

ಮುಂಬೈ: ಏಷ್ಯಾಕಪ್-ವಿಶ್ವಕಪ್ ಪೂರ್ವಭಾವಿಯಾಗಿ ಭಾರತ ತಂಡದಲ್ಲಿ 4ನೇ ಕ್ರಮಾಂಕದ ಬಗ್ಗೆ ಗೊಂದಲವಿರುವುದನ್ನು ನಾಯಕ ರೋಹಿತ್ ಶರ್ಮ ಒಪ್ಪಿಕೊಂಡಿದ್ದು, ಯುವರಾಜ್ ಸಿಂಗ್ ನಿವೃತ್ತಿಯ ನಂತರದಲ್ಲಿ ಯಾವ ಬ್ಯಾಟ್ಸ್ಮನ್ ಕೂಡ ಈ ಕ್ರಮಾಂಕವನ್ನು ಭದ್ರಪಡಿಸಿಕೊಂಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
2019ರ ವಿಶ್ವಕಪ್ ವೇಳೆ ಭಾರತ ತಂಡಕ್ಕೆ 4ನೇ ಕ್ರಮಾಂಕದ ಬ್ಯಾಟರ್ ಗೊಂದಲವೇ ಪ್ರಮುಖ ಹಿನ್ನಡೆಯಾಗಿತ್ತು. ಈ ಬಾರಿ ಮತ್ತೆ ವಿಶ್ವಕಪ್ಗೆ ಎರಡು ತಿಂಗಳಷ್ಟೇ ಬಾಕಿ ಇರುವ ನಡುವೆ 4ನೇ ಕ್ರಮಾಂಕದ ಬ್ಯಾಟರ್ ಯಾರು ಎಂಬ ಬಗ್ಗೆ ಭಾರತ ತಂಡ ಇನ್ನೂ ಸ್ಪಷ್ಟತೆ ಕಂಡುಕೊಂಡಿಲ್ಲ. ಈ ಕ್ರಮಾಂಕದಲ್ಲಿ ಇತ್ತೀಚೆಗೆ ಅವಕಾಶ ಪಡೆದ ಸೂರ್ಯಕುಮಾರ್, ಸಂಜು ಸ್ಯಾಮ್ಸನ್ ನಿರೀಕ್ಷಿತ ನಿರ್ವಹಣೆ ತೋರಿಲ್ಲ. ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಶ್ರೇಯಸ್ ಅಯ್ಯರ್ ಈ ಕ್ರಮಾಂಕದಲ್ಲಿ ಆಡಿದ 20 ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ತೋರಿದ ದಾಖಲೆ ಹೊಂದಿದ್ದಾರೆ. ಅವರು 4ನೇ ಕ್ರಮಾಂಕದಲ್ಲಿ ಆಡಿದಾಗ 2 ಶತಕ ಮತ್ತು 5 ಅರ್ಧಶತಕಗಳ ಸಹಿತ 47.35ರ ಸರಾಸರಿಯಲ್ಲಿ 805 ರನ್ ಬಾರಿಸಿದ್ದಾರೆ.
"4ನೇ ಕ್ರಮಾಂಕ ದೀರ್ಘಕಾಲದಿಂದ ನಮ್ಮನ್ನು ಕಾಡುತ್ತಿದೆ. ಯುವಿ ಬಳಿಕ ಯಾರೂ ಈ ಕ್ರಮಾಂಕದಲ್ಲಿ ನೆಲೆಯೂರಿಲ್ಲ. ಶ್ರೇಯಸ್ ಈ ಕ್ರಮಾಂಕದಲ್ಲಿ ಉತ್ತಮ ನಿರ್ವಹಣೆ ತೋರಿದ್ದು, ಅವರ ಗಾಯದ ಸಮಸ್ಯೆ ನಮಗೂ ಹಿನ್ನಡೆ ತಂದಿದೆ ಎಂದು ರೋಹಿತ್ ಶರ್ಮ ಹೇಳಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದಾಗ ವಿಕೆಟ್ ಕೀಪಿಂಗ್ ಜತೆಗೆ 5ನೇ ಕ್ರಮಾಂಕದಲ್ಲಿ ಆಡುವ ಸುಳಿವನ್ನೂ ರೋಹಿತ್ ಶರ್ಮ ಬಿಟ್ಟುಕೊಟ್ಟರು.