'ಅಜ್ಜಯ್ಯ'ನಿಗಾಗಿ ಮೀಸೆ ತೆಗೆದ್ರು ನಿರ್ದೇಶಕ ಯೋಗರಾಜ್ ಭಟ್!

Yogaraj Bhat
Published on

ಬೆಂಗಳೂರು: ಮೊನ್ನೆಮೊನ್ನೆಯಷ್ಟೇ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಚಿತ್ರದ 'ಹೊಡಿರಲೆ ಹಲಗಿ' ಹಾಡು ಬಿಡುಗಡೆ ಆಗಿತ್ತು. ಆಗ, ಚಿತ್ರದ ಹಾಡಿನಲ್ಲಿ ಭರ್ಜರಿ ಹೆಜ್ಜೆ ಹಾಕಿದ್ದ ನಟಿ ನಿಶ್ವಿಕಾ ನಾಯ್ಡು ಮಾತ್ರವಲ್ಲದೆ ನಿರ್ದೇಶಕ ಯೋಗರಾಜ್ ಭಟ್ ಕೂಡ ತುಸು ಹೆಚ್ಚೇ ಗಮನ ಸೆಳೆದಿದ್ದರು. ಅದಕ್ಕೆ ಕಾರಣ ಮೀಸೆ.. ಅರ್ಥಾತ್ ಮೀಸೆ ಇಲ್ಲದಿದ್ದುದೇ ಕಾರಣ.

ಅಷ್ಟಕ್ಕೂ ನಿರ್ದೇಶಕ ಯೋಗರಾಜ್ ಭಟ್ ಮೀಸೆ ಬೋಳಿಸಿಕೊಂಡಿದ್ದು ಯಾಕೆ ಎಂಬುದು ಹಲವರ ಕುತೂಹಲ ಕೆರಳಿಸಿತ್ತು. ಎಂದೂ ಹೀಗೆ ಕಾಣಿಸಿಕೊಂಡಿರದ ಅವರು ಇಂದು ಹೀಗೇಕೆ ಕಾಣಿಸಿಕೊಂಡರು ಎಂಬುದಕ್ಕೆ ಅಂದೇ ಅವರು ಉತ್ತರವನ್ನೂ ನೀಡಿದ್ದರು. ಅಂದಹಾಗೆ ಅವರ ಮೀಸೆ ಹೋಗಲು ಕಾರಣ 'ಅಜ್ಜಯ್ಯ'. ಹಾಗಂತ ಅವರು ತಾತನಿಗಾಗಿ ಮೀಸೆ ತೆಗೆದಿದ್ದಲ್ಲ.

ಸೆಂಚುರಿ ಸ್ಟಾರ್​ ಶಿವರಾಜಕುಮಾರ್ ಹಾಗೂ ಪ್ರಭುದೇವ ಅಭಿನಯದ 'ಕರಟಕ ದಮನಕ' ಚಿತ್ರಕ್ಕೂ ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿದ್ದಾರೆ. ಅದರಲ್ಲಿ ಯೋಗರಾಜ್ ಭಟ್ 'ಅಜ್ಜಯ್ಯ' ಎಂಬ ಪಾತ್ರದಲ್ಲಿ ನಟನೆ ಮಾಡುತ್ತಿದ್ದು, ಅದಕ್ಕಾಗಿ ಮೀಸೆ ಬೋಳಿಸಿದ್ದರು. ಅವರು ಇದೇ ಮೊದಲ ಬಾರಿ ಒಂದು ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅದರ ಲುಕ್​ಗಾಗಿ ಮೀಸೆ ತೆಗೆಯುವುದು ಅನಿವಾರ್ಯವಾಗಿತ್ತು.

'ಅಜ್ಜಯ್ಯ' ಪಾತ್ರ ಚಿತ್ರದುದ್ದಕ್ಕೂ ಇರಲಿದ್ದು, ಅದರಲ್ಲಿ ಭಟ್ಟರು ಕೆದರಿದ ಕೂದಲು ಹಾಗೂ ಉದ್ದ ಗಡ್ಡದ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗಡ್ಡದ ವಿಗ್​ ಮುಖಕ್ಕೆ ಹೊಂದಿಕೆಯಾದರೂ ಅದನ್ನು ಮೀಸೆ ಮೇಲೆ ಅಂಟಿಸಿದಾಗ ಅದು ಹೊಂದಿಕೆ ಆಗುತ್ತಿರಲಿಲ್ಲ. ಹೀಗಾಗಿ ಮೀಸೆಯನ್ನೇ ತೆಗೆಯಬೇಕಾಯಿತು ಎಂದು ಅವರು ಹೇಳಿಕೊಂಡಿದ್ದಾರೆ. ರಾಕ್​ಲೈನ್ ವೆಂಕಟೇಶ್ ನಿರ್ಮಾಣದ 'ಕರಟಕ ದಮನಕ'ದಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ಅಭಿನಯಿಸುತ್ತಿದ್ದು, ಚಿತ್ರತಂಡ ಇದೇ ವರ್ಷಾಂತ್ಯದಲ್ಲಿ ಈ ಚಿತ್ರವನ್ನು ತೆರೆಗೆ ತರುವ ಗುರಿ ಇರಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net