ಚುನಾವಣೆ ನಡೆಯುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ಈಗಾಗಲೇ ನಗದು ಕೊರತೆಯ ಬಿಕ್ಕಟ್ಟನಿಂದ ಕಂಗೆಟ್ಟಿರುವ ದೇಶವನ್ನು ಅಸ್ಥಿರಗೊಳಿಸುವ ಭದ್ರತೆ ಹಾಗೂ ರಾಜಕೀಯ ಸವಾಲುಗಳನ್ನು ಎದುರಿಸಲು ಒದ್ದಾಡುತ್ತಿರುವುದರಿಂದ ಚುನಾವಣೆಗಳನ್ನು ಮುಂದೂಡಲು ಸರ್ಕಾರ ಚಿಂತಿಸುತ್ತಿದೆ ಎಂದು ಹೇಳಲಾಗಿದೆ.
ಖಾನ್ಗೆ ಮುಳ್ಳಾದ ಉಕ್ರೇನ್ ಕಗ್ಗಂಟು
ಈ ನಡುವೆ, ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ತಟಸ್ಥ ಧೋರಣೆ ತಳೆದದ್ದೇ ಇಮ್ರಾನ್ ಖಾನ್ರ ಪ್ರಧಾನಿ ಪಟ್ಟಕ್ಕೆ ಮುಳುವಾಯಿತು ಎಂಬ ವಿಚಾರ ಬೆಳಕಿಗೆ ಬಂದಿದೆ. 2022ರ ಮಾರ್ಚ್ 7ರಂದು ಅಮೆರಿಕದ ವಿದೇಶಾಂಗ ಇಲಾಖೆ ಪಾಕ್ ರಾಯಭಾರಿ ಜೊತೆ ನಡೆಸಿದ ಸಭೆಯಲ್ಲಿ ಖಾನ್ರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸುವಂತೆ ಪಾಕ್ ಸರ್ಕಾರಕ್ಕೆ ಉತ್ತೇಜನ ನೀಡಿತ್ತು ಎಂದು ಅಮೆರಿಕದ ‘ದಿ ಇಂಟರ್ಸೆಪ್ಟ್’ ಎಂಬ ಮಾಧ್ಯಮ ಸಂಸ್ಥೆ ವರದಿ ಮಾಡಿದೆ. ಪಾಕಿಸ್ತಾನ ಸರ್ಕಾರದ ರಹಸ್ಯ ದಾಖಲೆಪತ್ರಗಳನ್ನು ಆಧರಿಸಿ ಅದು ಈ ವಿಶ್ಲೇಷಣೆ ನಡೆಸಿದೆ.
ಹಂಗಾಮಿ ಪ್ರಧಾನಿ ಕಸರತ್ತು
ರಾಷ್ಟ್ರೀಯ ಅಸೆಂಬ್ಲಿ (ಸಂಸತ್ತು) ವಿಸರ್ಜನೆಯಾಗಿರುವುದರಿಂದ ನಡೆಯಬೇಕಿರುವ ಸಾರ್ವತ್ರಿಕ ಚುನಾವಣೆಗಳ ಉಸ್ತುವಾರಿಗಾಗಿ ಮಧ್ಯಂತರ ಪ್ರಧಾನಿಯನ್ನು ನೇಮಿಸುವ ಪ್ರಕ್ರಿಯೆಗೆ ಮುಂದಾಗಿರುವ ಪ್ರಧಾನಿ ಶೆಹಬಾಜ್ ಷರೀಫ್, ಪ್ರತಿಪಕ್ಷ ನಾಯಕ ರಾಜಾ ರಿಯಾಜ್ರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಚುನಾವಣೆಗಳನ್ನು ನಡೆಸಲು ಆಯೋಗಕ್ಕೆ ಹೆಚ್ಚು ಸಮಯ ಒದಗಿಸುವ ಉದ್ದೇಶದಿಂದ ಪ್ರಧಾನಿ ಷರೀಫ್ರ ಸಲಹೆ ಮೇರೆಗೆ ಅಧ್ಯಕ್ಷ ಅರೀಫ್ ಅಲ್ವಿ ಬುಧವಾರ ಸಂಸತ್ತನ್ನು ಅವಧಿಗೆ ಮುನ್ನವೇ ವಿಸರ್ಜಿಸಿದ್ದಾರೆ.
ಪ್ರಧಾನಿ ಮತ್ತು ವಿಪಕ್ಷ ನಾಯಕರು ಹಂಗಾಮಿ ಪ್ರಧಾನಿ ಹೆಸರನ್ನು ಮೂರು ದಿನದಲ್ಲಿ ಅಂತಿಮಗೊಳಿಸಬೇಕಿದೆ. ಇಲ್ಲದಿದ್ದರೆ ವಿಸರ್ಜಿತ ಸಂಸತ್ತಿನ ಸ್ಪೀಕರ್ ಎಂಟು ಸದಸ್ಯರ ಸಮಿತಿಯೊಂದನ್ನು ರಚಿಸಲಿದ್ದಾರೆ. ಆಳುವ ಹಾಗೂ ಪ್ರತಿಪಕ್ಷಗಳ ತಲಾ ನಾಲ್ಕು ಸದಸ್ಯರು ಸಮಿತಿಯಲ್ಲಿ ಇರಲಿದ್ದಾರೆ. ಉನ್ನತ ಸ್ಥಾನಕ್ಕೆ ಉಭಯ ಕಡೆಗಳವರು ಗರಿಷ್ಠ ಎರಡು ಹೆಸರುಗಳನ್ನು ಪ್ರಸ್ತಾಪಿಸಬಹುದಾಗಿದೆ. ಯಾರಾದರೊಬ್ಬರ ಹೆಸರನ್ನು ಮೂರು ದಿನದೊಳಗೆ ಅಂತಿಮಗೊಳಿಸಲು ಸಮಿತಿ ವಿಫಲವಾದರೆ ಸಮಿತಿಯ ಸಭೆಗಳಲ್ಲಿ ಪ್ರಸ್ತಾಪವಾದ ಎಲ್ಲ ಹೆಸರುಗಳನ್ನು ಪಾಕ್ ಚುನಾವಣಾ ಆಯೋಗಕ್ಕೆ ಕಳಿಸಲಾಗುತ್ತದೆ. ಅದು 48 ಗಂಟೆಯೊಳಗೆ ಒಬ್ಬರನ್ನು ಮಧ್ಯಂತರ ಪ್ರಧಾನಿಯಾಗಿ ನೇಮಿಸುತ್ತದೆ.