

| ವಿಲಾಸ ಮೇಲಗಿರಿ ಬೆಂಗಳೂರು
ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರ ಮತ್ತು ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ಗೆ ನಡೆಯುವ ಚುನಾವಣೆಯಲ್ಲಿ ಪ್ರಾಶಸ್ತ್ಯ ಮತದಾನ ಪದ್ಧತಿ ಜಾರಿಯಲ್ಲಿದೆ. ಡಿ.10ರಂದು ವಿಧಾನ ಪರಿಷತ್ನ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ ಆಯ್ಕೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಮತದಾನ ಮಾಡುವ ವಿಧಾನ ಸಾಮಾನ್ಯ ಚುನಾವಣೆಗಿಂತ ಭಿನ್ನವಾಗಿದೆ. ಇಲ್ಲಿ ಪ್ರಾಶಸ್ತ್ಯ ಮತಗಳ ಆಧಾರದ ಮೇಲೆ ಫಲಿತಾಂಶ ಪ್ರಕಟವಾಗಲಿದೆ. ಈ ಚುನಾವಣೆಯಲ್ಲಿ ಯಾವುದೇ ಇವಿಎಂ ಬಳಕೆ ಇಲ್ಲ. ಬ್ಯಾಲೆಟ್ ಪೇಪರ್ನಲ್ಲೇ ಹಕ್ಕು ಚಲಾಯಿಸಬೇಕು.
6073 ಮತಗಟ್ಟೆ ಸ್ಥಾಪನೆ: 25 ಕ್ಷೇತ್ರಗಳ ಚುನಾವಣೆಗೆ 6073 ಮತಗಟ್ಟೆಗಳನ್ನು ತೆರೆಯಲಾಗುತ್ತದೆ. 47,368 ಪುರುಷರು, 51,474 ಮಹಿಳೆಯರು, ಇತರ 3 ಸೇರಿದಂತೆ ಒಟ್ಟು 98,846 ಸದಸ್ಯರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಚುನಾವಣೆಗೆ 7073 ಪಿಆರ್ಒಗಳು, 9344 ಪಿಒಗಳು ಹಾಗೂ 6648 ಮೈಕ್ರೋ ಅಬ್ಸರ್ವರ್ಗಳನ್ನು ನಿಯುಕ್ತಿ ಮಾಡಲಾಗಿದೆ.
14ಕ್ಕೆ ಮತ ಎಣಿಕೆ: ಡಿ.14ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಅಂದೇ ಫಲಿತಾಂಶ ಹೊರಬೀಳುವ ಸಾಧ್ಯತೆಗಳಿವೆ. 20 ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.
ದ್ವಿಸದಸ್ಯ ಕ್ಷೇತ್ರದಲ್ಲೂ ಒಬ್ಬರಿಗಷ್ಟೇ ಮೊದಲ ಪ್ರಾಶಸ್ತ್ಯ: ಮೇಲ್ಮನೆಗೆ ಸ್ಥಳೀಯ ಸಂಸ್ಥೆಯ 25 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ ಪೈಕಿ ಮೈಸೂರು, ಬೆಳಗಾವಿ, ಧಾರವಾಡ, ದಕ್ಷಿಣ ಕನ್ನಡ, ವಿಜಯಪುರ ದ್ವಿಸದಸ್ಯ ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಲ್ಲೂ ಒಬ್ಬ ಅಭ್ಯರ್ಥಿಗೆ ಮಾತ್ರ ಮೊದಲ ಪ್ರಾಶಸ್ತ್ಯ ಮತ ಹಾಕಬೇಕು. ಮೊದಲು ಅರ್ಹ ಮತ ಪಡೆದವರನ್ನು ವಿಜೇತರೆಂದು ಘೋಷಿಸಿ, ತರುವಾಯದ ಮತ ಎಣಿಕೆಯಲ್ಲಿ ಯಾರು ಅರ್ಹ ಮತ ಪಡೆಯುತ್ತಾರೋ ಅವರನ್ನು 2ನೇ ವಿಜೇತ ಅಭ್ಯರ್ಥಿ ಎಂದು ಪ್ರಕಟಿಸಲಾಗುತ್ತದೆ.
ಎಷ್ಟು ಅಭ್ಯರ್ಥಿ? ಯಾವ ಪಕ್ಷ?: 25 ಕ್ಷೇತ್ರಗಳಲ್ಲಿ ಒಟ್ಟು 90 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಈ ಪೈಕಿ 89 ಪುರುಷರು. ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಸ್ಪರ್ಧಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್ ತಲಾ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಜೆಡಿಎಸ್ 6, ಆಮ್ ಆದ್ಮಿ 3, ರೈತ ಭಾರತ್ ಪಾರ್ಟಿ 1, ಕರ್ನಾಟಕ ರಾಷ್ಟ್ರ ಸಮಿತಿ 1, ಕನ್ನಡ ಚಳವಳಿ ವಾಟಾಳ್ ಪಕ್ಷ 1, ಜನತಾ ಪಾರ್ಟಿ 2, ಜನಹಿತ ಪಕ್ಷ 1, ಜೆಡಿಯು 1, ಎಸ್ಡಿಪಿಐ 1, ಪಕ್ಷೇತರರು 33 ಸೇರಿ ಒಟ್ಟು 90 ಅಭ್ಯರ್ಥಿಗಳು ಕಣದಲ್ಲಿದ್ದಾರೆ.