

ಚೆನ್ನೈ: ಮೇ.18ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ನಾಕೌಟ್ ಪಂದ್ಯದಲ್ಲಿ 27 ರನ್ಗಳಿಂದ ಆರ್ಸಿಬಿ ಭರ್ಜರಿ ಜಯ ಗಳಿಸಿ, ಅಧಿಕೃತವಾಗಿ ಪ್ಲೇಆಫ್ಗೆ ಎಂಟ್ರಿ ಕೊಟ್ಟಿತು. ತಮ್ಮ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯಲು ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಪಟ್ಟ ಶ್ರಮ ಕಡೆಗೂ ಫಲಿಸಲಿಲ್ಲ. ಇದು ಸಿಎಸ್ಕೆ ತಂಡಕ್ಕೆ ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಭಾರೀ ಬೇಸರ ತಂದೊಡ್ಡಿತು
ಈ ರೋಚಕ ಪಂದ್ಯ ಮುಗಿಯುತ್ತಿದ್ದಂತೆ ಎಲ್ಲರಲ್ಲಿಯೂ ಮೂಡಿದ್ದು ಒಂದೇ ಪ್ರಶ್ನೆ, ಧೋನಿ ಐಪಿಎಲ್ ನಿವೃತ್ತಿ ಯಾವಾಗ? ಕ್ಯಾಪ್ಟನ್ ಕೂಲ್ ಆಟ ಇಲ್ಲಿಗೆ ಮುಕ್ತಾಯವೇ? ಅಥವಾ ಮತ್ತೊಂದು ವರ್ಷ ಸಿಎಸ್ಕೆ ಪರ ಆಡಲಿದ್ದಾರೆಯೇ ಎಂಬ ಹತ್ತಾರು ಪ್ರಶ್ನೆಗಳು ಸಾಮಾಜಿಕ ಜಾಲತಾಣದಿಂದ ಹಿಡಿದು ಎಲ್ಲೆಡೆಯಿಂದ ವ್ಯಾಪಕವಾಗಿ ಕೇಳಿಬಂದಿತು. ಇನ್ನು ಈ ಬಗ್ಗೆ ಸ್ವತಃ ಧೋನಿ ಯಾವ ರೀತಿಯೂ ಪ್ರತಿಕ್ರಿಯೆ ನೀಡದೆ ಹೋಗಿದ್ದು, ಮೊದಲಿಗೆ ಅಭಿಮಾನಿಗಳಲ್ಲಿ ಭಾರೀ ಆಶ್ಚರ್ಯ ಮೂಡಿದ್ದೇ ಆದರೂ ಇದು ಮುಂದಿನ ಸೀಸನ್ ಆಡುವ ಮುನ್ಸೂಚನೆ ಇರಬಹುದು ಎಂದು ಅರಿಯುವಂತೆ ಮಾಡಿತು.
ಸದ್ಯ ಕ್ರಿಕೆಟ್ ಲೋಕದಲ್ಲಿ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ತೀವ್ರವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಸಿಎಸ್ಕೆ ಮ್ಯಾನೇಜ್ಮೆಂಟ್, "ಐಪಿಎಲ್ ನಿವೃತ್ತಿ ಬಗ್ಗೆ 'ಮಾಹಿ' ನಮಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ನಾವು ಸಹ ಅವರನ್ನು ಹೆಚ್ಚೇನು ಕೇಳಲಿಲ್ಲ. ಆದರೆ, ಹೋಗುವ ಮುನ್ನ ಅವರೇಳಿದ್ದು ಮಾತ್ರ, 'ನಾನು ಐಪಿಎಲ್ನಲ್ಲಿ ಆಡಬೇಕೋ, ಬೇಡವೋ ಎಂಬುದನ್ನು ಮುಂಬರುವ ಕೆಲವು ತಿಂಗಳುಗಳಲ್ಲಿ ನಿರ್ಧರಿಸಿ, ಹೇಳ್ತೀನಿ ಎಂದು ಹೇಳಿದ್ದಾರೆ'. ಅಂತಿಮವಾಗಿ ಅದು ಧೋನಿ ಕರೆ ಎಂದು" ಮ್ಯಾನೇಜ್ಮೆಂಟ್ ತಿಳಿಸಿದೆ,(ಏಜೆನ್ಸೀಸ್).