

ನವದೆಹಲಿ: ತುರ್ತು ಸಂದರ್ಭಗಳಲ್ಲಿ 100 ನಂಬರ್ಗೆ ಕರೆ ಮಾಡಿದರೆ ಸಾಕು ಕೆಲವೇ ನಿಮಿಷಗಳಲ್ಲಿ ಪೊಲೀಸರು ನಿಮ್ಮ ಮುಂದೆ ಹಾಜರಾಗಿ, ತೊಂದರೆಯಿಂದ ರಕ್ಷಣೆ ಮಾಡುತ್ತಾರೆ. ಸಂಕಷ್ಟದ ಸಂದರ್ಭಗಳಲ್ಲಿ ಸಂತ್ರಸ್ತರಿಗೆ ಸಹಾಯ ಮಾಡಲೆಂದೇ ಈ ಸಹಾಯವಾಣಿ ಸೇವೆಗಳನ್ನು ಸ್ಥಾಪಿಸಲಾಗಿದೆ. 100ಕ್ಕೆ ಕರೆ ಮಾಡಿ ಮಾಹಿತಿ ನೀಡಿದರೆ ಸಾಕು ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸುತ್ತಾರೆ. ಪೊಲೀಸರು ಉತ್ತಮವಾಗಿ ಸ್ಪಂದಿಸುವ ಕಾರಣ ಈ ಸಂಖ್ಯೆಗೆ ಕರೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದರ ಲಾಭ ಪಡೆದು ಕೆಲ ಪುಂಡ ಪೋಕರಿಗಳು ಪೊಲೀಸರಿಗೆ ತೊಂದರೆ ನೀಡಿದ ಪ್ರಕರಣಗಳೂ ನಡೆದಿವೆ. ಸಣ್ಣಪುಟ್ಟ ಸಮಸ್ಯೆಗಳಿಗೂ 100ಕ್ಕೆ ಕರೆ ಮಾಡುವುದು ವಿಪರೀತವಾಗಿದೆ.
ಇತ್ತೀಚೆಗೆ ವ್ಯಕ್ತಿಯೊಬ್ಬರು 100ಕ್ಕೆ ಡಯಲ್ ಮಾಡಿದರು. ತಕ್ಷಣವೇ ಪೊಲೀಸರು ಸ್ಥಳಕ್ಕೆ ತಲುಪಿ ನೋಡಿದಾಗ ಅವರಿಗೆ ಶಾಕ್ ಕಾದಿತ್ತು. ಈ ಘಟನೆ ಎಲ್ಲಿ ನಡೆದಿದೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಆದರೆ, ವಿಡಿಯೋ ವೈರಲ್ ಆಗಿದೆ. ಪೊಲೀಸರು, ಕರೆ ಮಾಡಿದನ ಮನೆಗೆ ಬಂದು ನೋಡಿದಾಗ ಅಲ್ಲಿ ಬೀದಿ ನಾಯಿಯೊಂದು ಇತ್ತು. ಆಕಸ್ಮಿಕವಾಗಿ ಬೀದಿ ನಾಯಿ ಮನೆಯೊಳಗೆ ನುಗ್ಗಿಬಿಟ್ಟಿತ್ತು. ಅದನ್ನು ಹೊರಗಾಕಲು ಮನೆಯ ಮಾಲೀಕ ಪೊಲೀಸರಿಗೆ ಕರೆ ಮಾಡಿದ್ದ.
ಕರೆ ಮಾಡಿದ್ದನ್ನು ನೋಡಿ ಏನೋ ಸಮಸ್ಯೆ ಇರಬಹುದು ಅಂತ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಅಸಲಿ ಸಂಗತಿಯನ್ನು ತಿಳಿದು ಭ್ರಮನಿರಸನವಾಯಿತು. ಮನೆ ಮಾಲೀಕ ಮಾಡಿದ ಅವಾಂತರವನ್ನು ಪೊಲೀಸರು ವಿಡಿಯೋ ಮಾಡಿದ್ದಾರೆ. ಈ ರೀತಿ ಕರೆ ಮಾಡುವುದು ಸರಿಯಲ್ಲ ಮತ್ತು ನಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಬೇಡಿ ಎಂದು ಮನೆಯ ಮಾಲೀಕನಿಗೆ ಬುದ್ಧಿವಾದ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಬಗ್ಗೆ ನೆಟ್ಟಿಗರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಹೇಳಿದ್ದರಲ್ಲಿ ತಪ್ಪೇನಿಲ್ಲ, ಸಣ್ಣ ಪುಟ್ಟ ವಿಷಯಗಳಿಗೂ ಕರೆ ಮಾಡುವುದು ಸರಿಯಲ್ಲ ಎನ್ನುತ್ತಾರೆ ಕೆಲವರು. ಆದರೆ ಇನ್ನು ಕೆಲವರು ಆ ವ್ಯಕ್ತಿ ಮಾಡಿದ್ದರಲ್ಲಿ ತಪ್ಪೇನಿಲ್ಲ, ನಾಯಿ ಕಚ್ಚುತ್ತದೆ ಎಂಬ ಭಯದಿಂದ ಪೊಲೀಸರಿಗೆ ಕರೆ ಮಾಡಿದ್ದಾನೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್)