ಸಂಪಾದಕೀಯ; ಹಸಿರಿನ ಹಳಿ; ಬ್ರಾಡ್​ಗೇಜ್ ಸಂಪೂರ್ಣ ವಿದ್ಯುದೀಕರಣ ಯೋಜನೆ

4587
Published on

ಭಾರತೀಯ ರೈಲ್ವೆಯು ವಿಶ್ವದಲ್ಲೇ ನಾಲ್ಕನೆಯ ಅತಿ ದೊಡ್ಡ ರೈಲ್ವೆ ವ್ಯವಸ್ಥೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಸುಮಾರು 12.50 ಲಕ್ಷ ಉದ್ಯೋಗಿಗಳು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಜಾಗತಿಕವಾಗಿ ಬೃಹತ್ ಉದ್ಯೋಗದಾತ ಸಂಸ್ಥೆಗಳಲ್ಲಿ ಸಹ ಒಂದೆನಿಸಿದೆ. ದೇಶವ್ಯಾಪಿಯಾಗಿ ಒಟ್ಟಾರೆಯಾಗಿ 68 ಸಾವಿರ ಕಿಲೋಮೀಟರ್​ಗಳಷ್ಟು ಉದ್ದದ ಹಳಿಗಳನ್ನು ಹೊಂದಿದ್ದು, ಈ ಪೈಕಿ ಶೇ.83 ಅಂದರೆ 52 ಸಾವಿರದಷ್ಟು ಉದ್ದದ ಬ್ರಾಡ್​ಗೇಜ್ ಮಾರ್ಗಗಳ ವಿದ್ಯುದೀಕರಣ ಮಾಡಿದೆ. ಇನ್ನು ಏಳು ವರ್ಷಗಳಲ್ಲಿ ಅಂದರೆ 2030ರ ಹೊತ್ತಿಗೆ, ವಿಶ್ವದ ಅತಿ ದೊಡ್ಡ ಹಸಿರು ರೈಲ್ವೆ ವ್ಯವಸ್ಥೆಯಾಗುವ ಹೆಬ್ಬಯಕೆಯನ್ನು ಅದು ಹೊಂದಿದೆ.

ಪೆಟ್ರೋಲಿಯಂ ಆಧಾರಿತ ಇಂಧನ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಮಾಲಿನ್ಯಮುಕ್ತಗೊಳಿಸುವುದು ಮತ್ತು ಇಂಧನ ದಕ್ಷತೆಯನ್ನು ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. ಪ್ಯಾರಿಸ್ ಒಡಂಬಡಿಕೆ ಪ್ರಕಾರ, ಈ ಒಪ್ಪಂದಕ್ಕೆ ಸಹಿಹಾಕಿದ ಪ್ರತಿ ದೇಶವೂ ಮಾಲಿನ್ಯ ಮಟ್ಟ ನಿಯಂತ್ರಿಸುವಲ್ಲಿ ಬದ್ಧವಾಗಿರಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ಬೃಹತ್ ಸಂಚಾರ ಜಾಲವಾಗಿರುವ ರೈಲ್ವೆಯಲ್ಲಿ ಇಂಥ ಬದಲಾವಣೆಗಳು ಆದಲ್ಲಿ, ದೇಶದ ಒಟ್ಟಾರೆ ಮಾಲಿನ್ಯ ಮಟ್ಟ ನಿಯಂತ್ರಿಸುವಲ್ಲಿ ಸಹ ಸಹಕಾರಿಯಾಗುತ್ತದೆ. ಇದಲ್ಲದೆ, ರೈಲ್ವೆಯ ಜತೆಗೆ ದೇಶದ ಅಭಿವೃದ್ಧಿ ಸಹ ಬೆಸೆದುಕೊಂಡಿದೆಯಾದ್ದರಿಂದ, ಸಹಜವಾಗಿಯೇ ಅನುಕೂಲವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಈ ಅಂಶ ಒತ್ತಿಹೇಳಿದ್ದು, ರೈಲ್ವೆ ಆಧುನೀಕರಣಕ್ಕಾಗಿ ಕೇಂದ್ರ ಸರ್ಕಾರ ದಾಖಲೆ ಪ್ರಮಾಣದ ಹೂಡಿಕೆ ಮಾಡುತ್ತದೆ ಎಂದು ತಿಳಿಸಿದ್ದಾರೆ. ವಿ

ದ್ಯುದೀಕರಣದಿಂದಾಗಿ ಪೆಟ್ರೋಲಿಯಂ ಮೂಲಗಳ ಮೇಲಿನ ಅವಲಂಬನೆ ತಗ್ಗುತ್ತದೆ ಹಾಗೂ ಮಾಲಿನ್ಯ ಪ್ರಮಾಣ ಕಡಿಮೆಯಾಗುತ್ತದೆ ಎಂಬುದು ಹೌದಾದರೂ, ಅದಕ್ಕೆ ತಕ್ಕನಾಗಿ ನಮ್ಮ ವಿದ್ಯುತ್ ಉತ್ಪಾದನೆ ಸಹ ಹೆಚ್ಚಬೇಕಾಗುತ್ತದೆ. ವಿದ್ಯುತ್​ಗಾಗಿ ಕಲ್ಲಿದ್ದಲಿನ ಮೇಲೆ ಹೆಚ್ಚು ಪ್ರಮಾಣದಲ್ಲಿ ಅವಲಂಬಿತವಾಗಿರುವ ದೇಶದಲ್ಲಿ ಇದು ಸಹ ಒಂದು ಸವಾಲೇ ಸರಿ. ಇದರ ಜತೆಗೆ, ದೇಶದ ಅನೇಕ ಕಡೆಗಳಲ್ಲಿ ರೈಲ್ವೆ ವ್ಯವಸ್ಥೆಯ ಬೇಡಿಕೆಯಿದ್ದು, ಹಲವು ಯೋಜನೆಗಳು ದೀರ್ಘಕಾಲದಿಂದ ನನೆಗುದಿಗೆ ಬಿದ್ದಿವೆ. ಹೀಗೆ ವಿಳಂಬವಾಗಲು ನ್ಯಾಯಾಲಯದ ಮೆಟ್ಟಿಲೇರುವುದು, ಹಣಕಾಸಿನ ಅಡಚಣೆ, ಭೂ ವ್ಯಾಜ್ಯ ಇತ್ಯಾದಿ ಕಾರಣಗಳು ಇರಬಹುದಾದರೂ, ಆದಷ್ಟು ಬೇಗ ಇವನ್ನು ನಿವಾರಿಸಿಕೊಂಡು ಮುಂದಡಿ ಇಡದಿದ್ದಲ್ಲಿ, ಅಭಿವೃದ್ಧಿಯ ಮೇಲೆ ಅಷ್ಟರಮಟ್ಟಿಗೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆಯಲ್ಲದೆ, ವರ್ಷದಿಂದ ವರ್ಷಕ್ಕೆ ವೆಚ್ಚ ಸಹ ಹೆಚ್ಚುತ್ತ ಹೋಗಿ ಸರ್ಕಾರದ ಬೊಕ್ಕಸಕ್ಕೆ, ಅಂತಿಮವಾಗಿ ಜನರಿಗೆ ಇನ್ನಷ್ಟು ಹೊರೆಯಾಗುತ್ತದೆ. ಅಲ್ಲದೆ, ಆಯಾ ಭಾಗದ ಜನರು ಸೇವೆಯಿಂದ ವಂಚಿತರಾಗುವಂತಾಗುತ್ತದೆ.

ರೈಲ್ವೆ ಸುಧಾರಣೆಗಾಗಿ, ಉನ್ನತೀಕರಣಕ್ಕಾಗಿ ಅಪಾರ ಪ್ರಮಾಣ ಬಂಡವಾಳ ಅಗತ್ಯವಿದ್ದು, ಆಸ್ತಿ ನಗದೀಕರಣ ಸೇರಿದಂತೆ ವಿವಿಧ ಮಾಗೋಪಾಯಗಳನ್ನು ಸರ್ಕಾರ ಅನ್ವೇಷಿಸುತ್ತಿದೆ. ಈ ಕಾರಣಕ್ಕಾಗಿ ಹಿಂದಿನ ಬಜೆಟ್​ನಲ್ಲಿ ಹೊಸ ಹೊಸ ಯೋಜನೆಗಳ ಘೋಷಣೆಯ ಸಾಹಸಕ್ಕೆ ಕೈಹಾಕದೆ, ಜಾರಿಯಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸುವತ್ತ ಗಮನಹರಿಸುವುದಾಗಿ ಸರ್ಕಾರ ಹೇಳಿತ್ತು. ಹೈಪರ್​ಲೂಪ್​ನಂಥ ಪರಿಕಲ್ಪನೆಗಳು ವಾಸ್ತವವಾಗಬಹುದು ಎಂಬ ವರ್ತಮಾನದ ಸನ್ನಿವೇಶದಲ್ಲಿ ಭಿನ್ನ ರೀತಿಯಲ್ಲಿ ಯೋಚಿಸಿ, ಯೋಜನೆಗಳನ್ನು ರೂಪಿಸಿ, ಸಮಯಮಿತಿಯಲ್ಲಿ ಕಾರ್ಯಗತಗೊಳಿಸಬೇಕಾದುದು ಅನಿವಾರ್ಯ ಅಗತ್ಯ. ಆ ನಿಟ್ಟಿನಲ್ಲಿ ಭಾರತೀಯ ರೈಲ್ವೆ ದೃಢ ಹೆಜ್ಜೆಯಿಡಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net