

ಬೆಂಗಳೂರು: ಮಣ್ಣು ಪರೀಕ್ಷೆ ಮೂಲಕ ಫಲವತ್ತತೆಗೆ ಅನುಗುಣವಾಗಿ ಅಗತ್ಯ ರಸಗೊಬ್ಬರಗಳನ್ನು ಹಾಕಿದರೆ ಮಾತ್ರ ಮಣ್ಣಿನ ಆರೋಗ್ಯ ಹಾಗೂ ಸುಸ್ಥಿತ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ತಂತ್ರಜ್ಞಾನ ಯುಗದಲ್ಲಿ ರೈತರು ಮಣ್ಣು ಪರೀಕ್ಷೆ ಮಾಡಿಸದೇ, ಮೊಬೈಲ್ ಆ್ಯಪ್ ಬಳಸಿಕೊಂಡು ಮಣ್ಣಿನ ಫಲವತ್ತತೆ ಹಾಗೂ ಬೆಳೆಗೆ ಅಗತ್ಯವಿರುವ ಪೋಷಕಾಂಶಗಳನ್ನು ತಿಳಿದುಕೊಳ್ಳಬಹುದಾಗಿದೆ.
ಹೌದು, ಅಖಿಲ ಭಾರತ ಸುಸಂಟಿತ ಮಣ್ಣು ಪರೀಕ್ಷೆ ಮತ್ತು ಬೆಳೆ ಸ್ಪಂದನೆ ಸಹಕಾರದೊಂದಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ "ಧರ್ತಿಮಿತ್ರ' ಎಂಬ ವೆಬ್ಸೈಟ್ ಮತ್ತು ಮೊಬೈಲ್ ಆ್ಯಪ್ನ್ನು ಅಭಿವೃದ್ಧಿ ಪಡಿಸಿದೆ. ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಆ್ಯಪ್ನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿದ್ದಾರೆ.
'ಧರ್ತಿಮಿತ್ರ' ಆ್ಯಪ್ನ್ನು ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಅಭಿವೃದ್ಧಿಪಡಿಸಲಾಗಿದೆ. ಆ್ಯಪ್ನಲ್ಲಿ ಸ್ಥಳದ ಭೌಗೋಳಿಕ ನಿರ್ದೇಶಾಂಕಗಳು ಅಥವಾ ರೈತರ ಹೊಲದ ಸರ್ವೆ ಸಂಖ್ಯೆಯನ್ನು ನಮೂದಿಸಿದಾಗ ಮಣ್ಣಿನಲ್ಲಿರುವ ಪೋಷಕಾಂಶಗಳ ಮಾಹಿತಿ, ಎಸ್.ಟಿ.ಸಿ.ಆರ್ ಆಧಾರಿತ ರಸಗೊಬ್ಬರಗಳ ಶಿಫಾರಸ್ಸಿನ ಪ್ರಮಾಣ ಹಾಗೂ ಸಮೀಕರಣಗಳಿಲ್ಲದ ಬೆಳೆಗಳಿಗೆ ಕಡಿಮೆ&ಮಧ್ಯಮ&ಹೆಚ್ಚು (ಎಲ್.ಎಮ್.ಎಚ್) ವಿಧಾನದಲ್ಲಿ ರಸಗೊಬ್ಬರಗಳ ಶಿಫಾರಸ್ಸಿನ ಪ್ರಮಾಣದ ವರದಿ ಲಭ್ಯವಾಗುತ್ತದೆ.
ಭೌಗೋಳಿಕ ನಿರ್ದೇಶಾಂಕಗಳ ಆಧಾರದ ಮೇಲೆ ಪ್ರತಿ 100 ಮೀ. ಅಂತರದಲ್ಲಿ ಜಿಲ್ಲೆಗಳಾದ್ಯಂತ ವಿಭಿನ್ನ ಮಣ್ಣು ಪರೀಕ್ಷೆ ವರದಿಯನ್ನು ಆ್ಯಪ್ ಸಹಾಯದಿಂದ ಪಡೆಯಬಹುದು. ಇದರಿಂದಾಗಿ ಹಲವು ಬಾರಿ ಮಣ್ಣಿನ ಮಾದರಿ ಸಂಗ್ರಹಣೆ ಮತ್ತು ವಿಶ್ಲೇಷಣೆ ಮಾಡಬೇಕಾಗುವ ಸಮಯ, ವೆಚ್ಚವನ್ನು ಉಳಿಸಬಹುದು. ಆ್ಯಪ್ನ ತಂತ್ರಾಂಶದಲ್ಲಿ ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರಗಳ ಶಿಫಾರಸ್ಸನ್ನು ಮಾಡಲಾಗಿದ್ದು ಸುಸ್ಥಿರ ಕೃಷಿ ಮತ್ತು ಮಣ್ಣಿನ ಫಲವತ್ತತೆಯ ಮಾಹಿತಿ ಸಿಗುತ್ತದೆ.