

ಬೆಂಗಳೂರು: ಹಿರಿಯರ ಮನೆ ಎನಿಸಿಕೊಂಡ ವಿಧಾನಪರಿಷತ್ನ ಶೇ.33 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ರಾಜಕೀಯ ಪಕ್ಷಗಳ ಮಹಾ ಕಾದಾಟಕ್ಕೆ ಸಾಕ್ಷಿಯಾಗುವ ಎಲ್ಲ ಲಕ್ಷಣ ಗೋಚರಿಸುತ್ತಿದೆ. ಚುನಾವಣೆ ಪ್ರಕ್ರಿಯೆಯ ಒಂದು ಹಂತ ಮುಗಿದಿದ್ದು, ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಈಗ ತಮ್ಮ ವ್ಯಾಪ್ತಿಯ ನಿರ್ದಿಷ್ಟ ಮತದಾರರನ್ನು ಓಲೈಸಿಕೊಳ್ಳುವ ಕಸರತ್ತಿಗೆ ಕೈಹಾಕಿದ್ದಾರೆ. ಈ ಚುನಾವಣೆ ಜಾತಿ ಲೆಕ್ಕಾಚಾರ, ಪ್ರಭಾವ, ಹಿರಿತನಕ್ಕಿಂತ ಮುಖ್ಯವಾಗಿ ಹಣಬಲದ ಮೇಲೆ ನಡೆಯುತ್ತಿರುವುದೆಂಬುದು ಸರ್ವವಿಧಿತ. ಈ ನಡುವೆಯೂ ಪ್ರಭಾವಿ ಎನಿಸಿಕೊಂಡು ಪ್ರಮುಖ ನಾಯಕರು ಕಣಕ್ಕೆ ಧುಮುಕಿದ್ದು, ಜಿಲ್ಲಾವಾರು ಪ್ರಚಾರದಲ್ಲಿ ತೊಡಗಿದ್ದಾರೆ. ಡಿ.10ರಂದು ಮತದಾನ ನಡೆಯುತ್ತಿದ್ದು, ಇನ್ನುಳಿದ 16 ದಿನಗಳಲ್ಲಿ ಮತದಾರರೆನಿಸಿಕೊಂಡ ಜನಪ್ರತಿನಿಧಿಗಳನ್ನು ಸೆಳೆಯಲು ಮೂರೂ ಪಕ್ಷಗಳಲ್ಲಿ ರೂಪುರೇಷೆ ಸಿದ್ಧವಾಗಿದೆ.
ಮಾಜಿ ಸಿಎಂಗಳ ಮೇಲುಗೈ: ಇನ್ನೊಂದು ಪ್ರಮುಖ ಸಂಗತಿಯೆಂದರೆ, ಮಾಜಿ ಮುಖ್ಯಮಂತ್ರಿಗಳಿಬ್ಬರು ತಮ್ಮವರನ್ನು ಗೆಲ್ಲಿಸಿಕೊಳ್ಳಲು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯ ತಿರುಗುತ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ ತಮ್ಮ ಆಪ್ತರೆನಿಸಿಕೊಂಡ ಏಳು ಮಂದಿಗೆ ಟಿಕೆಟ್ ಕೊಡಿಸಿದ್ದಾರೆ. ಅವರನ್ನು ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆ ಇದೆ. ಆದೇ ರೀತಿ ಕಾಂಗ್ರೆಸ್ ಪಾಳಯದಲ್ಲೂ ಇದೇ ಪರಿಸ್ಥಿತಿ ಇದ್ದು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಎಂಟು ಬೆಂಬಲಿಗರಿಗೆ ಟಿಕೆಟ್ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಟಿಕೆಟ್ ಕೊಡಿಸಿದ್ದಷ್ಟೇ ಅಲ್ಲದೆ, ಅವರನ್ನು ಗೆಲ್ಲಿಸಿಕೊಂಡು ಬರುವ ಮೂಲಕ ಪಕ್ಷದ ಹೈಕಮಾಂಡ್ ಮುಂದೆ ಈಗಲೂ ತಾವೆಷ್ಟು ಪರಿಣಾಮಕಾರಿ ಎಂದು ತೋರಿಸುವ ಅನಿವಾರ್ಯತೆ ಇದೆ. ಇದೇ ರೀತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಜಗದೀಶ ಶೆಟ್ಟರ್ ಸೇರಿ ಇನ್ನೂ 3-4 ಮಂದಿ ತಮ್ಮವರಿಗಾಗಿ ಟಿಕೆಟ್ ತಂದಿದ್ದು, ಮರ್ಯಾದೆ ಉಳಿಸಿಕೊಳ್ಳಲು ಅವರನ್ನು ಗೆಲ್ಲಿಸಿಕೊಂಡುವ ಬರುವ ಹೊಣೆಗಾರಿಕೆ ಅವರ ಹೆಗಲೇರಿದೆ. ಪರಿಷತ್ ಚುನಾವಣೆ ಮತದಾರರು ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳು ಎಂದು ಸ್ಪಷ್ಟ ಅರಿವಿದ್ದರೂ, ಬಿಎಸ್ವೈ ಆಗಲಿ ಸಿದ್ದರಾಮಯ್ಯ ಅವರಾಗಲಿ ಅತಿ ಹೆಚ್ಚಿನ ಗಮನ ಕೊಟ್ಟಿರುವುದು ಕಂಡುಬರುತ್ತಿದೆ. ರಾಜಕೀಯ ಅನುಭವದಲ್ಲಿ ಕಲಿತ ಪಟ್ಟುಗಳನ್ನು ಇಲ್ಲಿ ಪ್ರಯೋಗಿಸಲು ಆರಂಭಿಸಿರುವುದು ವಿಶೇಷ.
ಜಾತಿಯಾಧಾರಿತ ಹಂಚಿಕೆ: ಕಾಂಗ್ರೆಸ್ನಲ್ಲಿ ಕುಟುಂಬದವರಿಗೆ ಹೆಚ್ಚು ಮಣೆ ಹಾಕಿದ್ದು ಮತ್ತು ಜಾತಿ ಆಧಾರಿತವಾಗಿ ಟಿಕೆಟ್ ಹಂಚಿಕೆಗೆ ಒತ್ತು ಕೊಟ್ಟಿರು ವಂತೆ ಬಿಜೆಪಿಯಲ್ಲೂ ಒಂದಷ್ಟು ಸರ್ಕಸ್ ಮಾಡಿರುವುದು ಕಂಡುಬಂದಿದೆ. 8 ಮಂದಿ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡಿ ಪ್ರಾಧಾನ್ಯತೆ ನೀಡಿದೆ.ಹಾಗೆಯೇ ನಾಲ್ವರು ಒಕ್ಕಲಿಗ, ಮೂವರು ಒಬಿಸಿ ವರ್ಗಕ್ಕೆ ಸೇರಿದವರಿಗೆ ಟಿಕೆಟ್ ನೀಡುವ ಮೂಲಕ ಸಮೀಕರಣ ಮಾಡಲಾಗಿದೆ.
ಲೆಕ್ಕಾಚಾರ ಶುರು: ಬಿಜೆಪಿಯವರು ಜಿಲ್ಲಾವಾರು ಎಷ್ಟು ಮತ ಹೊಂದಿದ್ದಾರೆಂದು ಕಾಂಗ್ರೆಸ್ ದುರ್ಬಿನ್ ಹಾಕಿ ಹುಡುಕುತ್ತಿದೆ. ಅದೇ ರೀತಿ ಗ್ರಾಪಂ ಚುನಾವಣೆಯಲ್ಲಿ ತಮ್ಮ ಪರವಾದವರೆಷ್ಟು, ಅವರನ್ನು ಹೇಗೆ ಹಿಡಿದಿಟ್ಟುಕೊಳ್ಳುವುದು ಎಂಬ ತಂತ್ರಗಾರಿಕೆಯಲ್ಲಿ ಬಿಜೆಪಿ ಇದೆ. ಬಿಜೆಪಿ ಲೆಕ್ಕಾಚಾರದ ಪ್ರಕಾರ, ತನ್ನ ಪರವಾಗಿ 36 ಸಾವಿರದಷ್ಟು ಸದಸ್ಯರಿದ್ದರೆ, ಕಾಂಗ್ರೆಸ್ ಪರ 32 ಸಾವಿರ ಇರಬಹುದು. ಹತ್ತು ಸಾವಿರ ಜೆಡಿಎಸ್ ಬೆಂಬಲಿತರಿರಬಹುದು. ಈ ಲೆಕ್ಕದಲ್ಲಿ ನಿರ್ದಿಷ್ಟವಾಗಿ ಬಿಜೆಪಿಯವರೇ ಇಂತಿಷ್ಟು ಎಂದು ಲೆಕ್ಕ ಹಾಕುವುದು ಕಷ್ಟ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಛಾವಡಿಯಲ್ಲಿನ ಚರ್ಚೆ ಪ್ರಕಾರ, 12ರಿಂದ 14 ಸ್ಥಾನ ಗೆಲ್ಲಬಹುದು. ಅದಕ್ಕಿಂತ ಹೆಚ್ಚಿನ ಪ್ರಯತ್ನ ಇರಲಿದೆಯಾದರೂ ಕನಿಷ್ಠ 12 ಸ್ಥಾನವಂತೂ ಗೆದ್ದೇ ಗೆಲ್ಲಬಹುದೆಂದು ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ನ 25 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಮಂಗಳವಾರ ಕೊನೆಗೊಂಡಿದ್ದು, 215 ನಾಮಪತ್ರ ಸಲ್ಲಿಕೆಯಾಗಿವೆ. 119 ಪುರುಷ, 2 ಮಹಿಳೆಯರು ಸೇರಿ ಒಟ್ಟು 121 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಬಿಜೆಪಿಯಿಂದ 57, ಕಾಂಗ್ರೆಸ್ನಿಂದ 56, ಜೆಡಿಎಸ್ನಿಂದ 17, ಇತರ ಪಕ್ಷಗಳಿಂದ 17, ಪಕ್ಷೇತರರು 68 ಮಂದಿ ನಾಮಪತ್ರ ಹಾಕಿದ್ದಾರೆ. ಧಾರವಾಡದಲ್ಲಿ ಗರಿಷ್ಠ 24, ಕೊಡಗಿನಲ್ಲಿ ಕನಿಷ್ಠ 5 ನಾಮಪತ್ರ ಸಲ್ಲಿಕೆಯಾಗಿವೆ. ನ.24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ನ.26ರ ಕೊನೆಯ ದಿನ. ಡಿ.10ರಂದು ಮತದಾನ ನಡೆಯಲಿದ್ದು, ಡಿ.14ರಂದು ಮತ ಎಣಿಕೆ ನಡೆಯಲಿದೆ.
ವಿಧಾನಪರಿಷತ್ ಚುನಾವಣೆ ಸಾಮಾನ್ಯರಿಗೆ ಎಟುಕುವುದಿಲ್ಲ. ಕೋಟಿ ಕೋಟಿ ಖರ್ಚು ಮಾಡುವುದು ಸುಳ್ಳೇನಲ್ಲ. ವೆಚ್ಚದ ಭಯದಿಂದಲೇ ಅನೇಕರು ಚುನಾವಣಾ ಕಣದಿಂದ ದೂರ ಉಳಿದಿರುವುದು ಗುಟ್ಟಾಗೇನೂ ಉಳಿದಿಲ್ಲ. ಆದರೆ, ಚುನಾವಣಾ ಆಯೋಗ ಈ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗೆ ವೆಚ್ಚದ ಮಿತಿಯನ್ನೇ ಹಾಕಿಲ್ಲ! ವೆಚ್ಚದ ಮಿತಿ ಇಲ್ಲದೆ ಇರುವುದರಿಂದ ಬೇಕಾಬಿಟ್ಟಿ ಹಣ ಚಲಾವಣೆ ನಡೆಯುತ್ತದೆ. ಒಂದು ಮೂಲದ ಪ್ರಕಾರ, ಒಬ್ಬ ಅಭ್ಯರ್ಥಿ 10ರಿಂದ 15 ಕೋಟಿ ರೂ. ವೆಚ್ಚ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ!
ಎಂಪಿ, ಎಂಎಲ್ಎಗೆ ಉಂಟು: ಲೋಕಸಭೆ ಚುನಾವಣೆ ವೆಚ್ಚಕ್ಕೆ 77.8 ಲಕ್ಷ ರೂ. ಮತ್ತು ವಿಧಾನಸಭೆ ಚುನಾವಣೆಗೆ ಪ್ರತಿ ಅಭ್ಯರ್ಥಿಗೆ 30.8 ಲಕ್ಷ ರೂ. ಮಿತಿ ನಿಗದಿಪಡಿಸಲಾಗಿದೆ. ತಾಲೂಕು ಪಂಚಾಯತ್ ಚುನಾವಣೆಗೆ 50 ಸಾವಿರ ರೂ. ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಿಗೆ 1 ಲಕ್ಷ ರೂ. ಮಿತಿ ಇದೆ. ಗ್ರಾಮ ಪಂಚಾಯತ್ ಚುನಾವಣೆಗೆ ಯಾವುದೇ ಮಿತಿಯಿಲ್ಲ. ಅದೇ ರೀತಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೂ ಚುನಾವಣಾ ಆಯೋಗ ವೆಚ್ಚಕ್ಕೆ ಮಿತಿ ಹಾಕಿಲ್ಲ. ಇದು ಸಾರ್ವಜನಿಕ ಮತ್ತು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಹಾಸನ ಕ್ಷೇತ್ರದಿಂದ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ವಿರುದ್ಧ ಎಚ್.ಡಿ.ರೇವಣ್ಣ ಕಣಕ್ಕಿಳಿದಿದ್ದಾರೆ! ಮಗನ ವಿರುದ್ಧವೇ ತಂದೆಯ ಸ್ಪರ್ಧೆಯೇ ಎಂದು ಹುಬ್ಬೇರಿಸಬೇಡಿ. ಈ ಎಚ್.ಡಿ.ರೇವಣ್ಣ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ರ ಅಲ್ಲ. ಬದಲಿಗೆ ಗೌಡರ ಕುಟುಂಬದ ಸದಸ್ಯರ ವಿರುದ್ಧ ಚುನಾವಣೆಗಳಲ್ಲಿ ಸ್ಪರ್ಧಿಸುವ ಖಯಾಲಿ ಬೆಳೆಸಿಕೊಂಡಿರುವ ಕೃಷಿಕ. ಚನ್ನರಾಯಪಟ್ಟಣ ತಾಲೂಕು ಕೋಡಿಹಳ್ಳಿ ಗ್ರಾಮದ ನಿವಾಸಿಯಾಗಿರುವ ಇವರು, ಹೊಳೆನರಸೀಪುರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಇವರ ಹೆಸರಿದೆ ಎಂದು ಅವರೇ ಪ್ರಮಾಣಪತ್ರದಲ್ಲಿ ನಮೂದಿಸಿದ್ದಾರೆ. ಈ ಹಿಂದೆ ಎಚ್.ಡಿ. ದೇವೇಗೌಡ, ಎಚ್.ಡಿ.ರೇವಣ್ಣ, ಪ್ರಜ್ವಲ್ ವಿರುದ್ಧ ವಿವಿಧ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು. ಪ್ರತಿ ಬಾರಿಯೂ ಠೇವಣಿ ಕಳೆದುಕೊಳ್ಳುತ್ತಿದ್ದಾರೆ.
ಜೆಡಿಎಸ್ನಿಂದ 7 ಅಭ್ಯರ್ಥಿಗಳು ಕಣಕ್ಕೆ: ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಯ 25 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಕೇವಲ ಏಳು ಅಭ್ಯರ್ಥಿಗಳನ್ನು ಜೆಡಿಎಸ್ ಕಣಕ್ಕಿಳಿಸಿದೆ. ಮೈಸೂರು ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲಿ ಗೊಂದಲ, ಪೈಪೋಟಿ ಕಾರಣ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಮಂಗಳವಾರ ಬೆಳಗಿನ ಜಾವ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗಿದೆ.
ಮಡಿಕೇರಿ: ಜೆಡಿಎಸ್ ಅಭ್ಯರ್ಥಿ ಎಚ್.ಯು.ಇಸಾಕ್ಖಾನ್ ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಪ್ರಮಾಣಪತ್ರದ ಬದಲಿಗೆ ಡಾ.ಮಂಥರ್ಗೌಡ ಅವರ ಪ್ರಮಾಣಪತ್ರ ಸಲ್ಲಿಸಿ ಎಡವಟ್ಟು ಮಾಡಿಕೊಂಡರು. ನೀವು ಯಾರ ನಾಮಪತ್ರ ಸಲ್ಲಿಸುತ್ತಿದ್ದೀರಾ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ್ ಪ್ರಶ್ನಿಸಿದಾಗ ಆಗಿರುವ ತಪ್ಪಿನ ಅರಿವು ಎಲ್ಲರ ಗಮನಕ್ಕೆ ಬಂತು. ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಯ ನಾಮಪತ್ರವನ್ನು ಒಬ್ಬರೇ ಸಿದ್ಧಪಡಿಸಿದ್ದರಿಂದ ಈ ಗೊಂದಲಕ್ಕೆ ಕಾರಣವಾಯಿತು. ತಕ್ಷಣ ಹೊಸ ಪ್ರಮಾಣಪತ್ರ ತಂದು ಸಲ್ಲಿಸಲಾಯಿತು. ಇಂಗ್ಲಿಷ್ನಲ್ಲಿ ಪ್ರಮಾಣ ವಚನ ಸ್ವೀಕರಿಸಲು ಇಸಾಕ್ಖಾನ್ ಕಷ್ಟಪಡುವಂತಾಯಿತು. ತದನಂತರ ಪ್ರಮಾಣ ವಚನವನ್ನು ಡಿಸಿ ಹೇಳಿದಂತೆ ಇಸಾಕ್ ಹೇಳಿದರು.
ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಒಲ್ಲೆಯೆಂದು ವಿಧಾನಸಭೆ ಚುನಾವಣೆ ಸ್ಪರ್ಧೆ ಮೇಲೆ ಕಣ್ಣಿಟ್ಟಿರುವವರ ವಿಷಯದಲ್ಲಿ ಕಾಂಗ್ರೆಸ್ನಲ್ಲಿ ಈಗ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಪರಿಷತ್ನ 25 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ನ ಆರು ಹಾಲಿ ಸದಸ್ಯರು ಕಣದಿಂದ ಹಿಂದೆ ಸರಿದಿದ್ದಾರೆ. ಇವರಲ್ಲಿ ನಾಲ್ವರು ವಿಧಾನಸಭೆ ಟಿಕೆಟ್ ಬಯಸಿದ್ದಾರೆ. ಈ ಹಿನ್ನೆಲೆಯಲ್ಲಿ ಚರ್ಚೆ ತೀವ್ರಗೊಂಡಿದೆ. ಪರಿಷತ್ ಟಿಕೆಟ್ ತ್ಯಾಗ ಮಾಡಿದ್ದೇವೆಂಬುದು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಎಂದುಕೊಳ್ಳುವಂತಿಲ್ಲ ಎಂಬ ಸಂದೇಶ ಹೈಕಮಾಂಡ್ನಿಂದ ಬಂದಿದೆ ಎಂಬ ಮಾಹಿತಿ ಇದೆ. ಪರಿಷತ್ ಪ್ರವೇಶದ ಅವಕಾಶ ತಪ್ಪಿಸಿಕೊಂಡು ವಿಧಾನಸಭೆ ಕ್ಷೇತ್ರದಲ್ಲಿ ಚಟುವಟಿಕೆ ಚುರುಕುಗೊಳಿಸಿದರೆ ಇತರ ಆಕಾಂಕ್ಷಿಗಳ ನಡುವೆ ಪೈಪೋಟಿ ಉಂಟಾಗಿ ಗೊಂದಲ ಆಗಬಹುದು ಎಂಬುದು ದೆಹಲಿ ನಾಯಕರ ಎಚ್ಚರಿಕೆಯಾಗಿದೆ ಎಂದು ತಿಳಿದುಬಂದಿದೆ. ಪ್ರಭಾವಿ ಪರಿಷತ್ ಸದಸ್ಯರಿಗೆ ಈ ಬಾರಿ ಟಿಕೆಟ್ ನೀಡಿಲ್ಲ. ವಿಧಾನಸಭೆ ದೃಷ್ಟಿಯಿಂದ ಅವರನ್ನು ಬಳಸಿಕೊಳ್ಳುತ್ತೇವೆ, ವಿಧಾನಸಭೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕಿದೆ. ಹಾಗಾಗಿ ಪರ್ಯಾಯ ಅಭ್ಯರ್ಥಿಗಳಗೆ ಈಗ ಟಿಕೆಟ್ ನೀಡಿದ್ದೇವೆ. ಪ್ರಭಾವ ಇರುವ ನಾಯಕರಿಗೆ ಮುಂದೆ ವಿಧಾನಸಭೆ ಟಿಕೆಟ್ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಬೆಂ. ನಗರ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕೆಲವು ಕಾರ್ಯ ಕರ್ತರು ನಾಮಪತ್ರ ಸಲ್ಲಿಸಿದ್ದಾರೆ. ಕಾನೂನು ಸಲಹೆ ಪಡೆದು ಅದನ್ನು ತೆಗೆಸುತ್ತೇವೆ ಎಂದರು.
ನಾವು ಒಬ್ಬ ಅಭ್ಯರ್ಥಿಯನ್ನು ಬೆಳಗಾವಿಯಲ್ಲಿ ಹಾಕಿದ್ದೇವೆ, ಬಿಜೆಪಿಯವರು ಎಷ್ಟೇ ಅಭ್ಯರ್ಥಿ ಬೇಕಾದರೂ ಹಾಕಲಿ. ಅದಕ್ಕೂ ನಮಗೂ ಸಂಬಂಧವಿಲ್ಲ. ವಿವೇಕ್ ರಾವ್ ಪಾಟೀಲ್ ಕಾಂಗ್ರೆಸ್ನಲ್ಲಿ ಇರಲಿಲ್ಲ. ಕಾಂಗ್ರೆಸ್ನಲ್ಲಿ ಅರ್ಜಿ ಹಾಕಿದ್ದರು. ನಮ್ಮ ಪಕ್ಷದಿಂದ ಒಬ್ಬ ಅಭ್ಯರ್ಥಿ ಮಾತ್ರ ಇರುತ್ತಾರೆ.| ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ಬೆಳಗಾವಿ: ನಾಮಪತ್ರ ಸಲ್ಲಿಸಲು ಆಗಮಿಸಿದ್ದ ಕಾಂಗ್ರೆಸ್ನ ಚನ್ನರಾಜನ ಹಟ್ಟಿಹೊಳಿ, ಬಿಜೆಪಿಯ ಮಹಾಂತೇಶ ಕವಟಗಿಮಠ ಅವರಿಗೆ ಬೆಂಬಲ ನೀಡಲು ಜಿಲ್ಲೆಯ ವಿವಿಧ ಭಾಗಗಳಿಂದ ಸ್ಥಳೀಯ ಸಂಸ್ಥೆಗಳ ಸದಸ್ಯರು, ಬೆಂಬಲಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಇದೇ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಬಂದ ಲಖನ್ ಜಾರಕಿಹೊಳಿ ಅವರನ್ನು ಬಿಜೆಪಿ, ಕಾಂಗ್ರೆಸ್ ಬೆಂಬಲಿಗರು ಜೈಕಾರ ಹಾಕಿ ಬೆಂಬಲಿಸಿದರು. ಇದರಿಂದ ಸ್ಥಳದಲ್ಲಿದ್ದ ಕಾಂಗ್ರೆಸ್, ಬಿಜೆಪಿ ಮುಖಂಡರು ಮುಜುಗರ ಎದುರಿಸಬೇಕಾಯಿತು.
ಮಂಜು ಮೇಲೆ ಬಿಜೆಪಿಗೆ ಅನುಮಾನ: ಮಾಜಿ ಸಚಿವ ಎ. ಮಂಜು ಅವರನ್ನು ಮಂಡ್ಯ ಜಿಲ್ಲೆಯ ಪ್ರಭಾರಿ ಹುದ್ದೆ ಸೇರಿ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಬಿಜೆಪಿ ಶಿಸ್ತು ಸಮಿತಿ ಆದೇಶ ಹೊರಡಿಸಿದೆ. ಇತ್ತೀಚಿನ ಬೆಳವಣಿಗೆಗಳು ಸಂಶಯಕ್ಕೆ ಕಾರಣವಾಗಿರುವುದರಿಂದ ಜವಾಬ್ದಾರಿಗಳಿಂದ ಮುಕ್ತಗೊಳಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ. ಮಂಜು ಪುತ್ರ ಮಂಥರ್ ಗೌಡ ಕೊಡಗು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಮಂಜು ಸಹ ಇತ್ತೀಚಿಗೆ ಸಿದ್ದರಾಮಯ್ಯ ಭೇಟಿಯಾಗಿ ರ್ಚಚಿಸಿದ್ದರು. ಇದು ವಾಪಸ್ ಕಾಂಗ್ರೆಸ್ಗೆ ಬರಲಿದ್ದಾರೆ ಎಂಬ ವದಂತಿಗಳಿಗೆ ಕಾರಣವಾಗಿತ್ತು.
ಒಳರಾಜಕಾರಣ ಮಾಡುವ ವ್ಯಕ್ತಿ ನಾನಲ್ಲ. ನನ್ನ ಮಗ ಎಂದಮಾತ್ರಕ್ಕೆ ಮಂಥರ್ ಪರ ಪ್ರಚಾರಕ್ಕೆ ಹೋಗಲು ಸಾಧ್ಯವಿಲ್ಲ. ವಿಶ್ವಾಸಕ್ಕೆ ಎಲ್ಲ ಪಕ್ಷದವರೊಂದಿಗೆ ಮಾತನಾಡಿದ್ದೇನೆ ಅಷ್ಟೇ. ಆದರೆ, ನನಗೆ ನನ್ನ ಪಕ್ಷ ಮುಖ್ಯ.| ಎ.ಮಂಜು ಮಾಜಿ ಸಚಿವ