

Girl Student : ಪರೀಕ್ಷೆಯ ಒತ್ತಡವೋ... ಅನಾರೋಗ್ಯವೋ... ಮನಸ್ಸಿಗೆ ಆದ ಗಾಯವೋ... ಹುಡುಗಿಯೊಬ್ಬಳು ತನ್ನ ಜೀವವನ್ನೇ ಬಲಿ ಕೊಟ್ಟಿದ್ದಾಳೆ. ಪರೀಕ್ಷೆಯ ಸಮಯದಲ್ಲಿ ಆಕೆ ಶೈಕ್ಷಣಿಕ ಕನಸು ಕಮರಿ ಹೋಗಿದೆ. ಆಂಧ್ರ ಪ್ರದೇಶದ ಕೊನವಾನಿಪಲೆಂ ಗ್ರಾಮದ ದ್ವಿತೀಯ ಪಿಯು ವಿದ್ಯಾರ್ಥಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.
ಸಬ್ ಇನ್ಸ್ಪೆಕ್ಟರ್ ವಿಭೀಷಣ ರಾವ್ ಹೇಳಿಕೆ ಪ್ರಕಾರ, ಟುನಿ ಚೈತನ್ಯ ಕಾಲೇಜಿನ ವಿದ್ಯಾರ್ಥಿನಿ ಜಯಪ್ರಿಯ (17) ಬುಧವಾರ ಇಂಗ್ಲಿಷ್ ಪರೀಕ್ಷೆ ಬರೆದು ಮನೆಗೆ ಮರಳಿದಳು. ಅಂದಿನಿಂದ ಆಕೆ ಆಲಸ್ಯದಿಂದ ಮನೆಯಲ್ಲೇ ಇದ್ದಳು. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಆಕೆಯ ಪಾಲಕರು ಗುರುವಾರ ಮಧ್ಯಾಹ್ನ ಕಾರ್ಯಕ್ರಮವೊಂದಕ್ಕೆ ತೆರಳಿದರು. ಇತ್ತ ಯಾರೂ ಇಲ್ಲದಿರುವುದನ್ನು ನೋಡಿ ಜಯಪ್ರಿಯ ಡೆತ್ನೋಟ್ ಪತ್ರ ಬರೆದಿಟ್ಟು ನೇಣು ಬಿಗಿದುಕೊಂಡಿದ್ದಾಳೆ.
ಅಮ್ಮ, ಅಪ್ಪ, ದಯವಿಟ್ಟು ನನ್ನನ್ನು ಕ್ಷಮಿಸಿ, ನನ್ನ ಸಾವಿಗೆ ನನ್ನ ಆರೋಗ್ಯವೇ ಕಾರಣ. ನನಗೆ ಈ ನೋವನ್ನು ಸಹಿಸಲಾಗುತ್ತಿಲ್ಲ. ನಾನು ಯಾವುದರ ಮೇಲೂ ಗಮನಹರಿಸಲು ಸಾಧ್ಯವಾಗದ ಕಾರಣ ತುಂಬಾ ದುಃಖಿತನಾಗಿದ್ದೆ. ನನ್ನೊಳಗೆ ನಾನು ತುಂಬಾ ನೋವು ಅನುಭವಿಸಿದ್ದೇನೆ. ನನ್ನ ಆಸೆಯನ್ನು ಪೂರೈಸಲು ಸಾಧ್ಯವಿಲ್ಲ ಎಂದು ಭಾವಿಸಿದೆ. ಕ್ಷಮಿಸಿ, ಅಮ್ಮ ನಾನು ಸತ್ತ ಕಾರಣವನ್ನು ಯಾರಿಗೂ ಹೇಳಬೇಡ. ನಾನು ಬದುಕಿರುವುದರಲ್ಲಿ ಅರ್ಥವಿಲ್ಲ. ಸಹೋದರ ಚರಣ್ ಪುಟ್ಟ ಚೆನ್ನಾಗಿರು. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಅಮ್ಮನನ್ನು ಚೆನ್ನಾಗಿ ನೋಡಿಕೊ. ಅಪ್ಪನನ್ನು ನೋಯಿಸಬೇಡ. ಅಪ್ಪ ಹೇಳುವುದನ್ನು ಕೇಳು. ನಾನು ಸಾಯುತ್ತಿದ್ದೇನೆ ಎಂದು ನನಗೆ ತುಂಬಾ ದುಃಖವಾಗಿದೆ. ನಿಮ್ಮನ್ನು ಪ್ರೀತಿಸುತ್ತೇನೆ ಅಮ್ಮ, ಅಪ್ಪ ಮತ್ತು ನನ್ನ ಸಹೋದರನಿಗೆ ವಿದಾಯ ಎಂದು ಜನಪ್ರಿಯ ಡೆತ್ನೋಟ್ನಲ್ಲಿ ಬರೆದಿದ್ದಾಳೆ.
ಡೆತ್ನೋಟ್ ಓದಿದ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಚೆನ್ನಾಗಿ ಓದಿ ಸುಂದರವಾದ ಜೀವನ ನಡೆಸಬಹುದು ಎಂದು ಭಾವಿಸಿದ್ದ ಸಮಯದಲ್ಲಿ, ಹುಡುಗಿಯ ಸಾವು ಕುಟುಂಬ ಸದಸ್ಯರನ್ನು ದುಃಖದ ಸಾಗರದಲ್ಲಿ ಮುಳುಗಿಸಿದೆ. ಹುಡುಗಿಯ ಸಾವಿನ ಸುದ್ದಿ ಕೇಳಿ ಗ್ರಾಮದ ಎಲ್ಲರೂ ದುಃಖ ವ್ಯಕ್ತಪಡಿಸಿದ್ದಾರೆ. ಅಧ್ಯಯನದ ಒತ್ತಡ ಮತ್ತು ಸಣ್ಣ ಅನಾರೋಗ್ಯವು ಹುಡುಗಿಯ ಜೀವವನ್ನು ಬಲಿ ತೆಗೆದುಕೊಂಡಿತು ಎಂದು ಪಾಲಕರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)