

ಉಡುಪಿ: ದೇಶ, ರಾಜ್ಯ ಮಾತ್ರವಲ್ಲದೆ ಉಡುಪಿ ಜಿಲ್ಲೆಯಲ್ಲೂ ಕಳೆದ ಕೆಲವು ತಿಂಗಳುಗಳಿಂದ ಕುಸಿದು ಬಿದ್ದು ಸಾವಿಗೀಡಾಗುತ್ತಿರುವ ಪ್ರಕರಣ ಮೇಲಿಂದ ಮೇಲೆ ನಡೆಯುತ್ತಿದ್ದು, ಇಂದು ಕ್ರಿಕೆಟಿಗರೊಬ್ಬರು ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ.
ಉಡುಪಿಯ ಉದ್ಯಾವರದ ಪಿತ್ರೋಡಿಯ ಮಲ್ಲೇಶ್ (40) ಸಾವಿಗೀಡಾದ ವ್ಯಕ್ತಿ. ಕ್ರಿಕೆಟಿಗರೂ ಆಗಿರುವ ಇವರು ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಕುಸಿದು ಬಿದ್ದು ತೀವ್ರ ಅಸ್ವಸ್ಥಗೊಂಡ ಇವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಜೀವ ಉಳಿಸಿಕೊಳ್ಳುವ ಪ್ರಯತ್ನ ನಡೆಸಲಾಯಿತಾದರೂ ಪ್ರಯೋಜನವಾಗಲಿಲ್ಲ.
ಉಡುಪಿಯ ಬನ್ನಂಜೆಯಲ್ಲಿ ಸಿಎ ಆಫೀಸ್ ಹೊಂದಿದ್ದ ಇವರು, ಚಾರ್ಟರ್ಡ್ ಅಕೌಂಟೆಂಟ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿಯಲ್ಲೂ ಇದ್ದರು. ಪಿತ್ರೋಡಿಯ ವೆಂಕಟರಮಣ ಸ್ಪೋರ್ಟ್ಸ್ ಕ್ಲಬ್ನ ಮಾಜಿ ಅಧ್ಯಕ್ಷ, ವಿಎಸ್ಸಿ ಬ್ಲಡ್ ಫಾರ್ ಲೈಫ್ ರಕ್ತದಾನ ಸಂಘದ ಸದಸ್ಯರೂ ಆಗಿದ್ದ ಇವರು ರಕ್ತದಾನ ಮಾಡುವ ಮೂಲಕ ಹಲವರನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವೆಂಕಟರಮಣ ಕ್ರಿಕೆಟರ್ಸ್ ನೇತೃತ್ವದ ತಂಡದಲ್ಲಿ ಪ್ರಮುಖ ಆಟಗಾರರಾಗಿ ಜಿಲ್ಲೆ ಹಾಗೂ ರಾಜ್ಯ-ರಾಷ್ಟ್ರಮಟ್ಟದ ಹಲವು ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗಿಯಾಗಿ, ಪ್ರಶಸ್ತಿ ಗಳಿಸಿದ್ದರು. ಇವರು ಪತ್ನಿ, ಇಬ್ಬರು ಮಕ್ಕಳು, ತಂದೆ-ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.