

ಅಮರಾವತಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ಆಂಧ್ರಪ್ರದೇಶದಲ್ಲಿ ಭಾರಿ ಮಳೆ ಮತ್ತು ಇದರಿಂದ ಉಂಟಾಗಿರುವ ಪ್ರವಾಹದಿಂದ ಸತ್ತವರ ಸಂಖ್ಯೆ 29ಕ್ಕೆ ಏರಿದೆ. 100ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. 20 ಸಾವಿರ ಜನರನ್ನು 230 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಇಲ್ಲಿರುವವರಿಗೆ 2,000 ರೂಪಾಯಿವರೆಗೂ ಸಹಾಯಧನ ನೀಡಲಾಗುತ್ತಿದೆ.
ರಾಯಲಸೀಮಾ ಪ್ರದೇಶದಲ್ಲಿ ಹೆಚ್ಚು ಅನಾಹುತಗಳು ಆಗಿದ್ದು, ಚಿತ್ತೂರು, ಕರ್ನಲ್, ನೆಲ್ಲೂರು, ಅನಂತಪುರ, ಕಡಪಾ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಿರುವ ಕಾರಣ ಅನಾಹುತಗಳ ಸಂಖ್ಯೆಯೂ ಹೆಚ್ಚಿದೆ. ಅನಂತಪುರ ಜಿಲ್ಲೆಯ ಕದಿರಿ ಪಟ್ಟಣದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದ ಕಾರಣ ಮೂವರು ಮಕ್ಕಳು ಸೇರಿ ಐದು ಮಂದಿ ಸಾವನ್ನಪ್ಪಿದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಕಡಪಾ ಏರ್ಪೋರ್ಟ್ ಅನ್ನು ನ.25ರವರೆಗೆ ಮುಚ್ಚಲಾಗಿದೆ. ನೆರೆಗೆ ಸಿಲುಕಿ ರಾಜ್ಯ ಸಾರಿಗೆ ಸಂಸ್ಥೆಯ ಮೂರು ಬಸ್ಗಳು ಮುಳುಗಡೆಯಾಗಿದ್ದು, ಇದರಲ್ಲಿದ್ದ 12 ಮಂದಿಯನ್ನು ರಕ್ಷಿಸಲು ಆಗಲಿಲ್ಲ ಎಂದು ಪರಿಹಾರ ಕಾರ್ಯ ತಂಡಗಳು ತಿಳಿಸಿವೆ. ಅನೇಕ ಜಿಲ್ಲೆಗಳಲ್ಲಿ ಪ್ರವಾಹದಿಂದ ರಸ್ತೆಗಳು ಮತ್ತು ರೈಲು ಹಳಿಗಳು ಕೊಚ್ಚಿಹೋಗಿವೆ. ಚೆನ್ನೈ-ತಿರುಪತಿ ಮತ್ತು ಗುಂತ್ಕಲ್- ತಿರುಪತಿ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ರೇಣಿಗುಂಟ ಮತ್ತು ಪುಡಿ ವಿಭಾಗದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.
ತಿರುಪತಿಯಲ್ಲಿ ಪ್ರವಾಹ ಉಲ್ಬಣಿಸಿರುವ ಕಾರಣ ನೂರಾರು ಭಕ್ತರು ಸಂಚಾರ ಸಾಧ್ಯವಾಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಬೆಟ್ಟದ ಪಾದಚಾರಿ ಮಾರ್ಗ ಮತ್ತು ತಿರುಪತಿಯಲ್ಲಿ ವಸತಿ ಗೃಹಗಳನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮುಚ್ಚಿದೆ. ತಿರುಪತಿ ಬಳಿಯ ಸ್ವರ್ಣಮುಖಿ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿದೆ. ನೆಲ್ಲೂರಿನಲ್ಲಿ ಕಾಳಿಂಗಿ ನದಿ ಕೂಡ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, 32 ಸಾವಿರ ಹೆಕ್ಟೇರ್ ಜಮೀನಿನಲ್ಲಿದ್ದ ಬೆಳೆಗೆ ಹಾನಿಯಾಗಿದೆ.
ಸಮರೋಪಾದಿಯಲ್ಲಿ ಪರಿಹಾರ ಕಾರ್ಯ: ಪ್ರವಾಹ ಪೀಡಿತ ಪ್ರದೇಶದಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ 7 ತಂಡಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ 9 ತಂಡಗಳು ಪರಿಹಾರ ಕಾರ್ಯಗಳಲ್ಲಿ ತೊಡಗಿವೆ. ಕಡಪಾ ಜಿಲ್ಲೆಯ ಬುಗ್ಗವಂಕ ನೀರಾವರಿ ಯೋಜನಾ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಗರ್ಭಿಣಿಯನ್ನು ರಕ್ಷಿಸಲಾಗಿದೆ. ಪಾಪಾಗ್ನಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಪುರುಷರು ಮತ್ತು 15 ಎಮ್ಮೆಗಳನ್ನು ಅಗ್ನಿ ಶಾಮಕ ದಳದವರು ರಕ್ಷಿಸಿದ್ದಾರೆ.
ಅಗತ್ಯ ನೆರವಿನ ಭರವಸೆ ನೀಡಿದ ಪ್ರಧಾನಿ: ಸಿಎಂ ಜಗನ್ ಮೋಹನ್ ರೆಡ್ಡಿ ಶನಿವಾರ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಜಗನ್ ಜತೆ ದೂರವಾಣಿಯಲ್ಲಿ ಮಾತನಾಡಿ ಸಂಕಷ್ಟದಲ್ಲಿರುವ ಆಂಧ್ರಕ್ಕೆ ಕೇಂದ್ರದಿಂದ ಆಗುವ ಎಲ್ಲ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.
ಕಾಸರಗೋಡು: ಕೇರಳದ ಪತ್ತನಂತಿಟ್ಟ ಜಿಲ್ಲೆಯ ನಾನಾ ಕಡೆ ಬಿರುಸಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಭಕ್ತರಿಗೆ ಶನಿವಾರ ಪಂಪೆ ಹಾಗೂ ಸನ್ನಿಧಾನ ಪ್ರವೇಶಿಸಲು ಅವಕಾಶ ನಿರಾಕರಿಸಿ ಜಿಲ್ಲಾಧಿಕಾರಿ ದಿವ್ಯಾ ಎಸ್.ಅಯ್ಯರ್ ಆದೇಶ ಹೊರಡಿಸಿರುವುದರಿಂದ ಭಕ್ತರು ನೀಲಕಲ್ಲಿನಲ್ಲಿ ಉಳಿದುಕೊಂಡಿದ್ದಾರೆ. ಶಬರಿಮಲೆಯಲ್ಲಿ ಮಂಡಲ ಪೂಜೆ ಆರಂಭಗೊಂಡ ನಂತರ ಬಿರುಸಿನ ಮಳೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಭಕ್ತರಿಗೆ ಅವಕಾಶ ನಿರಾಕರಿಸಲಾಗುತ್ತಿದೆ. ಶುಕ್ರವಾರ ರಾತ್ರಿ 11.40ರಿಂದ ಈ ನಿಷೇಧ ಜಾರಿಗೆ ಬಂದಿದ್ದು, ಮಳೆ ಕಡಿಮೆಯಾಗುತ್ತಿದ್ದಂತೆ ವರ್ಚುವಲ್ ಕ್ಯೂ ಬುಕ್ಕಿಂಗ್ ನಡೆಸಿದವರಿಗೆ ಮೊದಲ ಪ್ರಾಶಸ್ಱದೊಂದಿಗೆ ಸನ್ನಿಧಾನ ಪ್ರವೇಶಿಸಲು ಅವಕಾಶ ನೀಡಲು ತೀರ್ವನಿಸಲಾಗಿದೆ. ಪಂಪಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಪಂಪಾ ಡ್ಯಾಮ್ ಮತ್ತು ಕಾಕ್ಕಿ-ಆಂತೋಡೆ ಅಣೆಕಟ್ಟೆಯ ಗೇಟ್ಗಳನ್ನು ತೆರೆದಿರುವ ಕಾರಣ ನದಿಯ ಕೆಳಪಾತ್ರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ತಮಿಳುನಾಡಿನಲ್ಲೂ ವ್ಯಾಪಕ ಮಳೆ ಆಗುತ್ತಿದೆ.