

ಬಂದೆರಗಿದ ಕಾಯಿಲೆಗೆ ಅದರದೇ ಆದ ಚಿಕಿತ್ಸೆ, ಆಹಾರ, ವಿಹಾರ ಗಳನ್ನು ಸಮರ್ಪಕವಾಗಿ ಅನ್ವಯಿಸಿದರೆ ಮಾತ್ರ 3-4ದಿನಗಳಲ್ಲಿ ಅದು ವಾಸಿಯಾಗುತ್ತದೆ. ಹೀಗೆ ರೋಗದಿಂದ ಆದಷ್ಟು ಬೇಗನೆ ಹೊರಬರಬೇಕೆನ್ನುವ ಮಿಡಿತ ಇರಬೇಕಾದುದು ಅಪೇಕ್ಷಣೀಯವೇ ಸರಿ. ಮನಸ್ಸು ಯಾವಾಗಲೂ ಧನಾತ್ಮಕವಾಗಿ ಮುನ್ನಡೆದರೆ ದೇಹದ ರೋಗ ಮಣಿಸುವ ಶಕ್ತಿ ಇನ್ನಷ್ಟು ಪ್ರಬಲಗೊಂಡು ಬೇಗನೆ ಆರೋಗ್ಯ ಸುಧಾರಣೆಗೆ ಅನುವು ಮಾಡಿಕೊಡುತ್ತದೆ.
ರೋಗಿಗಳಿಗೆ ಚಿಕಿತ್ಸೆ ನೀಡುವಾಗ ವಿಚಿತ್ರವೊಂದು ಗೋಚರಿಸುತ್ತದೆ. ಮೂತ್ರಪಿಂಡದ ವೈಫಲ್ಯವನ್ನು ತೋರಿಸಲು ಬೇಕಾಗುವ ಹಲವಾರು ರಕ್ತತಪಾಸಣೆಯ ಮಾದರಿಗಳಲ್ಲಿ ರಕ್ತದಲ್ಲಿನ ಕ್ರಿಯಾಟಿನಿನ್ ಅಂಶವೂ ಪ್ರಮುಖವಾದುದು. ಪುರುಷರಿಗೆ 1.4 ಎಮ್/ಡಿಎಲ್ ತನಕ ಅದು ಇರಬಹುದೆಂದು ಮೊದಲು ನಿರ್ಣಯಿಸಲಾಗಿತ್ತು. ಇತ್ತೀಚೆಗೆ ಅದರ ಗರಿಷ್ಟ ಮಟ್ಟ 1.2ರ ಒಳಗಿರಬೇಕೆಂದು ಹೇಳಲಾಗುತ್ತಿದೆ. ಇದು ಮೇಲೆರಿದಂತೆ ಕಿಡ್ನಿವೈಫಲ್ಯ ಹೆಚ್ಚಿನ ಮಟ್ಟಕ್ಕೆ ಹೋಗುತ್ತಿದೆಯೆಂದು ಅರ್ಥ. ಇದು ಸರಿಸುಮಾರು ಐದರ ಆಸುಪಾಸಿಗೆ ತಲುಪಿ ದೇಹಸ್ಥಿತಿ ಹದಗೆಡುತ್ತಿದ್ದಾಗ ಪರಿಸ್ಥಿತಿಯನ್ನು ಪರಾಮಶಿಸಿ ಡಯಾಲಿಸಿಸ್ ಆರಂಭಿಸುವುದು ಪ್ರಸ್ತುತ ನಡೆಯುತ್ತಿರುವ ಚಿಕಿತ್ಸಾ ರೂಢಿ.
ಜೀವ ಇರುವಲ್ಲಿಯ ತನಕ ವಾರಕ್ಕೆ ಮೂರು ಅಥವಾ ಎರಡು ಬಾರಿಯಂತೆ ನಿರಂತರವಾಗಿ ಇದು ನಡೆಯುತ್ತಲೇ ಇರಬೇಕು. ಅದಿಲ್ಲವಾದಲ್ಲಿ ಮೂತ್ರಪಿಂಡಗಳನ್ನು ಕಸಿ ಮಾಡಿ ಬದಲಾಯಿಸಬೇಕು. ಇವೆರಡೇ ಆಧುನಿಕ ಚಿಕಿತ್ಸಾ ಪದ್ಧತಿಯಲ್ಲಿ ಇಂದಿರುವ ದಾರಿಗಳು. ಕಟ್ಟುನಿಟ್ಟಾದ, ಅನುಸರಿಸಲು ತ್ರಾಸದಾಯಕವಾದ ಆಹಾರ ನಿಯಮಗಳು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸುತ್ತದೆ. ಈ ಕುರಿತಾದ ಮಾಹಿತಿಗಳು ಜನರಿಗೆ ಅಲ್ಲಿ ಇಲ್ಲಿ ಕೇಳಿ, ರೋಗಿಗಳನ್ನು ನೇರವಾಗಿ ನೋಡಿ, ಅಂತರ್ಜಾಲದಲ್ಲಿ ಹುಡುಕಾಡಿ ಅಥವಾ ಪತ್ರಿಕೆ-ಪುಸ್ತಕಗಳನ್ನು ಓದಿ ಅಲ್ಪಸ್ವಲ್ಪವಾದರೂ ತಿಳಿದಿರುತ್ತದೆ.
ಆರ್ಥಿಕ, ಸಾಮಾಜಿಕ, ಕೌಟುಂಬಿಕ, ವೃತ್ತಿ, ಪ್ರವೃತ್ತಿ ಹಾಗೂ ಆಯುಷ್ಯ- ಹೀಗೆ ಬದುಕಿನ ಎಲ್ಲಾ ದೃಷ್ಟಿಕೋನಗಳಿಂದಲೂ ಲೆಕ್ಕಾಚಾರಗಳೆಲ್ಲಾ ತಲೆಕೆಳಗು ಆಗುವುದರಿಂದ ಈ ಕಾಯಿಲೆಯ ಕರಾಳ ಮುಖದ ಬಗ್ಗೆ ಬಹಳಷ್ಟು ಹೆದರಿಕೆ ಇರುತ್ತದೆ. ಇದೊಂದು ಕಾಯಿಲೆ ತನಗೆ ಬರದಿದ್ದರೆ ಸಾಕು ಎಂಬಂತಹ ಪ್ರಾರ್ಥನೆಯಲ್ಲಿ ಜನರಿರುತ್ತಾರೆ. ಹಾಗೆಂದು ಈ ರೋಗವನ್ನು ತಡೆಯಬೇಕಾದರೆ ಜೀವನದಲ್ಲಿ ಏನೆಲ್ಲಾ ರಕ್ಷಣಾತ್ಮಕ ಶೈಲಿಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಜನರ ಬಳಿ ಮಾಹಿತಿಯೂ ಇರುವುದಿಲ್ಲ, ತಿಳಿಯುವ ಗೋಜಿಗೂ ಹೋಗುವುದಿಲ್ಲ.
ನಗರ ಪ್ರದೇಶದಲ್ಲಿರುವ ಒಬ್ಬ ವ್ಯಕ್ತಿಗೆ ರಕ್ತದಲ್ಲಿನ ಕ್ರಿಯಾಟಿನಿನ್ ಅಂಶ 1.8ಕ್ಕೆ ತಲುಪಿತು ಎಂದಿಟ್ಟುಕೊಳ್ಳಿ. ಆ ವ್ಯಕ್ತಿಯು ಚಿಕಿತ್ಸೆಗೆ ಬಂದಾಗ 1.6ಕ್ಕೆ ಇಳಿಯಬೇಕೆಂದರೆ ಮೂರ್ನಾಲ್ಕು ತಿಂಗಳ ಚಿಕಿತ್ಸೆಯ ಬಳಿಕ ತುಂಬಾ ನಿಧಾನವಾಗಿ ಸಾಧ್ಯವಾಗುವುದನ್ನು ಹಲವರಲ್ಲಿ ನೋಡುತ್ತೇವೆ. ತುಸುಮಾತ್ರ ಇಳಿಕೆಗೆ ಅಪಾರವಾದ ಪರಿಶ್ರಮವೇ ಬೇಕಾಗುತ್ತದೆ. ಅದೇ ದೂರದ ಹಳ್ಳಿಯಿಂದ ಕ್ರಿಯಾಟಿನಿನ್ ಪ್ರಮಾಣ 4 ಇರುವ ರೋಗಿ ಬಂದಾಗ ಒಂದೇ ತಿಂಗಳಲ್ಲಿ 3ಕ್ಕೆ ವೇಗವಾಗಿ ಇಳಿಯುವುದೂ ಕಾಣಸಿಗುತ್ತದೆ. ಅವರಿಗೆ ಶಿಕ್ಷಣವೂ ಇಲ್ಲ, ಜಾಗೃತಿಯೂ ಇಲ್ಲ, ರೋಗ ಮಾಹಿತಿಯೂ ಇಲ್ಲ, ಮುಂದಾಗುವ ತಾಪತ್ರಯಗಳ ಪರಿವೆಯೇ ಇಲ್ಲ, ಮೂತ್ರಪಿಂಡ ವೈಫಲ್ಯ ಎಂದರೆ ಏನೆಂಬುದರ ಗಂಧಗಾಳಿಯೂ ಅವರಿಗಿರುವುದಿಲ್ಲ. ಅವರದ್ದು ಎರಡೇ ಧ್ಯೇಯ. ವೈದ್ಯರ ಸಲಹೆಯಂತೆ ಔಷಧ ಸೇವಿಸುವುದು, ವೈದ್ಯರ ಮಾರ್ಗದರ್ಶನದಂತೆ ಪಥ್ಯ ಮಾಡುವುದು. ಇದು ಬಿಟ್ಟು ಮೂರನೆಯ ವಿಚಾರವೇ ಅವರಿಗಿರುವುದಿಲ್ಲ.
ಹಾಗಿದ್ದರೂ ಊಹೆಗೂ ನಿಲುಕದಷ್ಟು ಚೆನ್ನಾಗಿ ಚಿಕಿತ್ಸೆಗೆ ದೇಹದ ಅತ್ಯದ್ಭುತವಾದ ಸ್ಪಂದನೆ! ಇದು ಯಾಕೆ ಹೀಗೆ? ಉತ್ತರ ಬಹಳ ಸರಳ. ರೋಗದ ಅರೆಬರೆ ತಿಳುವಳಿಕೆ, ಭವಿಷ್ಯದ ಕುರಿತಾದ ಆತಂಕ, ಜೀವಭಯ ಇವು ಯಾವುದೂ ರೋಗದಿಂದ ಹೊರಬರಲು ಸಹಕರಿಸುವುದಿಲ್ಲ. ದೇಹವು ರೋಗದೊಂದಿಗೆ ಸೆಣಸಾಡುವುದರ ಬದಲಿಗೆ ಶರಣಾಗುವಂತೆ ಮಾಡುತ್ತವೆ. ಅದರ ಬದಲು ವೈದ್ಯರಿಗೆ ಶರಣಾಗಿ ರೋಗದೊಡನೆ ಸೆಣಸಾಡಿದರೆ ವಿಜಯ ನಿಶ್ಚಿತ. ಇದಕ್ಕಾಗಿ ದೀರ್ಘಕಾಲೀನ ಕಾಯಿಲೆಯಾದರೆ ಯಾವ ವೈದ್ಯಪದ್ಧತಿ ಒಳ್ಳೆಯದು, ಅದರಲ್ಲಿ ಯಾವ ವೈದ್ಯರು ಒಳ್ಳೆಯವರು ಎಂಬ ನಿರ್ಣಯಗಳೇ ಪ್ರಾಮುಖ್ಯವಾಗುತ್ತವೆ. ಸೂಕ್ತವಾದ ವ್ಯಾಧಿ ಪರಿಹಾರಕ್ಕೆ ವೈದ್ಯರು ನೀಡುವ ಔಷಧಗಳ ಮೇಲೆ ನೂರಕ್ಕೆ ನೂರರಷ್ಟು ನಂಬಿಕೆ, ಆಹಾರ ವಿಹಾರ, ಆಚಾರ ವಿಚಾರ, ಜೀವನಶೈಲಿಗಳಲ್ಲಿ ಮಾಡಬೇಕಾದ ಬದಲಾವಣೆಗಳು ಅತ್ಯಂತ ಮಹತ್ವಪೂರ್ಣ ಭೂಮಿಕೆಯನ್ನು ಪಡೆದಿರುತ್ತವೆ. ರೋಗ ಪರಿಹಾರವನ್ನು ಅರಿತು ಅನುಷ್ಠಾನಿಸುತ್ತಾ ಮುಂದಡಿ ಇಟ್ಟಷ್ಟು ರೋಗವು ಹಿಂದೆ ಸರಿಯುತ್ತದೆ. ಕಾಯಿಲೆ ಕುರಿತಾಗಿ ವೈದ್ಯರಿಗೆ ಎಷ್ಟು ಹೇಳಬೇಕು ಅನಿಸುತ್ತದೋ ಅದಷ್ಟೇ ಜ್ಞಾನ ರೋಗಿಗಿದ್ದರೆ ಸಾಕು. ರೋಗಿಗೆ ದರ್ಶನವಾಗಬೇಕಾದುದು ರೋಗದ ಮುಖವಲ್ಲ, ಪರಿಹಾರದ ಮುಖ!