ಇದೊಂದು ಕಾರಣದಿಂದಾಗಿ ಭಾರತ ತಂಡ ಈ ಬಾರಿ ವಿಶ್ವಕಪ್​ ಗೆಲ್ಲುವುದು ಕಷ್ಟ ಎಂದ ಯುವರಾಜ್​ ಸಿಂಗ್​!

yuv web
Published on

ನವದೆಹಲಿ: ಭಾರತ ತವರಿನಲ್ಲಿ 12 ವರ್ಷಗಳ ಬಳಿಕ ಏಕದಿನ ವಿಶ್ವಕಪ್​ ಟೂರ್ನಿಯ ಆತಿಥ್ಯ ವಹಿಸಿಕೊಳ್ಳಲು ಸಜ್ಜಾಗುತ್ತಿದೆ. ಇದೇ ವೇಳೆ 2011ರಲ್ಲಿ ತವರಿನಲ್ಲೇ ಕೊನೆಯದಾಗಿ ವಿಶ್ವಕಪ್​ ಗೆದ್ದಿರುವ ಸಾಧನೆಯನ್ನು ಪುನರಾವರ್ತಿಸುವ ನಿರೀಕ್ಷೆಯೂ ಹರಡಿದೆ. ಆದರೆ 2011ರಲ್ಲಿ ಭಾರತ ತಂಡದ ವಿಶ್ವಕಪ್​ ಗೆಲುವಿನ ಹೀರೋ ಎನಿಸಿದ್ದ ಯುವರಾಜ್​ ಸಿಂಗ್​ ಪ್ರಕಾರ, ಈ ಬಾರಿ ರೋಹಿತ್​ ಶರ್ಮ ಬಳಗ ವಿಶ್ವಕಪ್​ ಗೆಲ್ಲುವುದು ಕಷ್ಟಕರವಾಗಿದೆ. ತಂಡದ ಕೆಲ ಪ್ರಮುಖ ಆಟಗಾರರು ಗಾಯ ಮತ್ತು ಫಿಟ್ನೆಸ್​ ಸಮಸ್ಯೆ ಎದುರಿಸುತ್ತಿರುವುದು ಇದಕ್ಕೆ ಕಾರಣ ಎಂದವರು ಅಭಿಪ್ರಾಯಪಟ್ಟಿದ್ದಾರೆ.

'ನಾನು ದೇಶಭಕ್ತಿಯೊಂದಿಗೆ, ಭಾರತ ಈ ಸಲ ವಿಶ್ವಕಪ್​ ಗೆಲ್ಲುತ್ತದೆ ಎಂದು ಹೇಳಬಲ್ಲೆ. ಆದರೆ ಸರಿಯಾಗಿ ಗಮನಿಸಿದರೆ, ಗಾಯದ ಸಮಸ್ಯೆಯಿಂದಾಗಿ ಭಾರತ ತಂಡದ ಮಧ್ಯಮ ಕ್ರಮಾಂಕ ಹೆಚ್ಚಿನ ಕಳವಳವನ್ನು ಹೊಂದಿದೆ. ಇದನ್ನು ಬಗೆಹರಿಸದಿದ್ದರೆ ನಾವು ವಿಶ್ವಕಪ್​ನಲ್ಲಿ ಪರದಾಡುವುದು ನಿಶ್ಚಿತ. ಅದರಲ್ಲೂ ಪ್ರಮುಖವಾಗಿ ಒತ್ತಡದ ಪಂದ್ಯಗಳಲ್ಲಿ ಕಷ್ಟವಾಗಲಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ತಾಂತ್ರಿಕತೆ ಆರಂಭಿಕರಿಗಿಂತ ಭಿನ್ನವಾಗಿರುತ್ತದೆ. ತಂಡದ ಮಧ್ಯಮ ಕ್ರಮಾಂಕವನ್ನು ಬಲಪಡಿಸುವುದು ಈಗಿನ ಅಗತ್ಯ ಆಗಿದೆ' ಎಂದು ಯುವರಾಜ್​ ಸಿಂಗ್​ ಯೂಟ್ಯೂಬ್​ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.

ಆರಂಭಿಕರು ಮತ್ತು 3ನೇ ಕ್ರಮಾಂಕದಲ್ಲಿ ವಿರಾಟ್​ ಕೊಹ್ಲಿ ಅವರೇ ಪ್ರತಿ ಪಂದ್ಯದಲ್ಲೂ ಭಾರತ ತಂಡವನ್ನು ಕಾಪಾಡಲು ಸಾಧ್ಯವಿಲ್ಲ. ಆರಂಭಿಕರು ಬೇಗನೆ ಔಟಾದರೆ ಮಧ್ಯಮ ಕ್ರಮಾಂಕಕ್ಕೆ ಇನಿಂಗ್ಸ್​ ಕಟ್ಟುವ ಸವಾಲು ಎದುರಾಗುತ್ತದೆ. ಆಗ ಒತ್ತಡವನ್ನು ನಿಭಾಯಿಸಿ ಆಡಬಲ್ಲ ಬ್ಯಾಟರ್​ ಬೇಕಾಗುತ್ತದೆ ಎಂದು ಯುವರಾಜ್​ ಸಿಂಗ್​ ಹೇಳಿದ್ದಾರೆ. ಸದ್ಯ ಕೆಎಲ್​ ರಾಹುಲ್​ ಮತ್ತು ಶ್ರೇಯಸ್​ ಅಯ್ಯರ್​ ಫಿಟ್ನೆಸ್​ ಸಮಸ್ಯೆ ಎದುರಿಸುತ್ತಿದ್ದು, ವಿಶ್ವಕಪ್​ಗೆ ಫಿಟ್​ ಆಗುವ ಬಗ್ಗೆ ಇನ್ನೂ ಖಚಿತತೆ ಇಲ್ಲ. ಈ ನಡುವೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಪಡೆಯುತ್ತಿರುವ ಸೂರ್ಯಕುಮಾರ್​ ಯಾದವ್​ ಮತ್ತು ಸಂಜು ಸ್ಯಾಮ್ಸನ್​ ಅವರಿಂದ ನಿರೀತ ನಿರ್ವಹಣೆ ಬರುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net