

ಚಿತ್ರಗಳು: ರಾಘವೇಂದ್ರ ಸಿ.
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರದಿಂದ ನಡೆಯಲಿರುವ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಟೂರ್ನಿಯ ಟ್ರೋಫಿಯನ್ನು ಗುರುವಾರ ಅನಾವರಣಗೊಳಿಸಲಾಯಿತು. ಫಿಕ್ಸಿಂಗ್ ಕಳಂಕ ಎದುರಿಸಿದ ಕೆಪಿಎಲ್ ಬದಲಿಗೆ ಬಂದಿರುವ ಈ ಟೂರ್ನಿ, ರಾಜ್ಯದ ಯುವ ಕ್ರಿಕೆಟಿಗರಿಗೆ ಐಪಿಎಲ್ ಫ್ರಾಂಚೈಸಿಗಳ ಗಮನಸೆಳೆಯಲು ಉತ್ತಮ ವೇದಿಕೆ ಎನಿಸಿದೆ. ಹೀಗಾಗಿ ಈ ಟೂರ್ನಿ ಐಪಿಎಲ್ಗೆ ಚಿಮ್ಮುಹಲಗೆ ಎನಿಸಿದೆ.
ಬ್ಯಾಟಿಂಗ್ ದಿಗ್ಗಜ ಜಿಆರ್ ವಿಶ್ವನಾಥ್, ಕೆಎಸ್ಸಿಎ ಅಧ್ಯಕ್ಷ ರುರಾಮ್ ಭಟ್, ಉಪಾಧ್ಯಕ್ಷ ಹಾಗೂ ಟೂರ್ನಿಯ ಚೇರ್ಮನ್ ಬಿಕೆ ಸಂಪತ್ಕುಮಾರ್, ಜಂಟಿ ಕಾರ್ಯದರ್ಶಿ ಶಾವೀರ್ ತಾರಾಪುರ್ ಅವರೊಂದಿಗೆ ಬೆಂಗಳೂರು ಬ್ಲಾಸ್ಟರ್ಸ್, ಶಿವಮೊಗ್ಗ ಲಯನ್ಸ್, ಗುಲ್ಬರ್ಗಾ ಮಿಸ್ಟಿಕ್ಸ್ ಮತ್ತು ಮೈಸೂರು ವಾರಿಯರ್ಸ್ ತಂಡಗಳ ನಾಯಕರಾದ ಮಯಾಂಕ್ ಅಗರ್ವಾಲ್, ಶ್ರೇಯಸ್ ಗೋಪಾಲ್, ವೈಶಾಕ್ ವಿಜಯ್ಕುಮಾರ್ ಮತ್ತು ಕರುಣ್ ನಾಯರ್ ಹಾಜರಿದ್ದರು.
13ಕ್ಕೆ ಗುಲ್ಬರ್ಗಾ-ಬೆಂಗಳೂರು ಉದ್ಘಾಟನಾ ಪಂದ್ಯ
ಹಾಲಿ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್ ಮತ್ತು ಹಾಲಿ ರನ್ನರ್ಅಪ್ ಬೆಂಗಳೂರು ಬ್ಲಾಸ್ಟರ್ಸ್ ತಂಡಗಳ ಮುಖಾಮುಖಿಯೊಂದಿಗೆ ಭಾನುವಾರದಂದು ಕೆಎಸ್ಸಿಎಯ ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಚಾಲನೆ ಸಿಗಲಿದೆ. ಪ್ರತಿದಿನ 2 ಪಂದ್ಯಗಳು ನಡೆಯಲಿದ್ದು, ಎಲ್ಲ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾಗಿವೆ. ಲೀಗ್ ಹಂತದಲ್ಲಿ ಟೂರ್ನಿಯ ಎಲ್ಲ 6 ತಂಡಗಳು ತಲಾ 2 ಬಾರಿ ಮುಖಾಮುಖಿ ಆಗಲಿವೆ.
29ರಂದು ಫೈನಲ್
ಆ.29ರಂದು ಫೈನಲ್ ಪಂದ್ಯ ನಡೆಯಲಿದೆ. ಲೀಗ್ ಹಂತದ ಅಗ್ರ 4 ತಂಡಗಳು ಪ್ಲೇಆಫ್ ಬದಲಿಗೆ ಸೆಮಿಫೈನಲ್ನಲ್ಲಿ ಸೆಣಸಲಿವೆ. ಆ.28ರಂದು ಎರಡೂ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.