ಪದವಿ, ಪಿಜಿಗೆ ಸರ್ಜರಿ!; ಹಲವು ಕೋರ್ಸ್ ಅವಧಿ ಮಾರ್ಪಾಟು, ಸ್ವರೂಪ ಬದಲು

UGC
Published on
ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ವಿವಿಧ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್​ಗಳಲ್ಲಿ ಹಲವು ಬದಲಾವಣೆ ತಂದಿದೆ. ಇದರನ್ವಯ ಪದವಿ ಕೋರ್ಸ್​ಗಳಿಗೆ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯ (ಸಿಯುಸಿಇಟಿ) ಅಂಕಗಳನ್ನು ಎಲ್ಲರೂ ಪರಿಗಣಿಸಬಹುದಾಗಿದೆ.

ಬೆಂಗಳೂರು: ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು ನೂತನ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್​ಗಳಿಗೆ ಸರ್ಜರಿ ಮಾಡಿ ಹೊಸ ಸ್ವರೂಪ ಪ್ರಕಟಿಸಿದೆ. ಇದರ ಜತೆಯಲ್ಲೇ ಹಲವು ಕೋರ್ಸ್​ಗಳ ಅವಧಿಯಲ್ಲೂ ಮಾರ್ಪಾಟಾಗಿದೆ. ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ (ಎಂಸಿಎ) ಕೋರ್ಸ್ ಅವಧಿ 2 ವರ್ಷ ಎಂದು ಸ್ಪಷ್ಟಪಡಿಸಿದೆ. ಇನ್ನೊಂದೆಡೆ, ಬ್ಯಾಚುಲರ್ ಆಫ್ ಆಕ್ಯುಪೇಷನಲ್ ಥೆರಪಿ (ಬಿಒಟಿ) ಕೋರ್ಸ್ ಈವರೆಗೆ 4 ವರ್ಷಗಳದ್ದಾಗಿತ್ತು. ವೃತ್ತಿಪರ ಅವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಇದನ್ನು ನಾಲ್ಕು ವರ್ಷದ ಬದಲಿಗೆ ನಾಲ್ಕೂವರೆ ವರ್ಷಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಟಿಬೇಟಿಯನ್ ಪದ್ಧತಿ: ಚೀನಾ, ಮಂಗೋಲಿಯಾ, ಭೂತಾನ್, ಟಿಬೆಟ್, ನೇಪಾಳ ಹಾಗೂ ಹಿಮಾಲಯ ಪ್ರಾಂತ್ಯದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಟಿಬೇಟಿಯನ್ ವೈದ್ಯ ಪದ್ಧತಿ ಕೋರ್ಸ್ ಅವಧಿಯನ್ನು ಈ ಹಿಂದೆಯೇ ಹೆಚ್ಚಿಸಲಾಗಿದೆ. ಬ್ಯಾಚುಲರ್ ಆಫ್ ಸೋವಾ ರಿಗ್ಪಾ ಮೆಡಿಸಿನ್ ಆಂಡ್ ಸರ್ಜರಿ ಕೋರ್ಸ್​ಗೆ ಐದೂವರೆ ವರ್ಷ ನಿಗದಿ ಮಾಡಲಾಗಿದೆ.

ಕೋರ್ಸ್​ಗಳ ಸ್ವರೂಪ

  • 9 ಹೊಸ ಕೋರ್ಸ್ ಸ್ವರೂಪ ಪರಿಚಯಿಸಲಾಗಿದೆ. ಇದರಲ್ಲಿ ಫ್ಯಾಷನ್ ಟೆಕ್ನಾಲಜಿ, ಅರ್ಬನ್ ಡಿಸೈನ್ ಕೋರ್ಸ್ ಗಳನ್ನು ಇಂಜಿನಿಯರಿಂಗ್ ಕೋರ್ಸ್ ಎಂದು ಪರಿಗಣಿಸಲಾಗಿದೆ.
  • ಇದೇ ವಿಷಯದಲ್ಲಿ ಎಂ.ಟೆಕ್ ಅಧ್ಯಯನಕ್ಕೂ ಅವಕಾಶ ನೀಡಲಾಗಿದೆ
  • ಬ್ಯಾಚುಲರ್ ಆಫ್ ಫ್ಯಾಷನ್ ಟೆಕ್ನಾಲಜಿ(ಬಿಎಫ್.ಟೆಕ್)ಇನ್ನು ನಾಲ್ಕು ವರ್ಷದ ಕೋರ್ಸ್
  • ಮಾಸ್ಟರ್ ಆಫ್ ಫ್ಯಾಷನ್ ಟೆಕ್ನಾಲಜಿ (ಎಂಎಫ್.ಟೆಕ್) ಎರಡು ವರ್ಷ
  • ಮಾಸ್ಟರ್ ಆಫ್ ಫ್ಯಾಷನ್ ಮ್ಯಾನೇಜ್​ವೆುಂಟ್ (ಎಂಎಫ್​ಎಂ) ಪರಿಚಯ. 2 ವರ್ಷದ್ದು
  • ಬ್ಯಾಚುಲರ್ ಆಫ್ ಅರ್ಬನ್ ಡಿಸೈನ್ (ಬಿಯುಡಿ)ಕೂಡ ನಾಲ್ಕು ವರ್ಷ
  • ಮಾಸ್ಟರ್ ಆಫ್ ಅರ್ಬನ್ ಡಿಸೈನ್ (ಎಂಯುಡಿ) 2 ವರ್ಷ ಅಧ್ಯಯನ.

ಫಿಲಿಫೈನ್ಸ್ ಕೋರ್ಸ್ ಸ್ಪಷ್ಟನೆ: ಫಿಲಿಫೈನ್ಸ್​ನಲ್ಲಿ ವ್ಯಾಸಂಗ ಮಾಡಿರುವ ಬಿಎಸ್​ಸಿ ಕೋರ್ಸ್ ಭಾರತದ ಎಂಬಿಬಿಎಸ್​ಗೆ ತತ್ಸಮಾನವಲ್ಲ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್​ಎಂಸಿ) ಸ್ಪಷ್ಟಪಡಿಸಿದೆ.

ಸಿಯುಸಿಇಟಿ ಅಂಕ ಓಕೆ: ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಕೇಂದ್ರೀಯ ವಿಶ್ವವಿದ್ಯಾಲಯ ಗಳಲ್ಲಿನ ವಿವಿಧ ಕೋರ್ಸ್​ಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಯುಸಿಇಟಿ) ನಡೆಸುತ್ತಿದೆ. ಈ ಅಂಕಗಳನ್ನು ರಾಜ್ಯ ಸರ್ಕಾರಿ ವಿವಿಗಳು, ಖಾಸಗಿ ವಿವಿಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ದಾಖಲಾತಿಗೆ ಬಳಸಿಕೊಳ್ಳ ಬಹುದೆಂದು ತಿಳಿಸಿದೆ. ಎಲ್ಲ ವಿವಿಗಳ ಕುಲಪತಿಗಳು, ಶಿಕ್ಷಣ ಸಂಸ್ಥೆಗಳ ನಿರ್ದೇಶಕರು, ಹಾಗೂ ಪ್ರಾಂಶು ಪಾಲರಿಗೆ ಈ ಕುರಿತು ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ಪತ್ರ ಬರೆದಿದ್ದಾರೆ.

ಏ.30ರವರೆಗೆ ಅವಕಾಶ: ಸಿಯುಸಿಟಿಗೆ ಅರ್ಜಿ ಸಲ್ಲಿಸಲು ಏ.2ರಿಂದ ಏ.30ರವರೆಗೆ ಅವಕಾಶ ನೀಡಲಾಗಿದೆ. ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸೇರಿ ದೇಶದ 45 ಕೇಂದ್ರೀಯ ವಿವಿಗಳಲ್ಲಿ ಪ್ರವೇಶಕ್ಕೆ ಸಿಯುಸಿಇಟಿ ಕಡ್ಡಾಯ ಮಾಡಲಾಗಿದೆ.

ಕನ್ನಡದಲ್ಲೂ ಪರೀಕ್ಷೆ: ಕಂಪ್ಯೂಟರ್ ಆಧಾರಿತ ಪರೀಕ್ಷೆಯ 1ಎ ವಿಭಾಗದಲ್ಲಿ ಕನ್ನಡವೂ ಸೇರಿ 13 ಭಾಷೆಗಳಲ್ಲಿ ನಡೆಯಲಿದ್ದು, 1ಬಿ ವಿಭಾಗದಲ್ಲಿ 20 ಭಾಷೆಗಳಿಗೆ ಅವಕಾಶ ನೀಡಲಾಗಿದೆ. ಎರಡನೇ ವಿಭಾಗದಲ್ಲಿ 27 ವಿಷಯಗಳಿದ್ದು, ನಾಲ್ಕನೇ ಭಾಗದಲ್ಲಿ ಜನರಲ್ ಟೆಸ್ಟ್ ಇರಲಿದೆ ಎಂದು ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ತಿಳಿಸಿದೆ.

ಯಾರು ಬಳಸಬಹುದು?: ಡೀಮ್್ಡ ವಿವಿಗಳು, ರಾಜ್ಯ ಸರ್ಕಾರಿ ವಿವಿಗಳು, ಖಾಸಗಿ ವಿವಿಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಈ ಅಂಕಗಳನ್ನು ಪ್ರವೇಶಕ್ಕೆ ಪರಿಗಣಿಸಿಬಹುದು ಅಥವಾ 12ನೇ ತರಗತಿ ಅಂಕಗಳ ಆಧಾರದಲ್ಲಿ ಇಲ್ಲವೆ ತಮ್ಮದೇ ಆದ ಪ್ರವೇಶ ಪರೀಕ್ಷೆಗಳನ್ನು ನಡೆಸಬಹುದು ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

ಚೀನಾ ಆನ್​ಲೈನ್ ಎಚ್ಚರ: ಕೋವಿಡ್ ಕಾರಣದಿಂದ ಚೀನಾ ವಿದೇಶಿ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಿದೆ. 2020ರ ನವೆಂಬರ್​ನಿಂದ ಈ ನಿರ್ಬಂಧವಿದ್ದು, ಇನ್ನೂ ಸಡಿಲಿಸಲಾಗಿಲ್ಲ. ಈ ಕಾರಣಕ್ಕಾಗಿ ಅಲ್ಲಿ ಓದುತ್ತಿದ್ದ ಭಾರತೀಯ ವಿದ್ಯಾರ್ಥಿಗಳು ಈಗಾಗಲೇ ತಾಯ್ನಾಡಿಗೆ ಮರಳಿದ್ದಾರೆ. ತರಗತಿಗಳನ್ನು ಆನ್​ಲೈನ್​ನಲ್ಲಿ ನಡೆಸಲಾಗುವುದು ಎಂದು ಚೀನಿ ಅಧಿಕಾರಿಗಳು ತಿಳಿಸಿದ್ದಾಗಿ ಗೊತ್ತಾಗಿದೆ. ಆದರೆ, ಈ ಪದವಿಯನ್ನು ಕೇವಲ ಆನ್​ಲೈನ್ ಕಲಿಕೆ ಮೂಲಕ ಪಡೆಯಲು ಯುಜಿಸಿ ಹಾಗೂ ಎಐಸಿಟಿಇ ಸಂಸ್ಥೆಗಳಿಂದ ಮಾನ್ಯತೆಯಿಲ್ಲ. ಈ ಕಾರಣಕ್ಕೆ ಆನ್​ಲೈನ್ ಮೂಲಕ ಕೋರ್ಸ್​ಗೆ ಪ್ರವೇಶ ಪಡೆದಿರುವ ಅಭ್ಯರ್ಥಿಗಳು ಎಚ್ಚರಿಕೆ ವಹಿಸಬೇಕೆಂದು ಯುಜಿಸಿ ತಿಳಿಸಿದೆ.

ಹೊಸ ಕೋರ್ಸ್​ಗಳು: ಬ್ಯಾಚುಲರ್ ಆಫ್ ಸ್ಪೋರ್ಟ್ಸ್ ಮ್ಯಾನೇಜ್​ವೆುಂಟ್, ಮಾಸ್ಟರ್ ಆಫ್ ಸ್ಪೋರ್ಟ್ಸ್ ಮ್ಯಾನೇಜ್​ವೆುಂಟ್, ಬ್ಯಾಚುಲರ್ ಆಫ್ ಸ್ಪೋರ್ಟ್ಸ್ ಸೈನ್ಸ್ ಹಾಗೂ ಮಾಸ್ಟರ್ ಆಫ್ ಸ್ಪೋರ್ಟ್ಸ್ ಸೈನ್ಸ್ ಕೋರ್ಸ್

ಬಿ.ಇಡಿ ಇನ್ನು 5 ವರ್ಷ

ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಅನ್ವಯ ಪದವಿ ಶಿಕ್ಷಣ (ಬಿ.ಇಡಿ) ವ್ಯಾಸಂಗದಲ್ಲಿ ಆಮೂಲಾಗ್ರ ಬದಲಾವಣೆ ತರುವ ಜತೆಗೆ ಐದು ವರ್ಷಗಳ ಅವಧಿಗೆ ವಿಸ್ತರಿಸಲಾಗುವುದೆಂದು ಉನ್ನತ, ಐಟಿ-ಬಿಟಿ, ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಸೋಮವಾರ ಮಾಹಿತಿ ನೀಡಿದರು. ಪರಿಷತ್​ನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್​ನ ಎಸ್.ಎಲ್.ಭೋಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಒಟ್ಟು 54 ಖಾಸಗಿ ಅನುದಾನಿತ ಬಿ.ಇಡಿ ಕಾಲೇಜುಗಳಲ್ಲಿ 236 ಹಾಗೂ ಆರು ಸರ್ಕಾರಿ ಬಿ.ಇಡಿ ಕಾಲೇಜುಗಳಲ್ಲಿ 33 ಬೋಧಕರ ಹುದ್ದೆಗಳು ಖಾಲಿಯಿದ್ದು, ಕಾಲ ಕ್ರಮೇಣ ಭರ್ತಿಗೆ ಕ್ರಮವಹಿಸಲಾಗುವುದು ಎಂಬ ಭರವಸೆ ನೀಡಿದರು. ಮಧ್ಯೆ ಪ್ರವೇಶಿಸಿದ ಬಿಜೆಪಿಯ ಅರುಣ್ ಶಹಾಪುರ, ಸರ್ಕಾರಿ ಬಿ.ಇಡಿ ಕಾಲೇಜುಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವ್ಯಾಪ್ತಿ, ಖಾಸಗಿ ಅನುದಾನಿತ ಬಿ.ಇಡಿ ಕಾಲೇಜುಗಳು ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿವೆ. ಎಲ್ಲ ಕಾಲೇಜುಗಳನ್ನು ಉನ್ನತ ಶಿಕ್ಷಣ ಇಲಾಖೆಯಡಿ ತಂದು ಗೊಂದಲ ನಿವಾರಿಸಿ, ಕಾಯಕಲ್ಪ ನೀಡಬೇಕು ಎಂದು ಸಲಹೆಯಿತ್ತಾಗ ಅಶ್ವತ್ಥ ನಾರಾಯಣ ಸಹಮತ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net