

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಮಿಂಚಿ, ಬಿಗ್ಬಾಸ್ ಮನೆಯಲ್ಲೂ ಕಾಣಿಸಿಕೊಂಡಿದ್ದ ಧನುಶ್ರೀ ಇದೀಗ ನಾಯಕಿಯಾಗಿ ಡೆಬ್ಯೂ ಮಾಡಿದ್ದಾರೆ. ಚಿತ್ರದ ಹೆಸರು ‘ಒಂದೊಳ್ಳೆ ಲವ್ಸ್ಟೋರಿ’. ಇತ್ತೀಚೆಗಷ್ಟೆ ಹೊಸ ಪ್ರತಿಭೆಗಳೇ ಸೇರಿ ಮಾಡಿರುವ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಪ್ರವೀಣ್ ಸುತರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಅಶ್ವಿನ್ ನಾಯಕನಾಗಿ ನಟಿಸಿದ್ದಾರೆ. ಅವರಿಗೆ ನಾಯಕಿಯಾಗುವ ಮೂಲಕ ಧನುಶ್ರೀ ಹಿರಿತೆರೆಗೆ ಪದಾರ್ಪಣೆ ಮಾಡಿದ್ದಾರೆ. ಜತೆಗೆ ಕೈಲಾಸ್ ಪಾಲ್, ನಿಶಾ ಹೆಗಡೆ, ವೆಂಕಟೇಶ್, ವಿಂಧುಜಾ, ಮಲ್ಲು ಜಮಖಂಡಿ, ಮಮತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಅನಿವಾಸಿ ಭಾರತೀಯ ನಿರಂಜನ್ ಬಾಬು ಈ ಚಿತ್ರ ನಿರ್ವಿುಸಿದ್ದು, ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಯೌವನದಲ್ಲಿದ್ದಾಗ ಬದುಕು ಏನು ಎಂಬುದನ್ನು ಅರಿತುಕೊಳ್ಳುವ ಹೊತ್ತಿಗೆ ಪ್ರೀತಿ ಚಿಗೊರೆಡೆಯುತ್ತದೆ. ಅಲ್ಲಿಂದ ನಮ್ಮ ಪಯಣ ಎತ್ತ ಬೇಕಾದರೂ ಸಾಗಬಹುದು. ಹೀಗೆ ಪ್ರೀತಿಯಲ್ಲಿ ಮೋಸ ಹೋದ ನಾಯಕ, ಜೀವನದಲ್ಲಿ ನಂಬಿಕೆ ಕಳೆದುಕೊಂಡ ನಾಯಕಿ ಇಬ್ಬರೂ ವಿಚಿತ್ರ ಸಂದರ್ಭದಲ್ಲಿ ಭೇಟಿಯಾಗುತ್ತಾರೆ. ನಂತರ ಅವರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದರ ಸುತ್ತ ಚಿತ್ರದ ಕಥೆ ಸುತ್ತುತ್ತದೆ’ ಎಂದು ನಿರ್ದೇಶಕ ಪ್ರವೀಣ್ ಮಾಹಿತಿ ಹಂಚಿಕೊಳ್ಳುತ್ತಾರೆ.
ಚಿಕ್ಕಮಗಳೂರು, ಮಂಗಳೂರು, ಕೇರಳದ ಹಲವೆಡೆ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಏಳು ಹಾಡುಗಳಿದ್ದು ಆಕಾಶ್ ಜಾಧವ್ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ವಿನೋದ್ ಮಂಡ್ಯ ಸಂಗೀತ, ವಿಜಿಯೇಂದ್ರ ಜೋಡಿದಾರ್ ಸಂಭಾಷಣೆ, ರಾಜ್ ಶಿವು ಸಂಕಲನವಿದೆ.