

ಬೆಂಗಳೂರು: ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ ಆದಮೇಲೆ ಕಿರುತೆರೆಯಲ್ಲೂ ಮಿಂಚುತ್ತಿದ್ದು, ಇದೀಗ ಇನ್ನೊಂದು ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಆ ಕುರಿತು ಖುದ್ದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ ಆಗುತ್ತಿದ್ದಂತೆ, ನಟ-ನಿರ್ದೇಶಕ ರಮೇಶ್ ಅರವಿಂದ್ ನಡೆಸಿಕೊಡುವ 'ವೀಕೆಂಡ್ ವಿದ್ ರಮೇಶ್' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಆ ಮೂಲಕ ತಮ್ಮ ಇದುವರೆಗಿನ ಜೀವನದ ಮಹತ್ವದ ಘಟನೆಗಳನ್ನು ಡಿ.ಕೆ.ಶಿವಕುಮಾರ್ ಸಾರ್ವಜನಿಕವಾಗಿ ಹಂಚಿಕೊಂಡಿದ್ದರು.
ಆ ಬಳಿಕ ಇನ್ನೊಮ್ಮೆ ಕಿರುತೆರೆ ಸ್ಟುಡಿಯೋಗೆ ಪ್ರವೇಶ ಮಾಡಿರುವ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಮನೆಮನೆಯಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಅರ್ಥಾತ್, ಕಿರುತೆರೆಯ 'ಬೊಂಬಾಟ್ ಭೋಜನ' ಕಾರ್ಯಕ್ರಮಕ್ಕೂ ಡಿಸಿಎಂ ಅತಿಥಿಯಾಗಿ ಹೋಗಿದ್ದಾರೆ. ಅಲ್ಲಿನ ಅನುಭವದ ಕುರಿತು ಅವರೇ ಮಾಹಿತಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
'ನನ್ನ ಆತ್ಮೀಯ ಸ್ನೇಹಿತ ಹಾಗೂ ನಟ ಸಿಹಿಕಹಿ ಚಂದ್ರು ಅವರು ನಡೆಸಿಕೊಡುವ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ರುಚಿಕರ ಆಹಾರ ಸವಿದೆ. ಪಾಕ ಪ್ರವೀಣರೂ ಆಗಿರುವ ಚಂದ್ರು ಅವರ ಕೈರುಚಿಯ ಅಡುಗೆ ಸವಿದು ಬಹಳ ಕಾಲವಾಗಿತ್ತು, ಅದಕ್ಕೆ ಕಾಲ ಕೈಗೂಡಿರುವುದು ಖುಷಿಯ ಸಂಗತಿ' ಎಂದು ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.