

ದೇಶದಲ್ಲಿಯೇ ಅತಿ ಎತ್ತರದ ಅಣೆಕಟ್ಟು ನಿರ್ವಣದೊಂದಿಗೆ ಭಾರತದ ಅತಿದೊಡ್ಡ ಜಲವಿದ್ಯುತ್ ಯೋಜನೆಯಾದ ದಿಬಾಂಗ್ ಮಲ್ಟಿಪರ್ಪಸ್ ಪ್ರಾಜೆಕ್ಟ್ಗೆ ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಉದ್ದೇಶದೊಂದಿಗೆ ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿನ ಚೀನಾದ ಗಡಿಭಾಗದಲ್ಲಿ ಈ ಯೋಜನೆಯನ್ನು ರಾಷ್ಟ್ರೀಯ ಜಲವಿದ್ಯುಚ್ಛಕ್ತಿ ನಿಗಮ (ಎನ್ಎಚ್ಪಿಸಿ) ಕಾರ್ಯಗತಗೊಳಿಸುತ್ತಿದೆ.
2,880 ಮೆಗಾ ವ್ಯಾಟ್ ಸಾಮರ್ಥ್ಯದ ಈ ಜಲವಿದ್ಯುತ್ ಯೋಜನೆಯನ್ನು ಅರುಣಾಚಲ ಪ್ರದೇಶದ ಕೆಳ ದಿಬಾಂಗ್ ಕಣಿವೆ ಜಿಲ್ಲೆಯಲ್ಲಿ ದಿಬಾಂಗ್ ನದಿಯ ಮೇಲೆ ನಿರ್ವಿುಸಲಾಗುತ್ತಿದೆ. ಇದಕ್ಕಾಗಿ ಅಂದಾಜು 3.9 ಬಿಲಿಯನ್ ಡಾಲರ್ (32 ಸಾವಿರ ಕೋಟಿ ರೂಪಾಯಿ) ಹೂಡಿಕೆ ಮಾಡಲು ಅನುಮೋದನೆ ನೀಡಲಾಗಿದೆ. ಈ ಯೋಜನೆ ಪೂರ್ಣಗೊಳ್ಳಲು ಒಂಬತ್ತು ವರ್ಷಗಳನ್ನು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. 3,50,000 ಮರಗಳನ್ನು ಕಡಿಯಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಪರಿಸರ ಮತ್ತು ಅರಣ್ಯ ಸಚಿವಾಲಯದ ಅರಣ್ಯ ಸಲಹಾ ಸಮಿತಿಯು 2013 ರಲ್ಲಿ ಯೋಜನೆಗೆ ಅನುಮತಿ ನೀಡುವುದನ್ನು ತಡೆಹಿಡಿದಿತ್ತು. ಆದರೆ, ಈಗ ಯೋಜನೆಗೆ ಅಗತ್ಯವಿರುವ ಪರಿಸರ ಹಾಗೂ ಅರಣ್ಯ ಸಂಬಂಧಿ ಅನುಮತಿ ಸೇರಿದಂತೆ ಅಗತ್ಯವಿರುವ ಎಲ್ಲಾ ಶಾಸನಬದ್ಧ ಅನುಮೋದನೆಗಳನ್ನು ಪಡೆದುಕೊಳ್ಳಲಾಗಿದೆ.
ಈ ನದಿಯು ಇಂಡೋ-ಚೀನಾ ಗಡಿಯಲ್ಲಿ, ಅಂದರೆ ಕೀಯಾ ಪಾಸ್ ಬಳಿ ಹುಟ್ಟುತ್ತದೆ. ಮಿಶ್ಮಿ ಬೆಟ್ಟಗಳ ಮೂಲಕ ಹರಿಯುತ್ತದೆ. ಡಿಬ್ರು-ಸೈಖೋವಾ ಅಭಯಾರಣ್ಯದ ಬಳಿ ಲೋಹಿತ್ ನದಿಯನ್ನು ಸೇರುತ್ತದೆ. ದಿಬಾಂಗ್ನ ಉಪನದಿಗಳೆಂದರೆ ಎಮ್ರಾ, ಇಥುನ್, ದ್ರಿ, ರಂಗೋನ್, ಮಾಥುನ್ ಮತ್ತು ಸಿಸಾರ್.
ಭಾರತದ ಅತಿ ಎತ್ತರದ ಅಣೆಕಟ್ಟು: ಈ ಯೋಜನೆಯಡಿ 278 ಮೀಟರ್ ಎತ್ತರದ ಕಾಂಕ್ರೀಟ್ ಅಣೆಕಟ್ಟು (ಆಳವಾದ ಅಡಿಪಾಯ ಮಟ್ಟಕ್ಕಿಂತ ಮೇಲೆ) ನಿರ್ವಿುಸಲಾಗುತ್ತಿದೆ. ನಿರ್ವಣವಾದ ನಂತರ ಈ ಅಣೆಕಟ್ಟು ಭಾರತದ ಅತ್ಯಂತ ಎತ್ತರವಾದ ಅಣೆಕಟ್ಟಾಗಿ ಹೊರಹೊಮ್ಮಲಿದೆ. 300ರಿಂದ 600 ಮೀಟರ್ ಉದ್ದ ಹಾಗೂ 9 ಮೀ ವ್ಯಾಸವನ್ನು ಹೊಂದಿರುವ ಕುದುರೆ ಲಾಳ ಆಕಾರದ 6 ಸುರಂಗಗಳು; ನೆಲದಡಿಯ ಪವರ್ ಹೌಸ್ ಅನ್ನು ಕೂಡ ಈ ಯೋಜನೆಯಲ್ಲಿ ನಿರ್ವಿುಸಲು ಉದ್ದೇಶಿಸಲಾಗಿದೆ.
ಅರುಣಾಚಲಕ್ಕೆ ಪ್ರಯೋಜನ: ಈ ಯೋಜನೆಯು ಪೂರ್ಣಗೊಂಡ ನಂತರ ಅರುಣಾಚಲ ಪ್ರದೇಶಕ್ಕೆ ನಲವತ್ತು ವರ್ಷಗಳ ಕಾಲ ಉಚಿತ ವಿದ್ಯುತ್ ದೊರೆಯಲಿದೆ. ಅಲ್ಲದೆ, ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ಕೊಡುಗೆಯಾಗಿ ಒಟ್ಟು 26785 ಕೋಟಿ ರೂಪಾಯಿ ಲಭ್ಯವಾಗಲಿದೆ. ಸಮುದಾಯ ಮತ್ತು ಸಾಮಾಜಿಕ ಅಭಿವೃದ್ಧಿ ಯೋಜನೆಗೆ 241 ಕೋಟಿ ರೂಪಾಯಿ, ಸ್ಥಳೀಯ ಜನರ ಸಂಸ್ಕೃತಿ ಮತ್ತು ಗುರುತನ್ನು ಕಾಪಾಡುವ ಯೋಜನೆಗೆ 3.27 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.
ನಾವೆಲ್ಲರೂ ಭೀಕರ ಹವಾಮಾನ ಬದಲಾವಣೆಯೊಂದಿಗೆ ಹೋರಾಡುತ್ತಿರುವಾಗ ಈ ಜಲವಿದ್ಯುತ್ ವಿವಿಧೋದ್ದೇಶ ಯೋಜನೆಯು ಜಗತ್ತಿಗೆ ಭಾರತ ನೀಡಿದ ಪ್ರಮುಖ ಕೊಡುಗೆಯಾಗಲಿದೆ. ಈ ಯೋಜನೆಯಿಂದ ಒಂದೇ ಒಂದು ಕಲ್ಲಿದ್ದಲು ಉರಿಸದೆ 2880 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. | ಪ್ರಕಾಶ್ ಜಾವಡೇಕರ್ ಕೇಂದ್ರ ಪರಿಸರ ಸಚಿವ
ದಿಬಾಂಗ್ ಬಹುಉದ್ದೇಶದಯೋಜನೆಯು ಪ್ರವಾಹ ನಿಯಂತ್ರಣದ ಪ್ರಮುಖ ಉದ್ದೇಶವನ್ನೂ ಹೊಂದಿದೆ. ಈ ಯೋಜನೆ ಜಾರಿಯಾದರೆ, ಕೆಳಭಾಗದ ಸಾಕಷ್ಟು ಪ್ರದೇಶದಲ್ಲಿ ಉಂಟಾಗುವ ಪ್ರವಾಹವನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಬ್ರಹ್ಮಪುತ್ರವು ಪ್ರಬಲ ನದಿಯಾಗಿದ್ದು, ಇದರಿಂದ ಉಂಟಾಗುವ ಪ್ರವಾಹವನ್ನು ತಗ್ಗಿಸುವುದು ಸವಾಲಿನ ಸಂಗತಿಯಾಗಿದೆ. ದಿಹಾಂಗ್, ದಿಬಾಂಗ್ ಮತ್ತು ಲೋಹಿತ್ ಇವು ಬ್ರಹ್ಮಪುತ್ರ ನದಿಯ ಪ್ರಮುಖ ಉಪನದಿಗಳು. ಮಳೆಗಾಲದಲ್ಲಿ ಈ ನದಿಗಳು ಈಶಾನ್ಯ ಭಾರತ ಪ್ರದೇಶದಲ್ಲಿ ಸಾಕಷ್ಟು ಪ್ರವಾಹವನ್ನು ಸೃಷ್ಟಿಸುತ್ತವೆ. ಪ್ರವಾಹ ಸೃಷ್ಟಿ ಹಾಗೂ ನೀರಿನ ಹರಿವು ಬದಲಾಯಿಸುವ ಕಾರಣಕ್ಕಾಗಿ ಬ್ರಹ್ಮಪುತ್ರ ನದಿಯನ್ನು‘ಅಸ್ಸಾಂನ ದುಃಖ’ ಎಂದೇ ಕರೆಯಲಾಗುತ್ತದೆ. ದಿಬಾಂಗ್ ನದಿಗೆ ಅಣೆಕಟ್ಟು ನಿರ್ವಿುಸಿ ನೀರಿನ ಹರಿವನ್ನು ನಿಯಂತ್ರಿಸಿದರೆ, ಬ್ರಹ್ಮಪುತ್ರ ನದಿಯಲ್ಲಿ ನೀರಿನ ಹರಿವನ್ನು ನಿಯಂತ್ರಿಸದಂತಾಗುತ್ತದೆ. ಏಕೆಂದರೆ, ದಿಬಾಂಗ್ ನದಿಯು ಬ್ರಹ್ಮಪುತ್ರದ ಉಪನದಿಯಾಗಿದೆ.
ತೆಹ್ರಿ ಅಣೆಕಟ್ಟನ್ನು ಮೀರಿಸಲಿದೆ: ಈಗ ಭಾರತದಲ್ಲಿರುವ ಅತಿಎತ್ತರದ ಅಣೆಕಟ್ಟು ಎಂದರೆ ಅದು ತೆಹ್ರಿ ಅಣೆಕಟ್ಟು. ಉತ್ತರಾಖಂಡ ರಾಜ್ಯದಲ್ಲಿರುವ ಈ ಅಣೆಕಟ್ಟಿನ ಎತ್ತರ 260.5 ಮೀಟರ್. 2400 ಮೆಗಾ ವ್ಯಾಟ್ ವಿದ್ಯುತ್ ಇಲ್ಲಿ ಉತ್ಪಾದನೆಯಾಗುತ್ತದೆ. ದಿಬಾಂಗ್ ಯೋಜನೆಯು ಎತ್ತರ ಹಾಗೂ ವಿದ್ಯುತ್ ಉತ್ಪಾದನೆ ಪ್ರಮಾಣದಲ್ಲಿ ತೆಹ್ರಿಯನ್ನು ಮೀರಿಸಲಿದೆ.