ಹಿಂದುಗಳೇ ಹಿಂತಿರುಗಿ... ಅಮೆರಿಕದ ಹಿಂದು ದೇವಾಲಯದಲ್ಲಿ ಭಾರತ ವಿರೋಧಿ ಬರಹಕ್ಕೆ ತೀವ್ರ ಖಂಡನೆ! Hindu temple

Hindu temple
Published on

Hindu temple : ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಚಿನೋ ಹಿಲ್‌ನಲ್ಲಿರುವ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರವನ್ನು ಭಾರತ ವಿರೋಧಿ ಬರಹ ಗೀಚುವ ಮೂಲಕ ವಿರೂಪಗೊಳಿಸಲಾಗಿದೆ. ಐದು ತಿಂಗಳೊಳಗೆ ಅಮೆರಿಕದಲ್ಲಿ ಹಿಂದು ದೇವಾಲಯವನ್ನು ವಿರೂಪಗೊಳಿಸಿದ ಎರಡನೇ ಘಟನೆ ಇದಾಗಿದೆ.

ಹಿಂದು ದೇವಾಲಯ ವಿರೂಪಗೊಳಿಸಿರುವ ಕ್ರಮವನ್ನು ಭಾರತದ ವಿದೇಶಾಂಗ ಸಚಿವಾಲಯ ಖಂಡಿಸಿದ್ದು, ಇದೊಂದು ನೀಚ ಕೃತ್ಯ ಎಂದು ಜರಿದಿದೆ. ಅಲ್ಲದೆ, ಈ ದುಷ್ಕೃತ್ಯದ ಹಿಂದಿರುವ ಕಿಡಿಗೇಡಿಗಳ ವಿರುದ್ಧ ಸ್ಥಳೀಯ ಆಡಳಿತ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ದೇವಾಲಯಕ್ಕೆ ಭದ್ರತೆ ನೀಡಬೇಕೆಂದು ಅಧಿಕೃತ ಹೇಳಿಕೆಯಲ್ಲಿ ಆಗ್ರಹಿಸಿದೆ.

ಶನಿವಾರ (ಮಾರ್ಚ್​ 08) ರಾತ್ರಿ ಈ ಘಟನೆ ನಡೆದಿರುವುದನ್ನು ಅಮೆರಿಕದಲ್ಲಿರುವ ಬಿಎಪಿಎಸ್ ದೃಢಪಡಿಸಿದ್ದು, ಹಿಂದೂ ಸಮುದಾಯವು ದ್ವೇಷದ ವಿರುದ್ಧ ದೃಢವಾಗಿ ನಿಂತಿದೆ ಎಂದು ಹೇಳಿದೆ. ಚಿನೋ ಹಿಲ್ಸ್ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದ ಸಮುದಾಯದೊಂದಿಗೆ, ನಾವು ಎಂದಿಗೂ ದ್ವೇಷ ಬೇರೂರಲು ಬಿಡುವುದಿಲ್ಲ. ನಮ್ಮಲ್ಲಿನ ಮಾನವೀಯತೆ ಮತ್ತು ನಂಬಿಕೆಯು ಶಾಂತಿ ಮತ್ತು ಸಹಾನುಭೂತಿ ಮೇಲುಗೈ ಸಾಧಿಸುವುದನ್ನು ಖಚಿತಪಡಿಸುತ್ತದೆ ಎಂದು ಬಿಎಪಿಎಸ್​ ಹೇಳಿದೆ.

Hindu temple 2

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ದೇವಾಲಯದ ಗೋಡೆಗಳ ಮೇಲೆ "ಹಿಂದೂಗಳೇ ಹಿಂತಿರುಗಿ" ಎಂಬಂತಹ ಘೋಷಣೆಗಳನ್ನು ಗೀಚಲಾಗಿದೆ. ಈ ಘಟನೆಯನ್ನು ಉತ್ತರ ಅಮೆರಿಕಾದ ಹಿಂದೂಗಳ ಒಕ್ಕೂಟ (CoHNA) ಕೂಡ ಖಂಡಿಸಿದೆ. ಅಲ್ಲದೆ, ತನಿಖೆಗೆ ಒತ್ತಾಯಿಸಿದೆ. ಈ ಪ್ರದೇಶದಲ್ಲಿ ಹಿಂದೂ ಧರ್ಮದ ತಿಳುವಳಿಕೆಯನ್ನು ಸುಧಾರಿಸಲು ಮೀಸಲಾಗಿರುವ ಈ ಒಕ್ಕೂಟ, 2022 ರಿಂದ ಇಲ್ಲಿಯವರೆಗೆ ಅಮೆರಿಕದಾದ್ಯಂತ ಧ್ವಂಸಗೊಂಡ ಅಥವಾ ಕಳ್ಳತನಕ್ಕೆ ಒಳಗಾದ 10 ದೇವಾಲಯಗಳ ಪಟ್ಟಿಯನ್ನು ಇದೇ ಸಂದರ್ಭದಲ್ಲಿ ನೀಡಿದೆ.

Hindu temple 1

ಇದೇ ಸಂದರ್ಭದಲ್ಲಿ ಹಿಂದೂ ಅಮೆರಿಕನ್ ಫೌಂಡೇಶನ್, ದೇವಾಲಯವನ್ನು ಹಿಂದು ವಿರೋಧಿ ಬರಹಗಳ ಮೂಲಕ ವಿರೂಪಗೊಳಿಸಿರುವ ಚಿತ್ರಗಳನ್ನು ಎಕ್ಸ್​ನಲ್ಲಿ ಹಂಚಿಕೊಂಡಿದೆ. ಇದರೊಂದಿಗೆ ನಮ್ಮ ಪವಿತ್ರ ಸ್ಥಳಗಳಲ್ಲಿ ನಡೆಯುತ್ತಿರುವ ಹಿಂದೂ ವಿರೋಧಿ ದ್ವೇಷ ಅಪರಾಧಗಳ ಸರಣಿಯಲ್ಲಿ ಪ್ರಸ್ತುತ ಘಟನೆಯನ್ನು ತನಿಖೆ ಮಾಡಲು FBI ಮುಖ್ಯಸ್ಥ ಕಾಶ್ ಪಟೇಲ್ ಹಾಗೂ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಹಾಗೂ ಚಿನೋ ಹಿಲ್ಸ್ ಪೊಲೀಸ್ ಇಲಾಖೆಗೆ ಒತ್ತಾಯಿಸಿದೆ.

Hindu temple 3

2024ರ ಸೆಪ್ಟೆಂಬರ್ 25ರಂದು ಕ್ಯಾಲಿಫೋರ್ನಿಯಾದ ರಾಜ್ಯ ರಾಜಧಾನಿ ಸ್ಯಾಕ್ರಮೆಂಟೋದಲ್ಲಿರುವ BAPS ಹಿಂದೂ ದೇವಾಲಯವನ್ನು "ಹಿಂದೂಗಳೇ ಹಿಂತಿರುಗಿ" ಎಂದು ಗೀಚುವ ಮೂಲಕ ಅಶ್ಲೀಲ ಬರಹಗಳಿಂದ ಅಪವಿತ್ರಗೊಳಿಸಲಾಗಿತ್ತು. ಸ್ಯಾಕ್ರಮೆಂಟೋ ಘಟನೆಗೂ ಸುಮಾರು 10 ದಿನಗಳ ಮೊದಲು, ನ್ಯೂಯಾರ್ಕ್‌ನ ಮೆಲ್ವಿಲ್ಲೆಯಲ್ಲಿರುವ ಮತ್ತೊಂದು BAPS ಶ್ರೀ ಸ್ವಾಮಿನಾರಾಯಣ ಮಂದಿರವನ್ನು ದ್ವೇಷಪೂರಿತ ಸಂದೇಶಗಳಿಂದ ವಿರೂಪಗೊಳಿಸಲಾಗಿತ್ತು. ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಈ ಘಟನೆಯನ್ನು ಬಲವಾಗಿ ಖಂಡಿಸಿ, ಅಮೆರಿಕದ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net