ಇಂದಿನಿಂದ ಧನುರ್ಮಾಸ; ಮಹಾವಿಷ್ಣು ಆರಾಧನೆಯ ಪರ್ವಕಾಲ

754
Published on

ಧನುರ್ಮಾಸದಲ್ಲಿ ಬ್ರಾಹ್ಮಿಮುಹೂರ್ತದಲ್ಲೇ ಎದ್ದು ಸ್ನಾನಾದಿಗಳನ್ನು ಮುಗಿಸಿ, ಇನ್ನೂ ನಕ್ಷತ್ರಗಳು ಇರುವಾಗಲೇ ದೇಗುಲಗಳಲ್ಲಿ ಬೆಳಗಿನ ಪೂಜೆ ಪ್ರಾರಂಭವಾಗಿ, ಸೂರ್ಯೋದಯಕ್ಕಿಂತ ಮೊದಲೇ ಮುಕ್ತಾಯವಾಗುತ್ತದೆ. ಇದನ್ನು ಧನುಪೂಜೆ ಎಂದೂ ಕರೆಯುತ್ತಾರೆ. ಈ ಮಾಸವು ಅಶುಭಕರವೆಂಬ ನಂಬಿಕೆಯಿಂದ ಮದುವೆ, ಗೃಹಪ್ರವೇಶ ಮುಂತಾದ ಕಾರ್ಯಕ್ರಮಗಳನ್ನು ಮಾಡುವುದಿಲ್ಲ. ಬದಲಾಗಿ ಈ ಮಾಸವಿಡೀ ಮಹಾವಿಷ್ಣುವಿನ ಆರಾಧನೆಯಲ್ಲೆ ಕಳೆಯುತ್ತಾರೆ.

ಮಂಡಗದ್ದೆ ಪ್ರಕಾಶಬಾಬು ಕೆ.ಆರ್.

ಸೂರ್ಯನು ವೃಶ್ಚಿಕ ರಾಶಿಯನ್ನು ಬಿಟ್ಟು ಧನಸ್ಸು ರಾಶಿಯನ್ನು ಪ್ರವೇಶ ಮಾಡಿದಾಗ ಆ ಮಾಸವನ್ನು ಧನುರ್ಮಾಸ ಎನ್ನುತ್ತಾರೆ. ಅಂದರೆ ಒಂದು ತಿಂಗಳ ಕಾಲ ಸೂರ್ಯನು ಧನುರ್ ರಾಶಿಯಲ್ಲಿರುವನು. ಈ ಮಾಸವು ಮಹಾವಿಷ್ಣುವಿಗೆ ಬಹಳ ಪ್ರಿಯವಾದದ್ದು. ವೈಷ್ಣವ ಸಂಪ್ರದಾಯದಲ್ಲಿ ಈ ಮಾಸಕ್ಕೆ ಬಹಳ ಪ್ರಾಮುಖ್ಯತೆ ಇದೆ.

ಶಿವ ಅಭಿಷೇಕ ಪ್ರಿಯನಾದರೆ ಮಹಾವಿಷ್ಣು ಅಲಂಕಾರ ಪ್ರಿಯ. ವಿಷ್ಣುವಿಗೆ ಈ ಧನುರ್ಮಾಸದಲ್ಲಿ ಸೂರ್ಯೋದಯಕ್ಕೆ ಮೊದಲೇ ಪ್ರತಿ ದಿನ ಸಹಸ್ರನಾಮಗಳಿಂದ ಅರ್ಚನೆ ಮಾಡಿ ಪೂಜಿಸಬೇಕು. ಈ ಮಾಸದಲ್ಲಿ ಮೊದಲು 15 ದಿನಗಳ ಕಾಲ ಸಕ್ಕರೆ ಅಥವಾ ಬೆಲ್ಲ, ಅಕ್ಕಿ, ಹೆಸರುಬೇಳೆ ಬೆರೆಸಿ ಸಿಹಿ ಪೊಂಗಲ್ ಮಾಡಿ ಮಹಾವಿಷ್ಣುವಿಗೆ ನೈವೇದ್ಯ ಮಾಡಬೇಕು. ಉಳಿದ 15 ದಿನಗಳ ಕಾಲ ಖಾರದ ಪೊಂಗಲ್ ಮಾಡಿ ನೈವೇದ್ಯ ಮಾಡಬೇಕು. ಇದನ್ನು 15 ದಿನ ಅಥವಾ 7 ದಿನಗಳಾದರೂ ಮಾಡಬಹುದು. ವ್ರತ ಮಾಡುವಾಗ ಸಸ್ಯಾಹಾರ ಸೇವಿಸಬೇಕು ಹಾಗೂ ಬ್ರಹ್ಮಚರ್ಯ ಪಾಲಿಸಬೇಕು.

ವೈಜ್ಞಾನಿಕ ದೃಷ್ಟಿಯಿಂದ ನೋಡುವುದಾದರೆ, ಧನುರ್ಮಾಸದಲ್ಲಿ ವಿಪರೀತ ಚಳಿ ಇರುವುದರಿಂದ ನಮ್ಮ ದೇಹವು ಚಳಿಯಿಂದ ಧನುಸ್ಸಿನಂತೆ ಬಾಗುವುದು. ಆದುದರಿಂದ ಬೆಳಗಿನ ಜಾವದಲ್ಲಿ ಎದ್ದು ಧನುರ್ವಸದ ವ್ರತವನ್ನು ಪ್ರತಿ ದಿನ ಮಾಡಿದರೆ ಲವಲವಿಕೆಯಿಂದ ಇರಬಹುದು. ಈ ಮಾಸವನ್ನು ‘ಶೂನ್ಯ ಮಾಸ’ ಎಂದೂ ಕೆಲವರು ಹೇಳುತ್ತಾರೆ. ಈ ಮಾಸದಲ್ಲಿ ಶುಭಕಾರ್ಯಗಳಾದ ಮದುವೆ, ಉಪನಯನ, ಗೃಹಪ್ರವೇಶ ಮುಂತಾದವನ್ನು ಮಾಡುವುದಿಲ್ಲ.

ಈ ಮಾಸದಲ್ಲಿ ತೀರ್ಥಕ್ಷೇತ್ರದಲ್ಲಿ ಸ್ನಾನ ಮಾಡುವುದರಿಂದ, ಅಲ್ಲಿ ಪಿತೃಗಳಿಗೆ ತರ್ಪಣ ಬಿಡುವುದರಿಂದ ಹೆಚ್ಚಿನ ಫಲ ಪಡೆಯಬಹುದು. ತೀರ್ಥಸ್ನಾನಕ್ಕೆ ಹೆಚ್ಚಿನ ಪ್ರಾಮುಖ್ಯ ಕೊಡಲಾಗಿದೆ. ಧನುರ್ಮಾಸದಲ್ಲಿ ಕಾಲಭೈರವಾಷ್ಟಮಿ, ವೈಕುಂಠ ಏಕಾದಶಿ ಮುಂತಾದ ವಿಶೇಷ ದಿನಗಳು ಬರುತ್ತವೆ. ಹಾಗಾಗಿ ಈ ಮಾಸವನ್ನು ಜಯಂತಿಗಳ ಮಾಸ ಎಂದೂ ಕರೆಯುತ್ತಾರೆ.

ಧನುರ್ಮಾಸದ ವ್ರತವನ್ನು ಅಗಸ್ತ್ಯ ಮಹರ್ಷಿ, ವಿಶ್ವಾಮಿತ್ರ, ಗೌತಮ ಮಹರ್ಷಿ, ಭೃಗು ಮಹರ್ಷಿ ಸೇರಿ ಇನ್ನೂ ಅನೇಕ ದೇವಾನುದೇವತೆಗಳು ಮಾಡಿದ್ದಾರೆ. ಅಲ್ಲದೆ, ಸಾಕ್ಷಾತ್ ಪಾರ್ವತಿಯೇ ಈ ವ್ರತವನ್ನು ಮಾಡಿ ಶಿವನನ್ನು ಮತ್ತೆ ಪತಿಯಾಗಿ ಪಡೆದಳು. ಈ ವ್ರತವನ್ನು ಯಾರು ಮಾಡುತ್ತಾರೋ ಅವರಿಗೆ ಇಷ್ಟಾರ್ಥಗಳ ಈಡೇರಿಕೆ ಆಗುವುದು ಮಾತ್ರವಲ್ಲ, ಹೆಚ್ಚಿನ ಫಲ ಕೂಡ ಪಡೆಯಬಹುದು ಎಂಬುದು ಆಸ್ತಿಕರ ದೃಢ ನಂಬಿಕೆ.

ವ್ರತ ಪ್ರಯೋಜನಗಳು

  • ಧನುರ್ಮಾಸದಲ್ಲಿ ಜನಿಸಿದ ವ್ಯಕ್ತಿಗಳ ಜಾತಕದಲ್ಲಿ ರವಿ ಗ್ರಹವು ಧನಸ್ಸು ರಾಶಿಯಲ್ಲಿ ಇರುತ್ತದೆ. ಇಂತಹ ವ್ಯಕ್ತಿಗಳು ಈ ವ್ರತ ಮಾಡಿದರೆ ಆರೋಗ್ಯ ಉತ್ತಮಗೊಳ್ಳುತ್ತದೆ.
  • ಜಾತಕದಲ್ಲಿ ರವಿ ಮತ್ತು ಗುರು ಗ್ರಹವು ಒಂದೇ ರಾಶಿಯಲ್ಲಿದ್ದರೆ ಅಂಥವರು ಈ ಧನುರ್ಮಾಸದ ಪೂಜೆಯನ್ನು ಮಾಡಿದರೆ ಬುದ್ಧಿಶಕ್ತಿ ಹೆಚ್ಚುತ್ತದೆ.
  • ಗರ್ಭಿಣಿಯರು ಈ ವ್ರತ ಮಾಡಿದರೆ ಉತ್ತಮವಾದ ಸಂತಾನ ಪಡೆಯಬಹುದು.
  • ಸಂತಾನಭಾಗ್ಯ ಇಲ್ಲದವರು ಈ ವ್ರತ ಮಾಡಿದರೆ ಸಂತಾನ ಪಡೆಯಬಹುದು.
  • ವಿವಾಹ ಆಗದೆ ಇರುವವರು ಈ ವ್ರತ ಮಾಡಿದರೆ ಶೀಘ್ರ ವಿವಾಹ ಆಗುತ್ತದೆ.
  • ವಿದ್ಯಾರ್ಥಿಗಳು ಈ ವ್ರತವನ್ನು ಮಾಡಿದರೆ ಒಳ್ಳೆಯ ವಿದ್ಯೆ ಪಡೆಯಬಹುದು.

ಧನುರ್ಮಾಸ ವ್ರತ ಪ್ರಾರಂಭ ಆದದ್ದು ಹೇಗೆ?

ಒಮ್ಮೆ ಬ್ರಹ್ಮ ದೇವ ಹಂಸ ಪಕ್ಷಿಯ ಅವತಾರ ತಳೆದು ಲೋಕ ಸಂಚಾರ ಮಾಡುತ್ತಿದ್ದ. ಆ ಸಮಯದಲ್ಲಿ ಸೂರ್ಯದೇವ ಹೆಚ್ಚಿನ ಬೆಳಕು ಮತ್ತು ಶಾಖವನ್ನು ಬ್ರಹ್ಮನ (ಹಂಸದ) ಮೇಲೆ ಪ್ರಯೋಗಿಸಿದ. ಇದರಿಂದ ಕೋಪಗೊಂಡ ಬ್ರಹ್ಮದೇವ ‘ನಿನ್ನ ತೇಜೋಬಲ ಕ್ಷೀಣಿಸಲಿ’ ಎಂದು ಸೂರ್ಯನಿಗೆ ಶಾಪ ಕೊಟ್ಟ. ತಕ್ಷಣ ಸೂರ್ಯ ಕಾಂತಿಹೀನನಾಗಿ ತನ್ನ ಪ್ರಕಾಶವನ್ನು ಕಳೆದುಕೊಂಡ. ಇದರಿಂದ ಭೂಲೋಕದಲ್ಲಿ ಅಲ್ಲೋಲಕಲ್ಲೋಲವಾಯಿತು. ಸೂರ್ಯನಿಲ್ಲದೆ ಜಪ, ತಪ, ಹೋಮ, ಹವನಗಳು ನಿಂತು ಹೋದವು. ದೇವತೆಗಳು ಮತ್ತು ಋಷಿಗಳ ನಿತ್ಯ ಕಾರ್ಯಗಳಿಗೆ ತೊಂದರೆ ಆಯಿತು. ಹಲವು ವರ್ಷಗಳ ಕಾಲ ದೇವತೆಗಳು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದರು. ಬ್ರಹ್ಮ ಪ್ರತ್ಯಕ್ಷನಾದ. ‘ಸೂರ್ಯನಿಗೆ ಕೊಟ್ಟ ಶಾಪ ವಿಮೋಚನೆ ಮಾಡು’ ಎಂದು ದೇವತೆಗಳು ಕೇಳಿದರು. ‘ಧನುರ್ಮಾಸದಲ್ಲಿ ಮೊದಲ ಜಾವದಲ್ಲಿ ಭಗವಾನ್ ಮಹಾವಿಷ್ಣುವನ್ನು ಪೂಜೆ ಮಾಡಿದರೆ ಶಾಪ ವಿಮೋಚನೆ ಆಗುತ್ತದೆ’ ಎಂದು ಅಭಯ ನೀಡಿದ. ಅದರಂತೆ ಸೂರ್ಯ 16 ವರ್ಷಗಳ ಕಾಲ ಮಹಾವಿಷ್ಣುವಿನ ಪೂಜೆ ಮಾಡಿ ತನ್ನ ತೇಜಸ್ಸು ಮತ್ತು ಶಕ್ತಿಯನ್ನು ಮರಳಿ ಪಡೆದು ಕೊಂಡ. ಸೂರ್ಯದೇವನಿಂದಲೇ ಆರಂಭವಾದ ಈ ಪೂಜೆ ನಂತರ ಲೋಕದಲ್ಲೆಲ್ಲಾ ಪ್ರಚಾರವಾಯಿತು.

(ಲೇಖಕರು ಆಧ್ಯಾತ್ಮಿಕ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net