ತಾರತಮ್ಯ, ತುಷ್ಟೀಕರಣ ರಾಜಕಾರಣದ ಭಾಗವೇ ವಕ್ಪ್

Siddagiri Swamiji
Published on

ದೇಶಾದ್ಯಂತ ಚರ್ಚೆಗೆ ಕಾರಣವಾಗಿ ರೈತರು, ಮಠ-ಮಾನ್ಯಗಳ ಆಸ್ತಿಗಳ ಮೇಲೆ ಹೆಸರು ದಾಖಲಿಸುತ್ತ ಆತಂಕ ಸೃಷ್ಟಿಸುತ್ತಿರುವ ವಕ್ಪ್ ಬೋರ್ಡ್ ವಿವಾದ ವಿಷಯವಾಗಿ ಕನ್ಹೇರಿಯ ಸಿದ್ಧಗಿರಿ ಮಹಾಸಂಸ್ಥಾನ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ವಿವಾದ ಬದಿಗಿಟ್ಟು ಸಮಾಜದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಬೇಕು. ಸಮಾನತೆ, ಸಹಬಾಳ್ವೆಯನ್ನೇ ಉಸಿರಾಡಬೇಕು. ಅದುವೇ ನಮ್ಮ ಸಂವಿಧಾನದ ಆಶಯ. ಇಲ್ಲದಿದ್ದರೆ ಮಠಾಧೀಶರು ಸಹಿತವಾಗಿ ಜನಸಾಮಾನ್ಯರು ಬೀದಿಗಿಳಿದು ಹೋರಾಟ ಆರಂಭಿಸುವ ಕಾಲ ಸನ್ನಿಹಿತವಾಗುತ್ತದೆ ಎಂದು ಶ್ರೀಗಳು ಸಲಹೆಯೊಂದಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಸಂದರ್ಶನದ ಪೂರ್ಣ ವಿವರ ಇಲ್ಲಿದೆ.

ಮಹೇಶ್ ವಿಜಾಪುರ, ಬೆಳಗಾವಿ ವಕ್ಪ್ ಎನ್ನುವ ಪದದ ಅರ್ಥ ಏನು? ವಕ್ಪ್ ಬೋರ್ಡ್ ವಿವಾದ ಏಕೆ ಸೃಷ್ಟಿಯಾಗುತ್ತಿದೆ?

ವಕ್ಪ್ ಪದದ ಅರ್ಥ ವಿಶಾಲವಾಗಿದ್ದು, ಅರ್ಥಪೂರ್ಣವಾಗಿದೆ. ವಕ್ಪ್ ಎಂದರೆ ದಾನ. ಮೈ ಮುರಿದು, ಬೆವರು ಹರಿಸಿ ಗಳಿಸಿದ ಆಸ್ತಿಯನ್ನು ಅಥವಾ ಆಸ್ತಿಯ ಕೆಲ ಭಾಗ ವನ್ನು ಬಡವರು, ಆರ್ಥಿಕ ಸಂಕಷ್ಟದಲ್ಲಿ ರುವವರಿಗೆ, ಸಾಮಾಜಿಕ ಸೇವೆಗಳಿಗೆ ನೀಡುವ ದಾನವೇ ವಕ್ಪ್. ಪೈಗಂಬರರು ತಾರುಣ್ಯದಲ್ಲಿ ಖರೀದಿಸಿದ್ದ ತೋಟದಿಂದ ಬರುವ ಆದಾಯ ದಲ್ಲಿ ಒಂದಷ್ಟು ಭಾಗವನ್ನು ಬಡವರಿಗೆ ನೀಡುತ್ತಿದ್ದರು. ಈ ಪದ್ಧತಿ ಮುಂದುವರಿಸಿದ ಮುಸ್ಲಿಂ ಧರ್ಮ ಪ್ರಮುಖರು ಬಡವರಿಗಾಗಿ ಮಾಡುವ ದಾನವನ್ನು ವಕ್ಪ್ ಎಂದು ಕರೆದರು. ಅಂದಿನ ದಿನಗಳಲ್ಲಿ ದಾನ-ಧರ್ಮದ ಉದ್ದೇಶ ಹೊಂದಿದ್ದ ವಕ್ಪ್​ಗೆ ಸ್ವಾತಂತ್ರ್ಯ ನಂತರ 1953-54ರಲ್ಲಿ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಕಾಯಿದೆ ರೂಪ ನೀಡಿದರು. ಅಂದು 8000 ಎಕರೆಯಷ್ಟಿದ್ದ ಭೂಮಿ ಇಂದು 9.40 ಲಕ್ಷ ಎಕರೆ ವಕ್ಪ್ ಹೆಸರಿನಲ್ಲಿ ದಾಖಲಾಗಿರುವುದೇ ವಿವಾದ.

ವಕ್ಪ್ ಆಸ್ತಿ ದಿಢೀರ್ ಬೆಳೆದು ನಿಂತಿರುವುದು ದೇಶಕ್ಕೆ ಆತಂಕ ಸೃಷ್ಟಿಸುತ್ತಿದೆಯಾ?

ಖಂಡಿತವಾಗಿಯೂ ದೇಶದ ಭದ್ರತೆ, ಸಂಸ್ಕೃತಿಗೆ ದೊಡ್ಡ ಆತಂಕ. ಕೆಲ ಮುಸ್ಲಿಂ ಧರ್ಮ ಪ್ರಮುಖರ ಹೇಳಿಕೆಯಂತೆ 2047ರ ಹೊತ್ತಿಗೆ ಪಾಕಿಸ್ತಾನ, ಬಾಂಗ್ಲಾದೇಶ, ಆಪ್ಘಾನಿಸ್ತಾನ, ಇಂಡೋನೇಷಿಯಾ, ಮಲೇಶಿಯಾ ಒಳಗೊಂಡು ಇಡೀ ಭಾರತವನ್ನು ಇಸ್ಲಾಮಿಕ್ ಮಹಾಸಾಮ್ರಾಜ್ಯ ಸ್ಥಾಪನೆ ವಕ್ಪ್ ಬೋರ್ಡ್ ಹಿಂದಿನ ದುರುದ್ದೇಶಗಳಲ್ಲಿ ಪ್ರಮುಖವಾಗಿರುವುದರಿಂದ ಬೋರ್ಡ್ ವಿಷಯವಾಗಿ ಚಿಂತನೆ, ಚರ್ಚೆಗಳ ಮೂಲಕ ಸೂಕ್ತ ನಿರ್ಧಾರ ಕೈಗೊಳ್ಳುವ ಸಮಯ ಬಂದಿದೆ. 9.40 ಲಕ್ಷ ಎಕರೆ ಇರುವ ವಕ್ಪ್ ಭೂಮಿಯಲ್ಲಿ ಸಣ್ಣ-ಸಣ್ಣ 50 ದೇಶ ನಿರ್ವಿುಸಬಹುದಾಗಿದೆ. 75 ಸಾವಿರ ಎಕರೆಯಷ್ಟಿರುವ 12 ಮಾಲ್ಡೀವ್ಸ್, 5 ಬೆಹರೈನ್, 3 ಹಾಂಕಾಂಗ್, 2 ಫಿನ್​ಲ್ಯಾಂಡ್, 2 ಮಾರಿಷಸ್, 2 ಲಕ್ಸಂಬರ್ಗ್ ನಿರ್ವಣವಾಗುವಷ್ಟು ಭೂಮಿ ವಕ್ಪ್ ದಾಖಲೆ ಸೇರಿರುವುದೇ ಆತಂಕಕ್ಕೆ ಕಾರಣವಾಗುತ್ತಿದೆ.

ಸತತ ತಿದ್ದುಪಡಿ ಮೂಲಕ ವಕ್ಪ್ ಬೋರ್ಡ್​ಗೆ ಪರಮಾಧಿಕಾರ ನೀಡಲಾಗಿದೆಯೇ?

ಸಾಮಾನ್ಯ ಕಾಯ್ದೆ ಆಗಿದ್ದ ವಕ್ಪ್ ಬಿಲ್​ಗೆ 1982ರಲ್ಲಿ ಇಂದಿರಾಗಾಂಧಿ, 1984ರಲ್ಲಿ ರಾಜೀವ ಗಾಂಧಿ ತಿದ್ದುಪಡಿ ತಂದರು. 1995ರಲ್ಲಿ ಪ್ರಧಾನಿಯಾಗಿದ್ದ ನರಸಿಂಹರಾವ್, ಕಾಯಿದೆಗೆ ಹೊಸ ರೂಪ ನೀಡಿದರು. ನರಸಿಂಹರಾವ್ ಅವರ ಕಾಯ್ದೆಗೂ 2013ರಲ್ಲಿ ಯುಪಿಎ ಸರ್ಕಾರ ತಿದ್ದುಪಡಿ ತಂದಿತು. ಈ ತಿದ್ದುಪಡಿಗಳೇ ವಕ್ಪ್ ಬೋರ್ಡ್​ಗೆ ಸರ್ವಾಧಿಕಾರದ ಪಟ್ಟ ಕಟ್ಟಿದವು. ಕಬಳಿಕೆ ಮಾಡುವ ಭೂಮಿ ಯಾರದೇ ಆಗಿದ್ದರೂ ಬೋರ್ಡ್​ನಲ್ಲಿರುವವರೆಲ್ಲರೂ ಮುಸ್ಲಿಮರೇ ಆಗಿರುವಂತೆ ನೋಡಿಕೊಳ್ಳಲಾಗಿದೆ. ಮುಸ್ಲಿಂ ಕಾನೂನುಗಳಲ್ಲಿ ಮುಸ್ಲಿಮೇತರರನ್ನು ಸೇರಿಸಿಕೊಳ್ಳಬಾರದು ಎನ್ನುವುದಾದರೆ, ದೇಶದಲ್ಲಿರುವ ನಾಲ್ಕೂವರೆ ಸಾವಿರಕ್ಕೂ ಹೆಚ್ಚಿರುವ ದೇವಾಲಯಗಳ ಸಂಪತ್ತನ್ನು ವಶಪಡಿಸಿಕೊಂಡಿರುವ ಸರ್ಕಾರಗಳು ಆ ಆದಾಯವನ್ನು ಮಸೀದಿ, ಚರ್ಚ್​ಗಳಿಗೂ ಖರ್ಚು ಮಾಡುತ್ತಿರುವುದು ಏಕೆ? ಇದರಿಂದಲೇ ಗೊತ್ತಾಗುತ್ತೆ ವಕ್ಪ್ ಬೋರ್ಡ್ ಉದ್ದೇಶವೇ ಸರಿ ಇಲ್ಲ ಎನ್ನುವುದು.

ವಕ್ಪ್ ಬೋರ್ಡ್ ಸಾಂವಿಧಾನಿಕವಾಗಿ ಸ್ಥಾಪನೆ ಆಗಿದೆಯೇ?

ಸಾಂವಿಧಾನಿಕವಾಗಿ ಇಲ್ಲವೇ ಇಲ್ಲ. ಕೊನೇಪಕ್ಷ ಕುರಾನಕ್ಕೆ ಅನುಸಾರವಾಗಿಯೂ ಇಲ್ಲ. ಆರ್ಥಿಕ ಸಂಕಷ್ಟ ಹೊರತುಪಡಿಸಿ ಜಾತಿ, ಸಮುದಾಯ ಉದ್ದೇಶಿಸಿ ಮಂಡಳಿಗಳನ್ನು ಮಾಡಲು ಸಂವಿಧಾನದಲ್ಲಿ ಅಧಿಕಾರ, ಅವಕಾಶವೇ ಇಲ್ಲ. ಇಲ್ಲಿ ಎಲ್ಲರೂ ಸಮಾನರು. ಸಹೋದರತ್ವ ಭಾವನೆಯಿಂದಲೇ ಬದುಕಬೇಕು. ಆದರೆ, ಬೋರ್ಡ್ ವಿಷಯದಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸೀಮಿತ ಶಿಯಾ, ಸುನ್ನಿ ಸಮುದಾಯಗಳಿಗೆ ಕೊಟ್ಟಿರುವ ಬೋರ್ಡ್ ಇತರ ಅಲ್ಪಸಂಖ್ಯಾತರಾದ ಯಹೂದಿ, ಕ್ರಿಶ್ಚಿಯನ್, ಪಾರ್ಸಿ, ಸಿಖ್, ಜೈನ್, ಬೌದ್ಧರಿಗೆ ನೀಡಿಲ್ಲ. ಸನಾತನ ಬೋರ್ಡ್ ಕೂಡ ಮಾಡಬಹುದಾಗಿತ್ತು. ಇದು ತಾರತಮ್ಯ ಮತ್ತು ತುಷ್ಟೀಕರಣ ರಾಜಕಾರಣ ಅಲ್ಲದೆ ಏನೆಂದು ಕರೆಯಲು ಸಾಧ್ಯ.

Siddagiri Swamiji

ಅಧಿಕಾರ ಬಳಸಿಕೊಂಡು ವಕ್ಪ್ ಬೋರ್ಡ್ ಭೂ ಕಬಳಿಕೆ ಮಾಡುತ್ತಿದೆಯೇ?

ಸಾಮಾನ್ಯವಾಗಿ ತಂಟೆ-ತಕರಾರು ಬಂದರೆ ಟ್ರಯಲ್ ಕೋರ್ಟ್​ನಿಂದ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತದೆ. ಆದರೆ, ಬೋರ್ಡ್​ಗೆ ಸಂಬಂಧಿಸಿದ ಯಾವುದೇ ತಕರಾರಿನ ವಿಚಾರಣೆ ಏಕಪಕ್ಷೀಯ ಸದಸ್ಯರನ್ನೊಳಗೊಂಡಿರುವ ಬೋರ್ಡ್​ನಲ್ಲಿಯೇ ನಡೆಯುತ್ತದೆ. ಮಂಡಳಿ ವಿರುದ್ಧವೇ ತಕರಾರಿದ್ದರೂ ಅದೇ ಮಂಡಳಿ ಸದಸ್ಯರು ಕೈಗೊಳ್ಳುವ ನಿರ್ಧಾರಗಳೇ ಇಲ್ಲಿ ದಾಖಲೆ. ಮಂಡಳಿ ನಿರ್ಧಾರದ ವಿರುದ್ಧ ಬೇರೆಲ್ಲೂ ಮೇಲ್ಮನವಿ ಹೋಗುವಂತಿಲ್ಲ. ಹಾಗಾಗಿ, ಅವರು ಹೇಳಿದ ಭೂಮಿ ಮೇಲೆಲ್ಲ ವಕ್ಪ್ ಹೆಸರು ದಾಖಲಾಗುತ್ತಿದೆ. ಇದು ಬಹಿರಂಗ ಭೂ ಕಬಳಿಕೆ ಮತ್ತು ಭಯಾನಕ ವ್ಯವಸ್ಥೆಗೆ ಸಾಕ್ಷಿ.

ಭಯಾನಕ ವ್ಯವಸ್ಥೆ ವಿರುದ್ಧ ಯಾರೊಬ್ಬರೂ ಚಕಾರ ಎತ್ತದಿರುವುದು ದೇಶದ ದುರದೃಷ್ಟವೇ?

ಉತ್ತರಾಖಂಡದಲ್ಲಿ ಅರಣ್ಯಗಳ ಮೇಲೆ ವಕ್ಪ್ ಬೋರ್ಡ್ ಹೆಸರು ದಾಖಲಾಗಿದ್ದರೆ, ಕೆಲವೆಡೆ ಹಳ್ಳಿ ಹಳ್ಳಿಗಳೇ ಬೋರ್ಡ್ ಪಾಲಾಗಿವೆ. ಪೈಗಂಬರರು ಕ್ರಿ.ಶ.632ರಲ್ಲಿ ಹುಟ್ಟಿದ್ದರೆ ಅದಕ್ಕೂ ಮುಂಚಿನ 100 ವರ್ಷ ಹಳೇ ಕಾಲದ ಚೋಳರ ದೇವಾಲಯವೂ ವಕ್ಪ್ ಬೋರ್ಡ್ ಹೆಸರಿಗೆ ದಾಖಲಾಗಲು ಹೇಗೆ ಸಾಧ್ಯ? ಮುಸ್ಲಿಮರು ದೇಶಕ್ಕೆ ಕಾಲಿಡುವ ಮುಂಚಿನ ಭೂಮಿಯೂ ವಕ್ಪ್ ಬೋರ್ಡ್ ಹೆಸರಿಗೆ ದಾಖಲಾಗುತ್ತಿದ್ದರೂ ರಾಮ ಮಂದಿರದ ಬಗ್ಗೆ ಪುರಾವೆ ಕೇಳುತ್ತಿರುವುದು ಹಾಸ್ಯಾಸ್ಪದ. ಬಾಬ್ರಿ ಮಸೀದಿ ಬಿದ್ದ ಸಂದರ್ಭದಲ್ಲಿ ಸಮುದಾಯ ಒಲೈಕೆಗಾಗಿ ಸೃಷ್ಟಿಸಿದ ಅಸಾಂವಿಧಾನಿಕ ಬೋರ್ಡ್ ಕಾಯಿದೆಗಳನ್ನು ಯಾರೊಬ್ಬರೂ ಪ್ರಶ್ನೆ ಮಾಡಿಲ್ಲ ಎನ್ನುವುದೇ ದುರದೃಷ್ಟ. ಪ್ರಶ್ನೆ ಮಾಡಿದ್ದರೆ ಈ ಕಾನೂನೇ ಉಳಿಯುತ್ತಿರಲಿಲ್ಲ.

ವಕ್ಪ್ ಬೋರ್ಡ್ ವಿಷಯದಲ್ಲಿ ಕರ್ನಾಟಕ ಸರ್ಕಾರ ಯಾವ ನಡೆ ಇಡುತ್ತಿದೆ?

ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತ ಕೊಟ್ಟ ಸಮುದಾಯಕ್ಕೆ ಬಹುಮಾನ ಕೊಡುವ ರೀತಿಯಲ್ಲಿ ಕರ್ನಾಟಕ ಸರ್ಕಾರ ವಕ್ಪ್ ಬೋರ್ಡ್​ಗೆ ಉತ್ತೇಜನ ನೀಡುತ್ತಿದೆ. ಬೇರೆ ಯಾವ ರಾಜ್ಯದಲ್ಲೂ ಅಷ್ಟಾಗಿ ಅನುಷ್ಠಾನಗೊಳ್ಳದ ವಕ್ಪ್ ಕಾಯಿದೆಗಳನ್ನು ಕರ್ನಾಟಕದಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ. ಅವೈದಿಕ ಕೆಲಸ ಮಾಡಲು ನಿರ್ದೇಶನ ನೀಡಲಾಗುತ್ತಿದೆ ಎಂದು ಸ್ವತಃ ಹಿರಿಯ ಅಧಿಕಾರಿಗಳೇ ಹೇಳಿಕೊಳ್ಳುತ್ತಿದ್ದಾರೆ.

ಅಸಾಂವಿಧಾನಿಕ ಕಾನೂನಿನ ವಿರುದ್ಧ ಯಾವ ರೀತಿ ಹೋರಾಟ ಆರಂಭವಾಗಬೇಕು?

ಸಾಮಾನ್ಯವಾಗಿ ಯಾವುದೇ ಕಾನೂನಿನಲ್ಲಿ ನಾಲ್ಕೈದು ತಿದ್ದುಪಡಿ ಕಂಡಿದ್ದರೆ, ವಕ್ಪ್ ಬೋರ್ಡ್ ವಿಷಯದಲ್ಲಿ 42 ತಿದ್ದುಪಡಿ ಮಾಡಿ ಏಕಪಕ್ಷೀಯ ಅಧಿಕಾರ ನೀಡಲಾಗಿದೆ. ಇಂತಹ ವ್ಯವಸ್ಥೆ ನೋಡಿಕೊಂಡು ಸುಮ್ಮನೆ ಕುಳಿತರೆ ರಸ್ತೆ ಅಕ್ಕಪಕ್ಕದ ಭೂಮಿ ಸೇರಿ ಮಠ-ಮಾನ್ಯಗಳೂ ಕಬಳಿಕೆಯಾಗುವುದು ಖಚಿತ. ದೇಶ, ಧರ್ಮದ ಬಗ್ಗೆ ಸ್ವಾಭಿಮಾನ ಇರಬೇಕು. ಆದರೆ, ನಮ್ಮ ನಡುವೆಯೇ ಇರುವ ಕೆಲ ದುಷ್ಟರು ವಕ್ಪ್ ಬೋರ್ಡ್ ಬಗ್ಗೆ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದು ದುರದೃಷ್ಟಕರ ಅಸಾಂವಿಧಾನಿಕ ವಕ್ಪ್ ಬಿಲ್ ಬದಲಾಯಿಸಬೇಕು. ಈ ವಿಷಯದಲ್ಲಿ ಕರ್ನಾಟಕದ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹಾಕಿ ಸುರಕ್ಷಾ ಭಾವನೆ ಸೃಷ್ಟಿಸಬೇಕು. ಈ ವಿಷಯದಲ್ಲಿ ಮತ್ತೆ ಎಡವಿದರೆ, ಮಠ ಸಹಿತ ದರ್ಗಾಗಳಿಗೂ ಬೋರ್ಡ್ ನೋಟಿಸ್ ಬಂದಿರುವುದರಿಂದ ಎಲ್ಲ ಜಾತಿ, ಸಮುದಾಯ ಜನರೆಲ್ಲರೂ ಒಟ್ಟಾಗಿ ಹೋರಾಟ ಆರಂಭಿಸುತ್ತಾರೆ. ಈ ಹೋರಾಟದಲ್ಲಿ ಮಠಾಧೀಶರು ಪಾಲ್ಗೊಳ್ಳಬೇಕು. ಕಾಲರ್ ಹಿಡಿದು ರಾಜಕಾರಣಿಗಳನ್ನು ಕೇಳುವ ಯುವಕರೂ ತಯಾರಾಗುತ್ತಾರೆ. ಎಚ್ಚರಿಕೆ ಇರಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net