

ತಿರುವನಂತಪುರ: ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ (ಎನ್ಐಎ) ತಂಡ ಕಳೆದ ವಾರ ಅಲ್ ಕೈದಾ ಉಗ್ರರನ್ನು ಕೇರಳದಿಂದ ಬಂಧಿಸಿದ ಬೆನ್ನಿಗೆ, ಅನೇಕ ವಿಚಾರಗಳು ಬಹಿರಂಗವಾಗಿವೆ. ಕೇರಳದ ಹತ್ತು ಜಿಲ್ಲೆಗಳಲ್ಲಿ ಉಗ್ರರ ಸ್ಲೀಪರ್ ಸೆಲ್ಗಳು ಕೆಲಸ ಮಾಡುತ್ತಿವೆ ಎಂಬ ಆತಂಕಕಾರಿ ವಿಚಾರ ಬಹಿರಂಗವಾಗಿದೆ.
ಎನ್ಐಎ ತನಿಖೆ ವೇಳೆ, ಈಗಾಗಲೇ ಬಂಧಿತ ಲಷ್ಕರ್ ಏ ತೊಯ್ಬಾ ಉಗ್ರ ತಡಿಯಂತವೀಡ್ ನಜೀರ್, ಕಮ್ಯೂನಿಸ್ಟ್ ಉಗ್ರ ನಾಯಕ ಮಲ್ಲ ರಾಜಾ ರೆಡ್ಡಿ, ಅಬ್ದುಲ್ ನಾಸಿರ್ ಮದನಿ ಮತ್ತು ಮೂವರು ಅಲ್ ಕೈದಾ ಉಗ್ರರ ಬಂಧನದ ಬಳಿಕ ಸಾಕಷ್ಟು ಮಾಹಿತಿಗಳು ಬಹಿರಂಗವಾಗಿವೆ. ಇವರೆಲ್ಲರ ಕಾರ್ಯಕ್ಷೇತ್ರ ಮತ್ತು ಸಹಚರರ ಸಂಖ್ಯೆ ಗಮನಿಸಿ ಸಿಕ್ಕ ಮಾಹಿತಿ ಪ್ರಕಾರ ಕೇರಳದ ಹತ್ತು ಜಿಲ್ಲೆಗಳಲ್ಲಿ ಉಗ್ರರ ಸ್ಲೀಪರ್ ಸೆಲ್ಗಳು ಸಕ್ರಿಯವಾಗಿವೆ. ಆ ಮೂಲಕ ಕೇರಳ ಉಗ್ರರಿಗೆ ಸುರಕ್ಷಿತ ತಾಣವಾಗಿ ಬದಲಾಗುತ್ತಿದೆ ಎಂಬ ಕಳವಳಕಾರಿ ವಿಚಾರ ಬೆಳಕಿಗೆ ಬಂದಿದೆ.
ಎನ್ಐಎ ತಂಡ ಕರ್ನಾಟಕದಿಂದ ಕೆಲವು ಶಂಕಿತ ಉಗ್ರರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಆಗ ಅವರು ನೀಡಿದ ಮಾಹಿತಿ ಪ್ರಕಾರ, ಉಗ್ರರು ಕೇರಳಕ್ಕೆ ಆಗಮಿಸುತ್ತಿದ್ದು, ವಿವಿಧೆಡೆ ಬೇರೆ ಬೇರೆ ವೇಷದಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಇದನ್ನು ಕೇರಳ ಸರ್ಕಾರಕ್ಕೆ, ಪೊಲೀಸ್ ಇಲಾಖೆಗೆ ಒದಗಿಸಿದ್ದರೂ ಕ್ರಮ ತೆಗೆದುಕೊಳ್ಳದ ಕಾರಣ, ಉಗ್ರರು ಕೇರಳವನ್ನು ನೆಲೆಯಾಗಿ ಬಳಸಿಕೊಳ್ಳಲಾರಂಭಿಸಿದ್ದಾರೆ ಎಂಬ ಆರೋಪ ರಾಜಕೀಯವಾಗಿ ಕೇಳತೊಡಗಿದೆ. (ಏಜೆನ್ಸೀಸ್)