ರಿವೀಲ್ ಆಯ್ತು ಜೂ. ಎನ್​ಟಿಆರ್​ 'ದೇವರ' ರನ್​ ಟೈಮ್​!

ವಿಜಯವಾಣಿ - 2024-09-12T143026.311
Published on

ಆಂಧ್ರಪ್ರದೇಶ: ತೆಲುಗು ನಟ ಜೂ. ಎನ್​ಟಿಆರ್​ ಮತ್ತು ಕೊರಟಾಲ ಶಿವ ನಿರ್ದೇಶನದ ಪ್ಯಾನ್ ಇಂಡಿಯಾ 'ದೇವರ' ಸಿನಿಮಾ ಇದೇ ಸೆಪ್ಟೆಂಬರ್ 27ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಿದ್ಧವಾಗಿದೆ. ಹೈ-ಬಜೆಟ್ ಸಿನಿಮಾ ಇದಾಗಿದ್ದು, ಭರ್ಜರಿ ಓಪನಿಂಗ್​ನತ್ತ ಚಿತ್ರತಂಡ ಎದುರುನೋಡುತ್ತಿದೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ಚಿತ್ರದ ಅಧಿಕೃತ ಟ್ರೇಲರ್​ ರಿಲೀಸ್ ಆಗಿದ್ದು, ಚಿತ್ರರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ದೇವರ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದ್ದು, ಚಿತ್ರದ ಒಟ್ಟು ರನ್​ಟೈಮ್ ಎಷ್ಟು ಎಂಬುದು ಇದೀಗ ಅನಾವರಣಗೊಂಡಿದೆ.

ಚಿತ್ರವು ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಪಡೆದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿತ್ರಕ್ಕೆ ಉತ್ತಮ ಬೇಡಿಕೆ ಹೆಚ್ಚಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯದಲ್ಲಿ ಸಖತ್ ಬ್ಯುಸಿಯಾಗಿರುವ ಜೂ. ಎನ್​ಟಿಆರ್​ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಸ್ವೀಕರಿಸುತ್ತಿದ್ದಾರೆ. ಇದು 'ದೇವರ' ಗೆಲುವಿಗೆ ಪ್ರಮುಖ ಕಾರಣವಾಗಬಹುದು ಎಂಬ ನಿರೀಕ್ಷೆಯನ್ನು ಮೂಡಿಸಿದೆ. ಇನ್ನು ದೇವರ ರನ್‌ಟೈಮ್ ಪ್ರಕಟವಾಗಿದ್ದು, ಚಿತ್ರದ ಒಟ್ಟು ವೀಕ್ಷಣೆ ಸಮಯ 178 ನಿಮಿಷಗಳಾಗಿವೆ. ಅಂದರೆ 2 ಗಂಟೆ 58 ನಿಮಿಷಗಳು.

ಚಿತ್ರಕ್ಕೆ ಹೆಚ್ಚಿನ ರನ್​ ಟೈಮ್​ ಕೊಟ್ಟಿರುವುದು ಕೆಲವರಿಗೆ ಬೇಸರ ಉಂಟುಮಾಡಿದ್ದು, ಚಿತ್ರಮಂದಿರದಲ್ಲಿ 3 ಗಂಟೆಗಳ ಕಾಲ ಕುಳಿತು ಸಿನಿಮಾ ನೋಡುವುದೇ ದೊಡ್ಡ ಸವಾಲಾಗಿದೆ. ಚಿತ್ರಮಂದಿರಗಳಲ್ಲಿ ದೇವರ ಹೇಗೆ ಮೋಡಿ ಮಾಡಲಿದೆ? ಸಿನಿಪ್ರೇಕ್ಷಕರಿಗೆ ಮನರಂಜನೆ ಉಣಬಡಿಸಲಿದೆಯಾ? ಎಂಬುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಚಿತ್ರದಲ್ಲಿ ಜೂ. ಎನ್​ಟಿಆರ್​, ಜಾನವಿ ಕಪೂರ್​, ಚೈತ್ರಾ ರೈ, ಸೈಫ್​ ಅಲಿ ಖಾನ್​, ಶೃತಿ ಮರಾಠೆ, ಮುರುಳಿ ಶರ್ಮಾ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net