

ರಾಜಸ್ಥಾನದ ಜೈಸಲ್ಮೇರ್ನಲ್ಲಿ ಇತ್ತೀಚೆಗೆ ನಡೆದ ಸರಕು ಮತ್ತು ಸೇವಾ ತೆರಿಗೆ ಪರಿಷತ್ತಿನ (ಜಿಎಸ್ಟಿ ಕೌನ್ಸಿಲ್) ಸಭೆಯು ಯಾವುದೇ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳದೇ ಮುಕ್ತಾಯವಾಗಿದೆ. ಮಹತ್ವದ ವಿಷಯಗಳ ಬಗೆಗಿನ ತೀರ್ವನಗಳನ್ನು ಅನಿರ್ದಿಷ್ಟ ಕಾಲ ಮುಂದೂಡಿ, ಚಿಕ್ಕ ವಿಷಯಗಳ ಬಗ್ಗೆ ವಿಸõತ ಚರ್ಚೆ ನಡೆಸಿದ್ದೇ ಈ ಸಭೆಯ ಸಾಧನೆ ಎಂದು ಈ ಬಗ್ಗೆ ಆರ್ಥಿಕ ವಲಯದಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಆರೋಗ್ಯ ಮತ್ತು ಜೀವ ವಿಮಾ ಕಂತುಗಳ ಮೇಲಿನ ಜಿಎಸ್ಟಿಯನ್ನು ಕಡಿಮೆ ಮಾಡುವುದು, 148 ವಸ್ತುಗಳ ಮೇಲಿನ ಜಿಎಸ್ಟಿಯನ್ನು ಮರುಹೊಂದಾಣಿಕೆ ಮಾಡುವುದು ಸೇರಿದಂತೆ ಹಲವು ವಿಷಯಗಳು ಈ ಸಭೆಯ ಕಾರ್ಯಪಟ್ಟಿಯಲ್ಲಿ ಇದ್ದುದರಿಂದ ಇದು ಜನಸಾಮಾನ್ಯರ ಪಾಲಿಗೆ ಬಹುನಿರೀಕ್ಷೆಯ ಸಭೆಯಾಗಿತ್ತು.
ಇಡೀ ದಿನ ಸಭೆ ನಡೆದರೂ ಕೊನೆಯಲ್ಲಿ ‘ಗುಡ್ಡ ಅಗೆದು ಇಲಿ ಹಿಡಿದಂತೆ’ ಕೆಲವೇ ಕೆಲವು ಸಣ್ಣಪುಟ್ಟ ವಿಷಯಗಳ ಬಗ್ಗೆ ನಿರ್ಧಾರಗಳನ್ನು ಪ್ರಕಟಿಸಲಾಯಿತು. ಆ ಪೈಕಿ, ಪಾಪ್ಕಾರ್ನ್ಗೆ (ಜೋಳದ ಅರಳು) ಅದರ ಮಿಶ್ರಣ, ಪ್ಯಾಕೇಜಿಂಗ್ ಆಧರಿಸಿ ಬೇರೆಬೇರೆ ಸ್ತರದ ತೆರಿಗೆ ವಿಧಿಸಲು ತೀರ್ವನಿಸಲಾಯಿತು. ಉಪ್ಪು-ಖಾರ ಹಚ್ಚಿದ ಪಾಪ್ಕಾರ್ನ್ಗೆ ಶೇ. 5ರಷ್ಟು ಜಿಎಸ್ಟಿ, ಪ್ರಿಪ್ಯಾಕ್ಡ್- ಲೇಬೆಲ್ಡ್ ಪಾಪ್ಕಾರ್ನ್ಗೆ ಶೇ. 12ರಷ್ಟು ಜಿಎಸ್ಟಿ, ಹುರಿದ ಸಕ್ಕರೆ ಪುಡಿ ಸವರಿದ (ಕ್ಯಾರಮೆಲೈಸ್ಡ್) ಪಾಪ್ಕಾರ್ನ್ಗೆ ಶೇ. 18ರಷ್ಟು ಜಿಎಸ್ಟಿ ವಿಧಿಸಲಾಯಿತು. ಈ ತೀರ್ವನವಂತೂ ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೆ ಈಡಾಯಿತು. ಹೀಗೆಯೇ ಹಲವಾರು ಸಣ್ಣ ಪದಾರ್ಥಗಳಿಗೆ ಅವುಗಳ ಪ್ಯಾಕೇಜಿಂಗ್ ಮತ್ತು ಮಿಶ್ರಣ ಆಧರಿಸಿ ವಿವಿಧ ಸ್ತರದ ತೆರಿಗೆ ವಿಧಿಸಲಾಗುತ್ತಿದೆ.
ಹೀಗಾಗಿ, ತೆರಿಗೆ ಪದ್ಧತಿಯನ್ನು ಸರಳಗೊಳಿಸಬೇಕೆಂಬ ಉದ್ದೇಶದಿಂದ ಜಾರಿಗೆ ತಂದ ಜಿಎಸ್ಟಿ ವ್ಯವಸ್ಥೆಯೇ ಸಂಕೀರ್ಣವಾಗಿದೆ ಎಂಬ ಅಭಿಪ್ರಾಯ ಮೂಡಿದೆ. ನಿರ್ದಿಷ್ಟ ಶ್ರೇಣಿಯ ಬಲವರ್ಧಿತ ಅಕ್ಕಿ ಮೇಲಿನ ಜಿಎಸ್ಟಿಯ ಇಳಿಕೆ, ಜೀನ್ ಥೆರಪಿ (ವಂಶವಾಹಿ ಚಿಕಿತ್ಸೆ) ಮೇಲಿನ ಜಿಎಸ್ಟಿಗೆ ವಿನಾಯ್ತಿ ಮುಂತಾದ ಕ್ರಮಗಳನ್ನೂ ಜಿಎಸ್ಟಿ ಕೌನ್ಸಿಲ್ ಕೈಗೊಂಡಿದೆ. ತೆರಿಗೆ ವಿಧಿಸಲಿ, ಬಿಡಲಿ, ಯಾವ ವಸ್ತುವೂ ವ್ಯವಸ್ಥೆಯ ಕಣ್ತಪ್ಪಿಸಿ ಹೋಗಬಾರದು ಎಂಬುದೇನೋ ನಿಜ. ಆದರೆ ಎಲ್ಲ ವಸ್ತುಗಳ ಮೇಲೆ ನಿಗಾ ಇಡುವ ಭರದಲ್ಲಿ ಮಹತ್ವದ ವಿಷಯಗಳು ಗೌಣವಾಗಬಾರದು. ವಿಮಾ ಕಂತುಗಳ ಮೇಲಿನ ಜಿಎಸ್ಟಿಯನ್ನು ಇಳಿಸುವುದರ ಕುರಿತು ರಾಜ್ಯಗಳ ಸಚಿವರ ಸಮಿತಿಯು ಕಳೆದ ತಿಂಗಳೇ ತನ್ನ ನಿರ್ಧಾರವನ್ನು ತಿಳಿಸಿತ್ತು. ಅದನ್ನು ಪರಿಗಣಿಸುವುದಾಗಿ ಕೇಂದ್ರ ಸರ್ಕಾರವೂ ಭರವಸೆ ನೀಡಿತ್ತು. ಈ ತಿಂಗಳು ಪ್ರೀಮಿಯಂ ಕಟ್ಟಬೇಕಿದ್ದವರು ಕಂತಿನ ಮೊತ್ತ ಕಡಿಮೆಯಾಗಬಹುದೆಂದು ಕಾಯುತ್ತಿದ್ದರು. ಆದರೆ ಅವರ ನಿರೀಕ್ಷೆಯನ್ನು ಜಿಎಸ್ಟಿ ಕೌನ್ಸಿಲ್ ಹುಸಿ ಮಾಡಿತು. 148 ವಸ್ತುಗಳ ತೆರಿಗೆ ಮರುಹೊಂದಾಣಿಕೆಯ ವಿಷಯ ಕೂಡ ಅಷ್ಟೇ ಮಹತ್ವದ್ದಾಗಿತ್ತು. ಅದಕ್ಕೆ ಸಂಬಂಧಿಸಿದ ಸಚಿವರ ಸಮಿತಿ ಕೂಡ ತನ್ನ ನಿರ್ಧಾರವನ್ನು ತಿಳಿಸಿತ್ತು. ಅದನ್ನೂ ಸಹ ಕೌನ್ಸಿಲ್ ಸಭೆ ಮುಂದೂಡಿತು. ಇವೆಲ್ಲವೂ ತಕ್ಷಣ ಕೈಗೊಳ್ಳಬೇಕಾಗಿದ್ದ ನಿರ್ಧಾರಗಳಾಗಿದ್ದವು. ಜನೋಪಯೋಗಿ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದಕ್ಕೆ ಇನ್ನು ಮುಂದಾದರೂ ಜಿಎಸ್ಟಿ ಕೌನ್ಸಿಲ್ ಮೊದಲ ಆದ್ಯತೆ ನೀಡಲಿ.