

Champions Trophy : ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ಮಾರ್ಚ್ 9ರಂದು ದುಬೈ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಕದನಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಎರಡೂ ತಂಡಗಳು ಕೂಡ ಬಲಿಷ್ಠವಾಗಿದ್ದು, ಟ್ರೋಫಿಯನ್ನು ಎತ್ತಿ ಹಿಡಿಯಲು ತಮ್ಮದೇಯಾದ ರಣತಂತ್ರಗಳನ್ನು ರೂಪಿಸುತ್ತಿವೆ.
ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯಕ್ಕೆ ಎಲ್ಲರು ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಸಂದರ್ಭದಲ್ಲೇ ಟೀಮ್ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ.
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಪ್ರಶಸ್ತಿ ರೇಸ್‌ನಲ್ಲಿ ಟೀಮ್ ಇಂಡಿಯಾಗೆ ಎಕ್ಸ್ ಫ್ಯಾಕ್ಟರ್ (ಪ್ರಮುಖ ಆಟಗಾರ) ಆಗಲಿದ್ದಾರೆ ಎಂದು ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ. ಶುಭಮನ್ ಗಿಲ್ ಕೂಡ ಈ ಪಂದ್ಯದಲ್ಲಿ ನಿರ್ಣಾಯಕರಾಗಲಿದ್ದಾರೆ ಎಂದು ಹೇಳಿದ್ದಾರೆ. ಆದಾಗ್ಯೂ, ಈ ಬಾರಿ ಕಿವೀಸ್ ಬೌಲರ್‌ಗಳು ಕಣ್ಣು ಶ್ರೇಯಸ್ ಅಯ್ಯರ್ ಮೇಲಿರುತ್ತದೆ ಎಂದು ಆಕಾಶ್ ಚೋಪ್ರಾ ಊಹಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ, ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಒಮ್ಮೆ ಮಾತ್ರ 30ಕ್ಕಿಂತ ಕಡಿಮೆ ರನ್ ಗಳಿಸಿದ್ದಾರೆ. ಆ ಒಂದನ್ನು ಹೊರತುಪಡಿಸಿ, ಅವರು ಪ್ರತಿ ಬಾರಿಯೂ ಕಿವೀಸ್ ವಿರುದ್ಧ ಉತ್ತಮ ರನ್ ಗಳಿಸಿದ್ದಾರೆ. ಆದ್ದರಿಂದ ಈ ಬಾರಿ ಅವರೇ ಕಿವೀಸ್ ಬೌಲರ್ಗಳ ಗುರಿಯಾಗುತ್ತಾರೆ ಎಂದು ತೋರುತ್ತದೆ. ಕಿವೀಸ್ ಅವರು ಮಧ್ಯಮ ಓವರ್‌ಗಳಲ್ಲಿ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಮಿಚೆಲ್ ಸ್ಯಾಂಟ್ನರ್, ಬ್ರೇಸ್‌ವೆಲ್, ರಾಚಿನ್ ರವೀಂದ್ರ ಅಥವಾ ಗ್ಲೆನ್ ಫಿಲಿಪ್ಸ್ ಈ ನಾಲ್ವರು ಆಟಗಾರರು ಕಣಕ್ಕೆ ಹೆಚ್ಚು ಬರಬಹುದು. ಏಕೆಂದರೆ ಶ್ರೇಯಸ್ ಅಯ್ಯರ್ ಸ್ಪಿನ್ ಅನ್ನು ಚೆನ್ನಾಗಿ ಆಡುತ್ತಾರೆ. ಅದಕ್ಕಾಗಿಯೇ ಈ ಸ್ಪಿನ್ ಬೌಲರ್‌ಗಳು ಶ್ರೇಯಸ್ ಅವರನ್ನು ಬೇಗನೆ ಪೆವಿಲಿಯನ್‌ಗೆ ಕಳುಹಿಸಲು ಪ್ರಯತ್ನಿಸುತ್ತಾರೆ ಮತ್ತು ಆತನ ಮೇಲೆ ಹೆಚ್ಚು ಗಮನ ಹರಿಸುತ್ತಾರೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಇದುವರೆಗೆ ಎಂಟು ಇನ್ನಿಂಗ್ಸ್‌ಗಳನ್ನು ಆಡಿರುವ ಶ್ರೇಯಸ್ ಅಯ್ಯರ್, 70.38 ಸರಾಸರಿಯಲ್ಲಿ 563 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಮತ್ತು ನಾಲ್ಕು ಅರ್ಧಶತಕಗಳು ಸೇರಿವೆ. ಕಿವೀಸ್ ವಿರುದ್ಧ ಶ್ರೇಯಸ್ ಅವರ ಕನಿಷ್ಠ ಸ್ಕೋರ್ 33. ಹೀಗಾಗಿ ಆಕಾಶ್ ಚೋಪ್ರಾ ಈ ಹೇಳಿಕೆಗಳನ್ನು ನೀಡಿದ್ದಾರೆ.
ಇನ್ನು ಆರಂಭಿಕ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಬಗ್ಗೆ ಮಾತನಾಡುತ್ತಾ, ಈ ಐಸಿಸಿ ಟೂರ್ನಮೆಂಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಗಳಿಸುವ ಮೂಲಕ ಗಿಲ್ ದೊಡ್ಡ ಬ್ಯಾಟಿಂಗ್ ಮಾಡಿದರು. ಅಲ್ಲದೆ, ಪಾಕಿಸ್ತಾನ ವಿರುದ್ಧವೂ ಉತ್ತಮವಾಗಿ ಆಡಿದರು. ಆದಾಗ್ಯೂ, ಆ ನಂತರ ಗಿಲ್ ಸ್ವಲ್ಪ ಹಿಂದೆ ಉಳಿದಿದ್ದಾರೆ. ಆದರೆ, ಫೈನಲ್‌ನಲ್ಲಿ ಚೆನ್ನಾಗಿ ಬ್ಯಾಟ್ ಬೀಸಿದರೆ ತಂಡಕ್ಕೆ ಮತ್ತು ಅವರಿಗೆ ಪ್ರಯೋಜನಕಾರಿಯಾಗಲಿದೆ. ನಮಗೆ ಇನ್ನೊಬ್ಬ ವಿರಾಟ್ ಬೇಕಾದರೆ, ಗಿಲ್ ಫೈನಲ್‌ನಲ್ಲಿ ತಮ್ಮ ಛಾಪು ಮೂಡಿಸಬೇಕು. ಶ್ರೇಯಸ್ ಅಯ್ಯರ್ ಮತ್ತು ಶುಭ್‌ಮನ್ ಗಿಲ್ ಈ ರೀತಿ ಪ್ರದರ್ಶನ ನೀಡಿದರೆ, ಚಾಂಪಿಯನ್ಸ್ ಟ್ರೋಫಿ ನಮ್ಮದು ಎಂದು ನಾವು ಬರೆಯಬಹುದು ಅಂತ ಆಕಾಶ್ ಚೋಪ್ರಾ ಹೇಳಿದರು.
ಕಿವೀಸ್ ವಿರುದ್ಧ ಗಿಲ್ ಕೂಡ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಆತ ದ್ವಿಶತಕದ ಹೀರೋ. ಕಿವೀಸ್ ವಿರುದ್ಧ ಇದುವರೆಗೆ ಹನ್ನೊಂದು ಇನ್ನಿಂಗ್ಸ್‌ಗಳಲ್ಲಿ ಅವರು 592 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಸೇರಿವೆ. 2023 ರಲ್ಲಿ ಹೈದರಾಬಾದ್‌ನಲ್ಲಿ ಕಿವೀಸ್ ವಿರುದ್ಧ ದ್ವಿಶತಕ (208) ಗಳಿಸಿದರು. (ಏಜೆನ್ಸೀಸ್)