ಆತ ಏನಾದ್ರೂ ಕೇವಲ 20 ಓವರ್​ ನಿಂತ್ರೆ ಚಾಂಪಿಯನ್ಸ್​ ಟ್ರೋಫಿ ನಮ್ಮದೇ... ಆಕಾಶ್​ ಚೋಪ್ರಾ ಅಚ್ಚರಿ ಹೇಳಿಕೆ! Champions Trophy

Champions Trophy
Published on

Champions Trophy : ಚಾಂಪಿಯನ್ಸ್ ಟ್ರೋಫಿಯು ಅಂತಿಮ ಹಂತಕ್ಕೆ ಬಂದಿದೆ. ಇಂದು (ಮಾ.04) ಫೈನಲ್​ ಪಂದ್ಯದ ರೋಚಕ ಹಣಾಹಣಿ ನಡೆಯಲಿದೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್​ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ. ಭಾರತ ತಂಡ 12 ವರ್ಷಗಳ ನಂತರ ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ತವಕದಲ್ಲಿದೆ.

ಇದುವರೆಗೂ ಈ ಮೆಗಾ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೇ ಅಜೇಯವಾಗಿ ಉಳಿದಿರುವ ಭಾರತ, ಫೈನಲ್​​ನಲ್ಲೂ ಅದೇ ಫಲಿತಾಂಶವನ್ನು ಮುಂದುವರಿಸಲು ಉತ್ಸುಕವಾಗಿದೆ. ಮತ್ತೊಂದೆಡೆ, ಕಿವೀಸ್ ಪಡೆ 2000ನೇ ಇಸವಿಯ ಚಾಂಪಿಯನ್ಸ್ ಟ್ರೋಫಿ ಫೈನಲ್‌ ಫಲಿತಾಂಶವನ್ನು ಪುನರಾವರ್ತಿಸಲು ರಣತಂತ್ರ ರೂಪಿಸಿದೆ. ಸರಿಯಾಗಿ 25 ವರ್ಷಗಳ ಹಿಂದೆ ನಡೆದ ಈ ಮೆಗಾ ಟೂರ್ನಿಯ ಫೈನಲ್​ನಲ್ಲಿ ನ್ಯೂಜಿಲೆಂಡ್ ಭಾರತವನ್ನು ಸೋಲಿಸಿತ್ತು.

ಆ ಬಳಿಕ 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲೂ ಟೀಮ್​ ಇಂಡಿಯಾ, ಕಿವೀಸ್​ ವಿರುದ್ಧ ಸೋಲನುಭವಿಸಿತ್ತು. ಈ ಎರಡು ಸೋಲಿನ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಇದೇ ಸರಿಯಾದ ಅವಕಾಶ. ಪ್ರಶಸ್ತಿ ಹೋರಾಟದ ಸಂದರ್ಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನಾಯಕ ರೋಹಿತ್ ಶರ್ಮ 20 ಓವರ್ ಬ್ಯಾಟ್ ಮಾಡಿದರೆ ಭಾರತ ಚಾಂಪಿಯನ್ಸ್ ಟ್ರೋಫಿ ಗೆಲ್ಲಲಿದೆ ಎಂದು ಚೋಪ್ರಾ ಭವಿಷ್ಯ ನುಡಿದಿದ್ದಾರೆ. ಅದೇ ರೀತಿ ಹಿಟ್ ಮ್ಯಾನ್ ನಾಯಕತ್ವದ ಬಗ್ಗೆಯೂ ಹೊಗಳಿಕೆಯ ಸುರಿಮಳೆಗೈದಿದ್ದಾರೆ.

ರೋಹಿತ್ ಶರ್ಮ ಅದ್ಭುತ ನಾಯಕ. ರೋಹಿತ್ ಮೈದಾನದಲ್ಲಿ ತಂತ್ರಗಾರಿಕೆಯಲ್ಲಿ ಬಹಳ ನಿಪುಣರು. ಕಳೆದ ಮೂರು ಐಸಿಸಿ ವೈಟ್-ಬಾಲ್ ಪಂದ್ಯಾವಳಿಗಳಲ್ಲಿ ಅವರ ನಾಯಕತ್ವದಲ್ಲಿ ಭಾರತ ಕೇವಲ ಒಂದು ಪಂದ್ಯವನ್ನು ಮಾತ್ರ ಸೋತಿದೆ. ಭಾರತ ಈ ಫೈನಲ್ ಗೆದ್ದರೆ, ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ತಮ್ಮ ಹೆಸರಿನಲ್ಲಿ ನಾಲ್ಕು ಐಸಿಸಿ ಟ್ರೋಫಿಗಳನ್ನು ಹೊಂದಲಿದ್ದಾರೆ. ಇವರಿಬ್ಬರೂ ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗರು ಎನಿಸಿಕೊಳ್ಳಲಿದ್ದಾರೆ. ರೋಹಿತ್ ಶರ್ಮ ಯಾವಾಗಲೂ ಆಕ್ರಮಣಕಾರಿಯಾಗಿ ಆಡುತ್ತಾರೆ. ಅವರು ಪವರ್‌ಪ್ಲೇನಲ್ಲಿ ರನ್ ಗಳಿಸಲು ಪ್ರಯತ್ನಿಸುತ್ತಾರೆ. ಆದರೆ, ಈ ಪಂದ್ಯದಲ್ಲಿ ಸ್ವಲ್ಪ ಹೊತ್ತು ಆಡಿದರೆ ಒಳ್ಳೆಯದು. ರೋಹಿತ್ 20 ಓವರ್‌ಗಳನ್ನು ಆಡಿದರೆ ಭಾರತ ಚಾಂಪಿಯನ್ಸ್ ಟ್ರೋಫಿ ಗೆಲ್ಲುತ್ತದೆ ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ರೋಹಿತ್ ಶರ್ಮ ಈ ಮೆಗಾ ಟೂರ್ನಿಯಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಅವರು ಕ್ರೀಸ್‌ನಲ್ಲಿರುವವರೆಗೂ ರನ್ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಆದಾಗ್ಯೂ, ರೋಹಿತ್ ತನ್ನ ಆರಂಭವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಒಂದು ವೇಳೆ ಅದೇನಾದರೂ ಈ ಪಂದ್ಯದಲ್ಲಿ ನಡೆದರೆ ಟೀಮ್​ ಇಂಡಿಯಾ ಖಂಡಿತ ಟ್ರೋಫಿಯನ್ನು ಎತ್ತಿಹಿಡಿಯಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net