

Champions Trophy : ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿಗಾಗಿ ಮುಖಾಮುಖಿ ಆಗಲಿವೆ. ಈ ಪಂದ್ಯ ಇಂದು (ಮಾ.9) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದಕ್ಕಾಗಿ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆ ಚಾಂಪಿಯನ್ಸ್ ಟ್ರೋಫಿಯ ವಿಜೇತ ತಂಡಕ್ಕೆ ಎಷ್ಟು ಬಹುಮಾನದ ಹಣವನ್ನು ನೀಡಲಾಗುತ್ತದೆ? ಮತ್ತು ರನ್ನರ್ ಅಪ್ ತಂಡಕ್ಕೆ ಸಿಗುವ ಬಹುಮಾನದ ಮೊತ್ತವೆಷ್ಟು? ಎಂಬ ಚರ್ಚೆ ನಡೆಯುತ್ತಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ.
ಈ ಬಾರಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ವಿಜಯ ಸಾಧಿಸುವ ತಂಡಕ್ಕೆ ಭಾರಿ ಮೊತ್ತದ ಹಣ ಸಿಗಲಿದೆ. ಸೋತ ತಂಡಕ್ಕೂ ಸಾಕಷ್ಟು ಹಣ ಸಿಗಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಈ ಪಂದ್ಯಾವಳಿಯ ಬಹುಮಾನದ ಹಣವನ್ನು ಈಗಾಗಲೇ ಘೋಷಿಸಿದೆ. ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ತಂಡಕ್ಕೆ ಸುಮಾರು 19.48 ಕೋಟಿ ರೂಪಾಯಿ ಸಿಗಲಿದೆ. ಫೈನಲ್‌ನಲ್ಲಿ ಸೋತ ತಂಡ, ಅಂದರೆ ರನ್ನರ್ ಅಪ್ ತಂಡ ಸುಮಾರು 9.74 ಕೋಟಿ ರೂಪಾಯಿ ಪಡೆಯಲಿದೆ.
ಸೆಮಿಫೈನಲ್‌ನಲ್ಲಿ ಸೋತ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸುಮಾರು 4.87 ಕೋಟಿ ರೂ. ಬಹುಮಾನವನ್ನು ಪಡೆಯಲಿವೆ. ಗ್ರೂಪ್ ಹಂತದಿಂದ ನಿರ್ಗಮಿಸಿದ ತಂಡಗಳು ಸಹ ಬಹುಮಾನದ ಹಣವನ್ನು ಪಡೆಯಲಿವೆ. ಐದನೇ ಮತ್ತು ಆರನೇ ಸ್ಥಾನ ಪಡೆದ ತಂಡಗಳು (ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ) ಸಮಾನ ಮೊತ್ತ 3.04 ಕೋಟಿ ರೂಪಾಯಿ ಬಹುಮಾನ ಪಡೆಯಲಿವೆ. ಏಳನೇ ಮತ್ತು ಎಂಟನೇ ಸ್ಥಾನ ಪಡೆದ ತಂಡಗಳು (ಪಾಕಿಸ್ತಾನ ಮತ್ತು ಇಂಗ್ಲೆಂಡ್) ಸಮಾನ ಮೊತ್ತ 1.22 ಕೋಟಿ ರೂಪಾಯಿ ಬಹುಮಾನ ಪಡೆಯಲಿವೆ.
ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಐಸಿಸಿ ಒಟ್ಟು 60 ಕೋಟಿ ರೂಪಾಯಿ ಬಹುಮಾನವನ್ನು ನೀಡುತ್ತಿದೆ. ಇದು 2017ನೇ ಇಸವಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ನೀಡಿದ ಬಹುಮಾನ ಹಣಕ್ಕಿಂತಲೂ ಶೇ. 53 ರಷ್ಟು ಹೆಚ್ಚಾಗಿದೆ.
* ವಿಜೇತ ತಂಡ: 2.24 ಮಿಲಿಯನ್ ಡಾಲರ್ (19.48 ಕೋಟಿ ರೂಪಾಯಿ)
* ರನ್ನರ್ ಅಪ್: 1.24 ಮಿಲಿಯನ್ ಡಾಲರ್ (9.74 ಕೋಟಿ ರೂಪಾಯಿ)
* ಸೆಮಿಫೈನಲಿಸ್ಟ್‌ಗಳು (ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ): 5,60,000 ಡಾಲರ್ (4.87 ಕೋಟಿ ರೂಪಾಯಿ)
* ಐದನೇ-ಆರನೇ ಶ್ರೇಯಾಂಕಿತ ತಂಡ (ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ): 3,50,000 ಡಾಲರ್ (3.04 ಕೋಟಿ ರೂಪಾಯಿ)
* 7 ಮತ್ತು 8ನೇ ಶ್ರೇಯಾಂಕಿತ ತಂಡ (ಪಾಕಿಸ್ತಾನ ಮತ್ತು ಇಂಗ್ಲೆಂಡ್): 1,40,000 ಡಾಲರ್ ( 1.22 ಕೋಟಿ ರೂಪಾಯಿ)