More

    ಸಾಧಕರ ದಾರಿ | ಒಂಭತ್ತು ತಿಂಗಳ ತುಂಬು ಗರ್ಭಿಣಿ ಭಾರತದ ಮೊದಲ ಕರೊನಾ ಟೆಸ್ಟಿಂಗ್​ ಕಿಟ್​ ಕಂಡುಹಿಡಿದರು!

    ಕೆಲ ವರ್ಷಗಳ ಹಿಂದೆ ಇಡೀ ಜಗತ್ತು ಕರೊನಾ ಹೆಮ್ಮಾರಿಯ ವಿರುದ್ಧ ಛಲ ಬಿಡದೇ ಹೋರಾಡುತ್ತಿತ್ತು. ಭಾರತೀಯರಂತೂ ಈ ಮಹಾಮಾರಿಯನ್ನು ಹೊಡೆದೋಡಿಸಲು ಶತಾಯಗತಾಯ ಪ್ರಯತ್ನಿಸಿ ಯಶಸ್ವಿಯಾದೆವು. ಸುಮಾರು ಒಂದು ವರ್ಷಗಳ ಕಾಲ ಮಾಡಿದ್ದ ಲಾಕ್​ಡೌನ್​ನಲ್ಲಿ ವೈದ್ಯರು, ಪೊಲೀಸರು, ಪೌರ ಕಾರ್ಮಿಕರು, ಸರ್ಕಾರಿ ಇಲಾಖೆಗಳು, ಸ್ವಯಂ ಸೇವಕರು ಹೀಗೆ ಅನೇಕರು ನಮ್ಮನ್ನು ಕಾಯುವಲ್ಲಿ ಶ್ರಮಿಸುತ್ತಿದ್ದರು.

    ಒಂಭತ್ತು ತಿಂಗಳ ತುಂಬು ಗರ್ಭಿಣಿ…

    ಇದೆಲ್ಲದರ ಮಧ್ಯೆ ಮಹಾರಾಷ್ಟ್ರದ ಒಬ್ಬ ತಾಯಿ ಮಾತ್ರ ಒಂದು ಮಹೋನ್ನತ ಸಾಧನೆ ಮಾಡಿ ನಮ್ಮನ್ನೆಲ್ಲ ಬೆಕ್ಕಸ ಬೆರಗಾಗಿಸಿದ್ದರು.! ಅವರು ಆಗ ಒಂಭತ್ತು ತಿಂಗಳ ತುಂಬು ಗರ್ಭಿಣಿ. ಈಗಲೋ-ಆಗಲೋ ಪ್ರಸವ ಆಗಬಹುದಾದಂತಹ ಸ್ಥಿತಿ!. ಆದರೆ ಅವರು ಮಾತ್ರ ಇದಕ್ಕೆ ತಲೆಕೆಡಿಸಿಕೊಳ್ಳದೇ ಇಡೀ ಭಾರತಕ್ಕೆ ಉಪಯೋಗವಾಗುವ ಒಂದು ಸಾಧನದ ಆವಿಷ್ಕಾರದಲ್ಲಿ ತೊಡಗಿದ್ದರು. ಸತತ ಪ್ರಯತ್ನದ ನಂತರ ಯಶಸ್ಸನ್ನು ಸಾಧಿಸಿದರು. ಆ ಸಾಧನೆಯೇ ಮಹಾಮಾರಿ ಕರೊನಾವನ್ನು ಪತ್ತೆ ಹಚ್ಚಬಲ್ಲ ಪ್ಯಾಥೊ ಡಿಟೆಕ್ಟ್​ ಟೆಸ್ಟಿಂಗ್​ ಕಿಟ್​. ಇದನ್ನು ಕಂಡುಹಿಡಿದವರು ಬೇರಾರೂ ಅಲ್ಲ ಮಹಾರಾಷ್ಟ್ರದ ಪುಣೆಯ ಮೈಲ್ಯಾಬ್​ನ ವೈರೋಲಾಜಿಸ್ಟ್​ ಮಿನಾಲ್​ ದಖಾವೆ ಭೋಸಲೆ!

    ಇದನ್ನೂ ಓದಿ: Success Story: ಕೋಚಿಂಗ್ ಹೋಗಲೇ ಇಲ್ಲೆ… ಆದ್ರೂ ಐಎಎಸ್ ಪಾಸ್; ಏನಿದರ‌ ಗುಟ್ಟು..?

    ಭಾರತದ ಮೊದಲ ಕರೊನಾ ಟೆಸ್ಟಿಂಗ್​ ಕಿಟ್

    ಮಹಾರಾಷ್ಟ್ರದ ಪುಣೆಯ ಮೈಲ್ಯಾಬ್​ನಲ್ಲಿ ಕಂಡು ಹಿಡಿದ ಈ ಟೆಸ್ಟಿಂಗ್​ ಕಿಟ್​ ಭಾರತದ ಮೊದಲ ಕರೊನಾ ಟೆಸ್ಟಿಂಗ್​ ಕಿಟ್​ ಎಂಬ ಖ್ಯಾತಿ ಗಳಿಸಿತು. ಮೊದಲ 150 ಟೆಸ್ಟಿಂಗ್​ ಕಿಟ್​ಗಳನ್ನು ದೆಹಲಿ, ಗೋವಾ ಮತ್ತು ಬೆಂಗಳೂರಿಗೆ ಕಳುಹಿಸಲಾಗಿತ್ತು. ನಂತರ ಇಡೀ ಭಾರತದಾದ್ಯಂತ ಈ ಟೆಸ್ಟಿಂಗ್​ ಕಿಟ್​ಗಳನ್ನು ಕಳುಹಿಸುವ ಪ್ರಕ್ರಿಯೆ ನಡೆಯಿತು. ಇದೇ ಮೈಲ್ಯಾಬ್​ ಈ ಮೊದಲು ಎಚ್​ಐವಿ, ಹೆಪಟೈಟಿಸ್​&ಬಿ ಮತ್ತು ಹೆಪಟೈಟಿಸ್​ಸಿ ಹೀಗೆ ಅನೇಕಾನೇಕ ರೋಗಗಳ ಟೆಸ್ಟಿಂಗ್​ ಕಿಟ್​ನ್ನು ಕಂಡುಹಿಡಿಯುವುದರ ಮೂಲಕ ತನ್ನ ಸಾಮರ್ಥ್ಯ ತೋರಿತ್ತು.

    ಮಿನಾಲ್​ ಭೋಸಲೆ ಮತ್ತು ಮೈಲ್ಯಾಬ್​ನ ಇನ್ನೊಂದು ಹೆಚ್ಚುಗಾರಿಕೆಯ ವಿಚಾರವೆಂದರೆ, ಕಿಟ್​ ತಯಾರಿಸಲು ನಾಲ್ಕೆದು ತಿಂಗಳ ಅವಧಿ ಬೇಕಾಗುತ್ತಿತ್ತು, ಆದರೆ ಈ ಟೆಸ್ಟಿಂಗ್​ ಕಿಟ್​ನ್ನು ಮಿನಾಲ್​ ಮತ್ತು ತಂಡ ಒಂದು ತಿಂಗಳು ಎರಡು ವಾರಗಳಲ್ಲಿ ತಯಾರಿಸಿ ಸಾಧನೆಗೈದಿದ್ದರು! ಈ ಬಗ್ಗೆ ಮಿನಾಲ್​ ಅವರಿಗೆ ಕೇಳಿದಾಗ “ಇದು ಅತ್ಯಂತ ತುರ್ತಾಗಿ ಅವಶ್ಯವಿತ್ತು, ನಾನಿದನ್ನು ಸವಾಲಾಗಿ ಸ್ವೀಕರಿಸಿ ನನ್ನ ದೇಶಕ್ಕಾಗಿ ಸೇವೆ ಸಲ್ಲಿಸಿದ್ದೇನೆ” ಎನ್ನುತ್ತಾರೆ.

    ಇದನ್ನೂ ಓದಿ: Success Story | ಇವರು 100ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ್ದಾರೆ; ಅಂತಿಮವಾಗಿ ಆಯ್ಕೆ ಆಗಿದ್ದು ಕರ್ನಾಟಕ ಫಾರೆಸ್ಟ್​ ಸರ್ವಿಸ್​ಗೆ!

    ಈ ಕಿಟ್​ ತಯಾರಿಸಿ, ಅನುಮತಿಗಾಗಿ ಕಳುಹಿಸಿದ ಕೆಲ ಗಂಟೆಗಳ ನಂತರ ಒಂದು ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದರು. ತಾನು ಸಂದಿಗ್ಧ ಸ್ಥಿತಿಯಲ್ಲಿದ್ದರೂ, ದೇಶದ ಸ್ಥಿತಿಯನ್ನು ನೋಡಿ, ತನ್ನ ನೋವನ್ನು ಬದಿಗೊತ್ತಿ ನಮಗಾಗಿ ಈ ಮಹಾನ್​ ಸಾಧನೆ ಮಾಡಿದ್ದಾರೆ. ಅವರು ನಮಗೆಲ್ಲರಿಗೂ ಮಾದರಿ.

    ಚಿದಾನಂದ ಮಾಯಪ್ಪಾ ಪಡದಾಳೆ, ಧಾರವಾಡ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts