ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸುವುದು ನಿಶ್ಚಿತ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

WhatsApp Image 2024-05-21 at 12.58.43 PM
Published on

ನವದೆಹಲಿ: ಇತ್ತೀಚೆಗಷ್ಟೇ ಲೋಕಸಭಾ ಚುನಾವಣೆಗೆ ತಮ್ಮ ಪಕ್ಷದ ಪರವಾಗಿ ಪ್ರಚಾರ ನಡೆಸಲು ಜೂನ್​ 01ರವರೆಗೂ ಕೋರ್ಟ್​ನಿಂದ ಮಧ್ಯಂತರ ಜಾಮೀನು ಪಡೆದ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಈ ಚುನಾವಣೆಯಲ್ಲಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಇಂಡಿಯಾ ಮೈತ್ರಿಕೂಟ ಕೇಂದ್ರ ಸರ್ಕಾರವನ್ನು ರಚಿಸುವ ನಿರೀಕ್ಷೆಯಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್,“ಲೋಕಸಭಾ ಚುನಾವಣೆಯ ಐದನೇ ಹಂತವನ್ನು ನಡೆಸಲಾಗಿದ್ದು, ನಿನ್ನೆಯಷ್ಟೇ ವೋಟಿಂಗ್ ಕೂಡ ಮುಗಿದಿದೆ. ಜೂನ್ 4ರಂದು ಹೊರಬರುವ ಫಲಿತಾಂಶದಲ್ಲಿ ಬಿಜೆಪಿಗೆ ಭಾರೀ ಮುಖಭಂಗ ಉಂಟಾಗಲಿದೆ. ಕಾರಣ, ಈ ಬಾರಿ ಬಿಜೆಪಿ ಸೋಲುತ್ತದೆ" ಎಂದು ಹೇಳಿದರು.

ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, ಇಂಡಿಯಾ ಮೈತ್ರಿಕೂಟವು 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ. ನಮ್ಮದೇ ಸರ್ಕಾರ ಸ್ಥಾಪನೆಯಾಗಲಿದೆ ಎಂದ ದೆಹಲಿ ಸಿಎಂ, "ನಿನ್ನೆ ಸಾರ್ವಜನಿಕ ಸಭೆಯಲ್ಲಿ ಭಾಗಿಯಾದ ಅಮಿತ್ ಶಾ ಮಾತು ಕೇಳಲು ಬಂದಿದ್ದು ಕೇವಲ 500 ಮಂದಿ ಮಾತ್ರ" ಎಂದು ಲೇವಡಿ ಮಾಡಿದರು.

"ಅಮಿತ್ ಶಾ ಹೇಳ್ತಾರೆ, ಎಎಪಿ ಪಕ್ಷವನ್ನು ಬೆಂಬಲಿಸುವವರು ಪಾಕಿಸ್ತಾನಿಗಳಂತೆ. ಹಾಗಾದ್ರೆ, 62 ಕ್ಷೇತ್ರಗಳಲ್ಲಿ ನಮ್ಮನ್ನು ಗೆಲ್ಲಿಸಿ, ನಮ್ಮ ಸರ್ಕಾರ ರಚನೆಗೆ ಕಾರಣರಾಗಿರುವ ಇದೇ ದೆಹಲಿಯ ಜನತೆ ಪಾಕಿಸ್ತಾನಿಗಳೇ?" ಎಂದು ನೇರವಾಗಿ ಪ್ರಶ್ನಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net