

Werewolf Syndrome : ನಮ್ಮಲ್ಲಿ ದಪ್ಪಗಿರುವವರು ತೆಳ್ಳಗಾಗಲು ಹಂಬಲಿಸುತ್ತಾರೆ. ಅದೇ ರೀತಿ, ತೆಳ್ಳಗಿರುವ ಜನರು ಸ್ವಲ್ಪ ದಪ್ಪಗಿದ್ದರೆ ಚೆನ್ನಾಗಿರುತ್ತಿತ್ತು ಎನ್ನುತ್ತಾರೆ. ಇನ್ನು ಗುಂಗುರು ಕೂದಲಿನ ಕೆಲವರು ನಯವಾದ ಮತ್ತು ರೇಷ್ಮೆಯಂತಹ ಕೂದಲನ್ನು ನೋಡಿದಾಗ ನಮಗೂ ಆ ರೀತಿ ಇರಬೇಕಿತ್ತು ಅಂದುಕೊಳ್ಳುತ್ತಾರೆ. ಈ ರೀತಿ ಅಂದುಕೊಳ್ಳುವುದು ಸಹಜ. ಆದರೆ, ಅಸ್ವಾಭಾವಿಕ ಮತ್ತು ವಿಚಿತ್ರ ಸಿಂಡ್ರೋಮ್‌ನಿಂದ ಬಳಲುತ್ತಿರುವ ಈ ಹುಡುಗ ತನ್ನ ಸ್ಥಿತಿಯ ಬಗ್ಗೆ ಎಂದಿಗೂ ಚಿಂತಿಸುವುದಿಲ್ಲ. ತನ್ನ ಆತ್ಮವಿಶ್ವಾಸದಿಂದಲೇ ಇಂದು ಗಿನ್ನೆಸ್ ಪ್ರಶಸ್ತಿಯನ್ನು ಗೆದ್ದಿರುವು ನಿಜಕ್ಕೂ ಪ್ರಶಂಸನೀಯ. ಆ ಹುಡುಗ ಯಾರು? ಅವನಿಗಿರುವ ಸಿಂಡ್ರೋಮ್ ಯಾವುದು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಮಧ್ಯಪ್ರದೇಶದ ರತ್ಲಂ ಮೂಲದ ಲಲಿತ್ ಪಾಟಿದಾರ್, ಅತಿಯಾದ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಈ ಹಿಂದೆ ಸಾಕಷ್ಟು ಬಾರಿ ಮುಜುಗರಕ್ಕೂ ಒಳಗಾಗಿದ್ದಾರೆ. ಆದರೆ, ಲಲಿತ್ ಮಾತ್ರ ಎಂದಿಗೂ ಧೈರ್ಯ ಕಳೆದುಕೊಳ್ಳಲಿಲ್ಲ ಮತ್ತು ಆತ್ಮವಿಶ್ವಾಸದಿಂದಲೇ ಜೀವನದಲ್ಲಿ ಮುಂದೆ ಸಾಗುತ್ತಿದ್ದಾರೆ. ಇದೀಗ ತಮ್ಮ ಕೂದಲಿನ ಮೂಲಕವೇ ದಾಖಲೆಯನ್ನು ಬರೆದಿದ್ದಾರೆ. ಪ್ರತಿ ಚದರ ಸೆಂಟಿಮೀಟರ್‌ಗೆ 201.72 ಕೂದಲುಗಳೊಂದಿಗೆ ಗಿನ್ನೆಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಹೈಪರ್ಟ್ರಿಕೋಸಿಸ್ ಎಂಬ ಅಪರೂಪದ ವೈದ್ಯಕೀಯ ಸ್ಥಿತಿಯಿಂದಾಗಿ, ಲಲಿತ್ ಅವರ ಮುಖವು ಶೇ 95 ಕ್ಕಿಂತ ಹೆಚ್ಚು ಕೂದಲಿಂದ ಆವರಿಸಿದೆ. ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ, ಮಧ್ಯಯುಗದಿಂದ ವಿಶ್ವಾದ್ಯಂತ ಇದುವರೆಗೂ ದಾಖಲಾದ ಸುಮಾರು 50 ಪ್ರಕರಣಗಳಲ್ಲಿ ಲಲಿತ್ ಪ್ರಕರಣವೂ ಕೂಡ ಒಂದು.
ಆದಾಗ್ಯೂ, ಆರಂಭದಲ್ಲಿ ಲಿಲಿತ್ ಅವರು ಸಾಕಷ್ಟು ಸವಾಲುಗಳನ್ನು ಎದುರಿಸಿದರು. ಆದರೆ, ನಂತರದಲ್ಲಿ ಎಲ್ಲರೂ ತಮ್ಮನ್ನು ಅರ್ಥಮಾಡಿಕೊಂಡರು ಎಂದು ಹೇಳಿದ್ದಾರೆ. ಈಗ ಅನೇಕ ಜನರು ತಮ್ಮ ಬಗ್ಗೆ ದಯೆ ತೋರುತ್ತಿದ್ದಾರೆ. ಕೂದಲನ್ನು ತೆಗೆಯುವಂತೆ ಸೂಚಿಸುವುದು ಕೂಡ ಸಾಮಾನ್ಯವಾಗಿದೆ. ಆದರೆ, ನಾನು ಅದರ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ನಾನು ಹೇಗಿದ್ದೇನೋ ಹಾಗೆಯೇ ಇರಲು ಇಷ್ಟಪಡುತ್ತೇನೆ. ನನ್ನ ನೋಟವನ್ನು ಬದಲಾಯಿಸಲು ನಾನು ಬಯಸುವುದಿಲ್ಲ. ನನಗೆ ಗಿನ್ನೆಸ್ ಮನ್ನಣೆ ಸಿಕ್ಕಿದ್ದು ತುಂಬಾ ಸಂತೋಷವಾಗಿದೆ, ನನಗೆ ಏನು ಹೇಳಬೇಕೆಂದು ತಿಳಿಯುತ್ತಿಲ್ಲ ಎಂದು ಲಲಿತ್ ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಅಂದಹಾಗೆ ಮಧ್ಯಪ್ರದೇಶದ ರತ್ಲಂನ ಲಲಿತ್ ಪಾಟಿದಾರ್ ಹುಟ್ಟಿನಿಂದಲೇ ಅಪರೂಪದ 'ವೂಲ್ಫ್ ಸಿಂಡ್ರೋಮ್' ನಿಂದ ಬಳಲುತ್ತಿದ್ದಾರೆ. 'ವೂಲ್ಫ್ ಸಿಂಡ್ರೋಮ್' ಅಥವಾ ಹೈಪರ್ಟ್ರಿಕೋಸಿಸ್ ತಲೆಯಿಂದ ಕಾಲಿನವರೆಗೆ ಅತಿಯಾದ ಕೂದಲು ಬೆಳವಣಿಗೆಯ ಅಪರೂಪದ ಕಾಯಿಲೆಯಾಗಿದೆ. ಮಧ್ಯಯುಗದಿಂದಲೂ ಕೇವಲ 50 ಜನರು ಮಾತ್ರ ಇದರಿಂದ ಬಳಲುತ್ತಿದ್ದಾರೆ. ಲಲಿತ್ ಅವರ ಇಡೀ ದೇಹವು ಸಂಪೂರ್ಣವಾಗಿ ಕೂದಲಿನಿಂದ ಆವೃತವಾಗಿದೆ. ಲಲಿತ್ ಪಾಟಿದಾರ್ ಅವರನ್ನು ನೋಡುವ ಜನರು ಆಶ್ಚರ್ಯಚಕಿತರಾಗುತ್ತಾರೆ. ಶಾಲೆಯಲ್ಲಿ ಮಕ್ಕಳು ಸಹ ಅವರನ್ನು ಗೇಲಿ ಮಾಡುತ್ತಿದ್ದರು. ಕೆಲವರು ಅವರನ್ನು ಮಂಕಿ ಬಾಯ್ ಎಂದು ಕರೆಯುತ್ತಿದ್ದರು. ಕೆಲವರು ಕಲ್ಲುಗಳನ್ನು ಸಹ ಎಸೆಯುತ್ತಿದ್ದರು. ಕೆಲವರು ಲಲಿತ್ ಅವರನ್ನು ಹನುಮಂತನ ಅವತಾರವೆಂದು ಪರಿಗಣಿಸಿದರು.
ಲಲಿತ್ ಅವರ ತಂದೆ ರೈತರಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಪ್ರಸ್ತುತ, ಲಲಿತ್ ಅವರ ಮುಖವು ಶೇ. 95 ಕ್ಕಿಂತ ಹೆಚ್ಚು ಕೂದಲಿನಿಂದ ಮುಚ್ಚಲ್ಪಟ್ಟಿದೆ. ಮಗನ ಸಮಸ್ಯೆಯನ್ನು ಸರಿಪಡಿಸಲು ಆತನ ಪಾಲಕರು ವೈದ್ಯರ ಬಳಿ ಅಲೆದಾಡಿದರೂ ಯಾವುದೇ ಪ್ರಯೋಜವಿಲ್ಲ. ಏಕೆಂದರೆ, ಇದನ್ನು ಹೈಪರ್ಟ್ರಿಕೋಸಿಸ್ ಎಂದು ಕರೆಯಲಾಗುತ್ತದೆ ಮತ್ತು ಪ್ರಸ್ತುತ ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದಾಗ್ಯೂ, ಅವರು ವಯಸ್ಸಾದಾಗ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಬಹುದು ಎಂದಿದ್ದಾರೆ.
ಲಲಿತ್ ಅವರಿಗೆ ಇನ್‌ಸ್ಟಾಗ್ರಾಮ್ ಮತ್ತು ಅವರ ಯೂಟ್ಯೂಬ್ ಚಾನೆಲ್‌ನಲ್ಲಿಯೂ ಉತ್ತಮ ಅನುಯಾಯಿಗಳಿದ್ದಾರೆ. ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 2.65 ಲಕ್ಷ ಮತ್ತು ಯೂಟ್ಯೂಬ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ. ಅವರು ಇತ್ತೀಚೆಗೆ ಇಟಲಿಯ ಮಿಲನ್‌ನಲ್ಲಿ ನಡೆದ ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡರು. ಅವರ ಕುಟುಂಬದ ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ, ಅವರು ಪ್ರಪಂಚವನ್ನು ಸುತ್ತುವ ಆಶಯವನ್ನು ಹೊಂದಿದ್ದಾರೆ. ವಿಭಿನ್ನ ಸಂಸ್ಕೃತಿಗಳನ್ನು ಅನ್ವೇಷಿಸುವ ತಮ್ಮ ಕನಸನ್ನು ನನಸಾಗಿಸುವತ್ತ ಲಲಿತ್ ಸಾಗುತ್ತಿದ್ದಾರೆ. (ಏಜೆನ್ಸೀಸ್)